ಸಮಾಜವನ್ನು ಆತ್ಮ ಜಾಗೃತಿಯೆಡೆಗೆ ಒಯ್ಯುವುದೇ ಮುಖ್ಯ ಆಶಯ

| Published : Nov 26 2023, 01:15 AM IST

ಸಾರಾಂಶ

ವಿದೇಶ ಸಂಸ್ಕೃತಿ, ಭಾಷೆ, ವೇಷ, ಆಹಾರ ಸೇರಿದಂತೆ ಅನೇಕ ಸಂಗತಿ ನೋಡುತ್ತಿದ್ದೇವೆ. ನಮ್ಮ ತನ ಮರೆತು ಅತ್ತ ವಾಲುತ್ತಿದ್ದೇವೆ.

ಶಿರಸಿ:

ಸಮಾಜದಲ್ಲಿರುವ ತನ್ನ ತನದ ಮರೆವನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿ ನುಡಿದರು.

ಅವರು ಸ್ವರ್ಣವಲ್ಲೀಯ ಸುಧರ್ಮಾ ಸಭಾಂಗಣದಲ್ಲಿ ಹಮ್ಮಿಕೊಂಡ ಶ್ರೀಮಠದ ಅಂಗ ಸಂಸ್ಥೆಯಾದ ಶ್ರೀಭಗವತ್ಪಾದ ಪ್ರಕಾಶನದ ಮಹೋತ್ಸವದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ‌ ನುಡಿದರು.೨೫ ವರ್ಷಗಳ ಹಿಂದೆ ಸ್ವರ್ಣವಲ್ಲೀ ಪ್ರಭಾ, ಶ್ರೀಭಗವತ್ಪಾದ ಪ್ರಕಾಶನ ಆರಂಭವಾಗಿದೆ. ಆತ್ಮ ವಿಸ್ಮೃತಿ ಬಗ್ಗೆ ಸಮಾಜ ಹೋಗುತ್ತಿರುವ ವೇಳೆ ಈ ಬಗ್ಗೆ ಜಾಗೃತಿ‌ ಮೂಡಿಸುವುದೇ ಮುಖ್ಯ ಆಶಯವಾಗಿದೆ. ಸಮಾಜವನ್ನು ಆತ್ಮ‌ ಜಾಗೃತಿಯತ್ತ ತರುವುದೇ ಪ್ರಕಾಶನದ ಆಶಯವಾಗಿದೆ. ಕೆಲವು ಸಲ ಗೊತ್ತಿಲ್ಲದೇ, ಕೆಲವು ಗೊತ್ತಿದ್ದೂ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ನಾವು ಇನ್ನೇನೋ ಆಕರ್ಷಣೆಯಿಂದ ನೋಡುತ್ತಿದ್ದೇವೆ. ನಮ್ಮ ತನ ಮರೆಯುತ್ತಿದ್ದೇವೆ ಎಂದೂ ಹೇಳಿದರು.

ಇಂದು ವಿದೇಶ ಸಂಸ್ಕೃತಿ, ಭಾಷೆ, ವೇಷ, ಆಹಾರ ಸೇರಿದಂತೆ ಅನೇಕ ಸಂಗತಿ ನೋಡುತ್ತಿದ್ದೇವೆ. ನಮ್ಮ ತನ ಮರೆತು ಅತ್ತ ವಾಲುತ್ತಿದ್ದೇವೆ. ಒಳ್ಳೆಯ ಸಂಗತಿ ಇದ್ದರೆ ವಿದೇಶದ್ದು ಕೂಡ ಪಡೆಯಬಹುದು. ಆದರೆ, ನಮ್ಮದು ಚೆನ್ನಾಗಿದ್ದರೂ ಇನ್ನೊಂದರೆಡೆ ಮರೆತು ಆಕರ್ಷಿತರಾಗುತ್ತಿರುವುದು ಸರಿಯಲ್ಲ ಎಂದ ಶ್ರೀಗಳು, ನಮ್ಮದು ಮರೆತು ಹೋಗುತ್ತಿರುವುದು ಸರಿಯಲ್ಲ. ತನ್ನ ಬಗ್ಗೆ ವಿಸ್ಮೃತಿ ಕೂಡ‌ ಮರೆಯಬಾರದು ಎಂದೂ ಹೇಳಿದರು‌.

ಸಂದೇಶ ಮಾಲಿಕಾ ಎಂಬ ಕೃತಿ ಬಿಡುಗಡೆಗೊಳಿಸಿದ ಅದಮ್ಯ ಚೇತನದ ಡಾ. ತೇಜಸ್ವಿನಿ ಅನಂತಕುಮಾರ ಮಾತನಾಡಿ, ಮನುಷ್ಯ ಅಭಿವೃದ್ಧಿ ಹೆಸರಿನಲ್ಲಿ ಏನೆಲ್ಲ‌ ಮಾಡಿರಬಹುದು. ಆದರೆ, ಪ್ರಕೃತಿಯ ಕೊಡುಗೆಯಲ್ಲಿ ಶೇ. ೧ರಷ್ಟೂ ಮನುಷ್ಯ ಮಾಡಲು ಆಗಲಿಲ್ಲ. ಪುರಾಣ ಇಂದು‌ ಇತಿಹಾಸ ಆಗಿದ್ದರ ಬಗ್ಗೆ ದಾಖಲೆಗಳು ಸಿಕ್ಕಿ ವೆ. ಆದರೆ ಕಳೆದ ೫೦ ವರ್ಷದಲ್ಲಿ‌ ಪರಿಸರ ನಾಶ ಮಾಡುತ್ತ ಅಭಿವೃದ್ಧಿಯತ್ತ ಸಾಗಿದ್ದೇವೆ. ನಮ್ಮ‌ ಶಿಕ್ಷಣ ಬೇಡ ಎಂದು ಹೇಳುವುದಕ್ಕಿಂತ ಬೇಕು ಎಂದು ಹೇಳುವಂತೆ ಮಾಡುತ್ತಿದೆ ಎಂದರು.

ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಡಾ‌. ನಿರಂಜನ ವಾನಳ್ಳಿ, ಲಾಭದ ಉದ್ದೇಶ ಇಲ್ಲದೇ ಪತ್ರಿಕೆ ನಡೆಯುವುದು ದೊಡ್ಡ ಸಂಗತಿ. ಕನ್ನಡಕ್ಕೆ ಕೂಡ ಅನುಪಮ ಕೊಡುಗೆಯಾಗಿದೆ‌. ಕನ್ನಡ ಪತ್ರಿಕೆಗಳು ಆಂಗ್ಲ ಭಾಷೆಯ ಶೀರ್ಷಿಕೆ ಬಳಸುವುದು ಕನ್ನಡದ ಶಬ್ದ ಇದ್ದರೂ ಜಾಗತೀಕರಣದ ಪ್ರಭಾವ ಇರಬಹುದು

ಎಂದು ಹೇಳಿದರು.

ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ನೈತಿಕತೆ, ಪ್ರಾಮಾಣಿಕತೆ, ಧರ್ಮದಲ್ಲಿ ನಿಷ್ಠೆ ಕಡಿಮೆ ಆಗುತ್ತಿರುವ ನಡುವೆ, ಇಂತಹ ವಿಚಾರದಲ್ಲಿ ಶ್ರೀಮಠ ಅತ್ಯಂತ ಎತ್ತರದಲ್ಲಿದೆ ಎಂದ ಅವರು ಬೆಂಗಳೂರು ಅನಂತಕುಮಾರ ಅವರು ಇದ್ದಿದ್ದರೆ‌ ಜಿಲ್ಲೆಯ ಅನೇಕ ತಲ್ಲಣಗಳಿಗೆ ತಾರ್ಕಿಕ ಅಂತ್ಯ‌ ಕಾಣಿಸುತ್ತಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಡಾ. ವಿಜಯ ಸಂಕೇಶ್ವರ, ಜ್ಞಾನಾರ್ಜನೆ ಆಗಬೇಕಾದರೆ ಸನಾತನ ಧರ್ಮದ ಬಗ್ಗೆ ಪುಸ್ತಕ ರೂಪದಿಂದ ಓದಬೇಕು ಎಂದರು.

ವೇದಿಕೆಯಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಪ್ರಕಾಶನದ ಕಾರ್ಯದರ್ಶಿ ಪ್ರೊ. ಕಮಲಾಕರ ವಿ. ಭಟ್ಟ ನಿರೂಪಿಸಿದರು. ಜಿ.ಎನ್. ಕೋಮಾರ ವಂದಿಸಿದರು. ಇದೇ ವೇಳೆ ಅಧ್ಯಾತ್ಮ ಪ್ರಕಾಶ ಸಂಸ್ಥೆ ಪರವಾಗಿ ಶ್ರೀಮಠದಿಂದ ಲಕ್ಷ್ಮೀಶ ಭಟ್ಟ ಅವರು ಸಮ್ಮಾನ ಸ್ವೀಕರಿಸಿದರು.

ಬಳಿಕ ಪಂಡಿತ್ ಗಣಪತಿ ಭಟ್ ಗಾಯನ ಕಾರ್ಯಕ್ರಮ ನಡೆಯಿತು.ಸೇವೆ ಆಗಬೇಕಾದದ್ದು ವ್ಯಾಪಾರೀಕರಣವಾಗಿದೆ. ಹುಟ್ಟಿನಿಂದ ಜೀವನದ ಕೊನೇ ತನಕ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಾರೀಕರಣ ಆಗಿದೆ. ಒಳ್ಳೆ ಸಂಬಳ, ಒಳ್ಳೆ ಅಂಕ ಎಲ್ಲವಕ್ಕೂ ಸ್ಪರ್ಧೆ ಹೆಚ್ಚಾಗಿದೆ. ಮಾರ್ಕ್ಸ ಯಂತ್ರಗಳಾಗಿವೆ. ಅಸೂಯೆ ಕೂಡ ಹೆಚ್ಚಾಗಿದೆ. ನಾನು ಹೋಗಲಿಲ್ಲ ಎಂದರೂ ಅವನನ್ನು ಕೆಳಗೆ ಹಾಕುವುದು ಹೇಗೆ ಎಂಬುದು ನೋಡುತ್ತಾರೆ. ಈ ನಾಲ್ಕನ್ನು ಹೋಗಲಾಡಿಸುವುದು ಹೇಗೆ ಎಂದು ತೇಜಸ್ವಿನಿ ಅನಂತಕುಮಾರ ಹೇಳಿದರು.

ಕನ್ನಡ ಅಂಕೆ ಬಳಸಿದರೆ ಮಕ್ಕಳಿಗೆ ತಿಳಿಯದೇ ಇರುವ ಸ್ಥಿತಿ‌ ನಿರ್ಮಾಣ ಆಗಿದೆ. ಕೊರೋನಾ ನಂತರ ಪತ್ರಿಕೆ ಓದುವವರು ಕೂಡ‌ ಕಡಿಮೆ ಆಗಿದೆ. ಪತ್ರಿಕೆಯ ಮೇಲೆ ಪರಿಣಾಮ ಕೆಟ್ಟದಾಗಿದೆ. ಎಷ್ಟೋ ಕಡೆ ವಾರಗಟ್ಟಲೆ ಪತ್ರಿಕೆ ಹಾಳಿ ಬಿಡಿಸದೇ ಇರುವದೂ ಇದೆ. ಮೊಬೈಲ್ ಮಾಹಿತಿಗೇ ಸೀಮಿತ ಆಗುತ್ತಿದ್ದಾರೆ ಎಂದು ಡಾ. ವಿಜಯ ಸಂಕೇಶ್ವರ ಉದ್ಯಮಿ ತಿಳಿಸಿದ್ದಾರೆ.