ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಯಾರೇ ಸ್ಪರ್ಧೆಗಿಳಿದರೂ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಯವಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಶನಿವಾರ ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮನ್ಮುಲ್ ಆಡಳಿತ ಮಂಡಳಿ ನಾಮ ನಿರ್ದೇಶಕರಾಗಿ ಆಯ್ಕೆಯಾದ ಹರೀಶ್ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಲು ಅವಕಾಶವಿದೆ. ಮಂಡ್ಯ ಕ್ಷೇತ್ರದಿಂದ ಎಚ್ .ಡಿ .ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಥವಾ ಸಿ. ಎಸ್. ಪುಟ್ಟರಾಜು ಸೇರಿ ಯಾರೇ ಸ್ಪರ್ಧಿಸಿದರೂ ನಮ್ಮ ಸ್ವಾಗತವಿದೆ ಎಂದರು.ಚುನಾವಣೆಯಲ್ಲಿ ಪರಸ್ಪರ ಸ್ಪರ್ಧೆ ಇರುತ್ತದೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಮ್ಮ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ(ಸ್ಟಾರ್ ಚಂದ್ರು) ಸಮರ್ಥರಾಗಿದ್ದಾರೆ. ನಾವು ಅವರನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ಹೇಳಿದರು.
ಎಚ್. ಡಿ.ಕುಮಾರಸ್ವಾಮಿ ಎಲ್ಲಾ ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಆದರೆ, ಅವರಂತಹ ಕೀಳುಮಟ್ಟದ ರೀತಿಯಲ್ಲಿ ಮಾತನಾಡುವ ಜಾಯಮಾನ ನಮ್ಮದಲ್ಲ. ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಹ ಯಾವುದೇ ಗುಲಾಮಗಿರಿ ಸಂಸ್ಕೃತಿ ಇಲ್ಲ. ಪಕ್ಷದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಹೊರಗಿನಿಂದ ಬಂದು ಪಕ್ಷದ ಸಂಘಟನೆಗೆ ದುಡಿದ ಕಟ್ಟ ಕಡೆಯ ವ್ಯಕ್ತಿಗಳು ನಾಯಕರಾಗಿ ಬೆಳವಣಿಗೆ ಸಾಧಿಸಿದ್ದಾರೆ. ಇಂತಹ ಸಂಸ್ಕೃತಿ ಜೆಡಿಎಸ್ ಪಕ್ಷದಲ್ಲಿ ಇಲ್ಲ ಎಂದು ತಿರುಗೇಟು ನೀಡಿದರು.ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿ ಇದೆ ಎನ್ನುವುದು ಕುಮಾರಸ್ವಾಮಿಯವರ ತಪ್ಪು ಕಲ್ಪನೆಯಾಗಿದೆ. ಚುನಾವಣಾ ಸಮಯದಲ್ಲಿ ಬೇರೆ ಪಕ್ಷದ ರಾಜಕಾರಣಿಗಳ ಬಗ್ಗೆ ಟೀಕೆ ಮಾಡಿದರೆ ಅದರಲ್ಲಿ ಗಂಭೀರತೆ ಇರಬೇಕು. ಅವರು ಎಲ್ಲರ ವಿರುದ್ಧವೂ ಲಘುವಾಗಿ ಮಾತನಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ಬರದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು. ಆದರೆ, ಆ ಪಕ್ಷ ಹೀನಾಯ ಪರಿಸ್ಥಿತಿಗೆ ಬಂದು ನಿಂತರೂ ಸಹ ಅವರು ಯಾವುದನ್ನು ಕಾರ್ಯಗತಕ್ಕೆ ತರಲಿಲ್ಲ ಎಂದು ಲೇವಡಿ ಮಾಡಿದರು.ಈ ವೇಳೆ ಶಾಸಕ ಕೆ.ಎಂ .ಉದಯ್, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು), ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ .ಸಿ. ಜೋಗಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್ .ದಿವಾಕರ್, ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಅಮರಬಾಬು, ಮಾಜಿ ಸದಸ್ಯ ಡಾಬಾ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ್, ಮುಖಂಡರಾದ ಅರುಣ, ಶಿವಲಿಂಗಯ್ಯ, ದೇವರಾಜು, ಅವಿನಾಶ್ ಮತ್ತಿತರರು ಇದ್ದರು.