ಮಂತ್ರಿಯಾಗಿರುವ ದುರಂಕಾರ, ಬಾಯಿಗೆ ಬಂದಂತೆ ಮಾತು: ಸುರೇಶ್ ಗೌಡ ತಿರುಗೇಟು

| Published : Mar 17 2024, 01:48 AM IST

ಮಂತ್ರಿಯಾಗಿರುವ ದುರಂಕಾರ, ಬಾಯಿಗೆ ಬಂದಂತೆ ಮಾತು: ಸುರೇಶ್ ಗೌಡ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿಗೆ ರಾಜಕಾರಣದ ಅನುಭವ ಕಡಿಮೆ. ಆದರೆ, ಕಡಿಮೆ ಕುಳ ಅಲ್ಲ. ದುಡ್ಡು ಇರುವವರೆಲ್ಲ ಆತನ ಹತ್ತಿರ ಹೋಗುತ್ತಾರೆ, ಅದೇ ಅವನ ಅದೃಷ್ಟ. ಕೆರೆ ನೀರೆಲ್ಲ ನದಿಗೆ ಹೋಗುತ್ತದೆ. ನದಿ ನೀರೇಲ್ಲ ಸಮುದ್ರಕ್ಕೆ ಹೋಗುತ್ತದೆ. ಅದೇ ರೀತಿ ದುಡ್ಡಿರುವವರೆಲ್ಲ ಅವರ ಬಳಿ ಹೋಗುತ್ತಾರೆ. ಏನಾದರೂ ಮಾಡಿ ದುಡ್ಡಿನಿಂದ ಅಧಿಕಾರ ಪಡೆಯಲು ತೀರ್ಮಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂತ್ರಿಯಾಗಿದ್ದೇನೆ ಎಂಬ ದುರಂಕಾರ ಬಾಯಿಗೆ ಬಂದಂತೆ ಮಾತನಾಡಿಸುತ್ತಿದೆ ಎಂದು ಹೊಟ್ಟೆಪಾಡಿಗೆ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೋಗಿದ್ದಾರೆ ಎಂಬ ಚಲುವರಾಯಸ್ವಾಮಿಯವರ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದರು.

ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾರ್‍ಯಾರು ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿ ಬಂದ್ರು, ಏನೇನು ಮಾಡಿದ್ರು ಎಂಬುದು ತೆರೆದಿಟ್ಟ ಪುಸ್ತಕ. ಇವರನ್ನು ಮಂತ್ರಿ ಮಾಡಿ ಬಿಟ್ಟಿದ್ದಾರೆ. ಬೇಡಾ ಕಣಯ್ಯ ಕಾಟಾ. ದುರಂಕಾರ ಆತನ ಕೈಯಲ್ಲಿ ಮಾತನಾಡಿಸುತ್ತಿದೆ ಎಂದು ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನವರು ನಮಗೆ ಮೋಸ ಮಾಡಿದರು, ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಮತ್ತೊಬ್ಬರು ಡ್ರಾಮಾ ಮಾಡಿದೆ ಅಂದ್ರು. ಆದರೆ, ಮೈತ್ರಿ ಧರ್ಮ ಪಾಲಿಸದವರಿಗೆ ಪಕ್ಷದಿಂದ ಒಂದು ನೋಟಿಸ್ ಕೂಡ ಕೊಟ್ಟಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ರಾಜಕಾರಣದ ಅನುಭವ ಕಡಿಮೆ. ಆದರೆ, ಕಡಿಮೆ ಕುಳ ಅಲ್ಲ. ದುಡ್ಡು ಇರುವವರೆಲ್ಲ ಆತನ ಹತ್ತಿರ ಹೋಗುತ್ತಾರೆ, ಅದೇ ಅವನ ಅದೃಷ್ಟ. ಕೆರೆ ನೀರೆಲ್ಲ ನದಿಗೆ ಹೋಗುತ್ತದೆ. ನದಿ ನೀರೇಲ್ಲ ಸಮುದ್ರಕ್ಕೆ ಹೋಗುತ್ತದೆ. ಅದೇ ರೀತಿ ದುಡ್ಡಿರುವವರೆಲ್ಲ ಅವರ ಬಳಿ ಹೋಗುತ್ತಾರೆ. ಏನಾದರೂ ಮಾಡಿ ದುಡ್ಡಿನಿಂದ ಅಧಿಕಾರ ಪಡೆಯಲು ತೀರ್ಮಾನ ಮಾಡಿದ್ದಾರೆ ಎಂದು ಸಚಿವರ ಕುರಿತು ಲೇವಡಿ ಮಾಡಿದರು.

ನಾಗಮಂಗಲ ತಾಲೂಕು ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಸೇರಿದೆ. ನಾವು ಹಾಸನ ಜಿಲ್ಲೆಯಲ್ಲಿ ಇದ್ದೆವು. ಚಲುವರಾಯಸ್ವಾಮಿ ಅವರಿಗೆ ಇತಿಹಾಸ ಗೊತ್ತಿಲ್ಲ ಪಾಪಾ. ಹಾಗಾದ್ರೆ ನಮ್ಮನ್ನು ಹೊರಗಿನವರು ಅಂತೀರಾ? ಎಂದು ನಾಟಿ ಬ್ರೀಡ್ ಚುನಾವಣೆ ಮಾಡುತ್ತೇವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

ಮಂಡ್ಯ ಕ್ಷೇತ್ರ ಬಿಜೆಪಿಗೆ ಬಿಟ್ಟಿಕೊಟ್ಟಿದ್ದರೆ ನಾನು ಮೈತ್ರಿ ಪರ ಮಾಡಬೇಕಿತ್ತು. ನಾವು ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ನಾವು ಕಾಂಗ್ರೆಸ್ ನವರಂತೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿ ಮೋಸದಿಂದ ಅನ್ಯಾಯವಾಗಿ ಸೋತ ನಿಖಿಲ್ ಅಭ್ಯರ್ಥಿ ಆಗಬೇಕೆಂಬುದು ಮತದಾರರ ಆಸೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಗೊಂದಲ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕಾರ್ಯಕರ್ತರ ಆಸೆಗೆ ನಿರಾಸೆ ಬಾರದ ರೀತಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಪರೇಷನ್ ಇದೆ. ಅದು ಮುಗಿದ ಬಳಿಕ ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.

ಸಂಸದೆ ಸುಮಲತಾ ಅವರ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ‌. ಅಂಬರೀಶ್ ಅಣ್ಣ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆವು,, ಬರುತ್ತಿದ್ದೆವು.

ಅಕ್ಕ ಅಂತ ಕರಿಯುತ್ತಿದ್ದೆವು, ಇವಾಗಲೂ ಅಕ್ಕ ಎಂದೇ ಕರೆಯೋದು. ರಾಜಕೀಯದಲ್ಲಿ ಎಂತ ಎಂತವರೋ ಒಂದಾಗುತ್ತಾರೆ, ಇದ್ಯಾವುದಪ್ಪ ಎಂದು ಪ್ರಶ್ನೆಗೆ ಉತ್ತರಿಸಿದರು.

ಅಧಿಕಾರ, ಹಣ ಇರುವವರು ಏನಾದರೂ ಮಾತನಾಡಲಿ. ಆದರೆ, ಮಂಡ್ಯಕ್ಕೆ ಕುಮಾರಸ್ವಾಮಿ ಅಥವಾ ನಿಖಿಲ್ ಬರುತ್ತಾರೆ. ನಮ್ಮ ಅಭ್ಯರ್ಥಿಯನ್ನು ಪಕ್ಷ ತೀರ್ಮಾನ ಮಾಡುತ್ತದೆ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.