ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಶನಿವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 78.90 ಲಕ್ಷ ಮತದಾರರಿದ್ದಾರೆ, ಈ ಪೈಕಿ 40.61 ಲಕ್ಷ ಪುರುಷ, 38.27 ಲಕ್ಷ ಮಹಿಳೆ ಹಾಗೂ 1,458 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಮಾರ್ಚ್ 25ರ ವರೆಗೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.ಏಪ್ರಿಲ್ 26ರ ಮತದಾನಕ್ಕೆ ಒಟ್ಟು 8,989 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುವುದು.
ಚುನಾವಣಾ ಕಾರ್ಯಕ್ಕೆ ಒಟ್ಟು 47 ಸಾವಿರ ಅಧಿಕಾರಿ ಸಿಬ್ಬಂದಿ ಬಳಕೆ ಮಾಡಲಾಗುವುದು. ಪ್ರತಿ ಮತಗಟ್ಟೆಗೆ ತಲಾ ಒಂದು ಇವಿಎಂ ಹಾಗೂ ಶೇ.35 ರಷ್ಟು ಹೆಚ್ಚುವರಿ ಇವಿಎಂಗಳನ್ನು ಬಳಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 3 ಚಕ್ ಪೋಸ್ಟ್ ರಚನೆ ಮಾಡಲಾಗುವುದು. ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಒಂದು ಹಾಗೂ ಮೂರು ಅಪರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ತಲಾ ಒಂದು ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಒಟ್ಟು 104 ಚಕ್ ಪೋಸ್ಟ್ ಸ್ಥಾಪನೆ, 679 ಸೆಕ್ಟರ್ ಅಧಿಕಾರಿ, 297 ಫ್ಲೈಯಿಂಗ್ ಸ್ಕ್ವಾಡ್, 226 ವಿಎಸ್‌ಟಿ ಹಾಗೂ 339 ಎಸ್‌ಎಸ್‌ಟಿ ತಂಡ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಮನೆಯಲ್ಲಿ ಮತದಾನಕ್ಕೆ ನಾಳೆಯಿಂದ ಅರ್ಜಿ ವಿತರಣೆ: ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಹಾಗೂ ಶೇ.40ಕ್ಕಿಂತ ಹೆಚ್ಚಿನ ಅಂಗ ವಿಕಲತೆ ಉಳ್ಳವರಿಗೆ ಮನೆಯಲ್ಲಿ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಅಪರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ 12 ಡಿ ಅರ್ಜಿ ವಿತರಣೆ ಮಾಡಲಾಗುವುದು.
ಭರ್ತಿ ಮಾಡಿದ ಅರ್ಜಿ ಸಲ್ಲಿಕೆಯಾದ ಅರ್ಜಿ ಪರಿಶೀಲಿಸಿ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುವುದು. ನಗರದಲ್ಲಿ ಒಟ್ಟು 1.12 ಲಕ್ಷ 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು
ಅತಿ ಕಡಿಮೆ ಮತದಾನದ ಮತಗಟ್ಟೆ ಗುರುತು: ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಈ ಪೈಕಿ 1786 ಮತಗಟ್ಟೆಯಲ್ಲಿ ಶೇ.10ಕ್ಕಿಂತ ಕಡಿಮೆ ಮತದಾನವಾಗಿದೆ. ಉಳಿದಂತೆ 500 ಮತಗಟ್ಟೆಯಲ್ಲಿ ಶೇ.15ಕ್ಕಿಂತ ಕಡಿಮೆ ಹಾಗೂ 800 ಮತಗಟ್ಟೆಯಲ್ಲಿ ಶೇ.20ಕ್ಕಿಂತ ಕಡಿಮೆ ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
6.22 ಲಕ್ಷ ಮತದಾರರು ಹೆಚ್ಚಳ: ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 5 ವರ್ಷದಲ್ಲಿ ಬರೋಬ್ಬರಿ 6,22,047 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಈ ಪೈಕಿ 2,80,572 ಪುರುಷರು, 3,41,254 ಮಹಿಳೆಯರು ಹಾಗೂ 221 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಮತದಾರರ ವಿವರ-2024: ಲೋಕಸಭಾ ಕ್ಷೇತ್ರ ಪುರುಷ ಮಹಿಳೆ ಇತರೆ ಒಟ್ಟು ಬೆಂಗಳೂರು ಉತ್ತರ:16,29,08915,44,41559431,74,098
ಬೆಂಗಳೂರು ಕೇಂದ್ರ: 12,36,89711,61,548465 23,98,910. ಬೆಂಗಳೂರು ದಕ್ಷಿಣ:11,95,28511,21,78839923,17,472 ಒಟ್ಟು40,61,27138,27,7511,45878,90,480
24 ವಿಧಾನಸಭಾ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆಗೆ: ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 24 ವಿಧಾನಸಭಾ ಕ್ಷೇತ್ರಗಳು ಮಾತ್ರ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿವೆ. ಉಳಿದ ನಾಲ್ಕುರ ಪೈಕಿ ಆರ್ ಆರ್ ನಗರ, ಬೆಂಗಳೂರು ದಕ್ಷಿಣ ಹಾಗೂ ಅನೇಕಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ, ಯಲಹಂಕ ವಿಧಾನಸಭಾ ಕ್ಷೇತ್ರವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.
ವಯೋಮಿತಿ ಆಧಾರಿತ ಮತದಾರರ ಸಂಖ್ಯೆ ವಯಸ್ಸು ಮತದಾರರ ಸಂಖ್ಯೆ: 18-191,12,24220-2913,20,38330-3925,63,30740-4925,90,77250-5915,44,42960-699,29,11270-795,41,33980-891,93,48590-9944,296100-1094,177110-11916120+19 ಪಕ್ಷ, ಅಭ್ಯರ್ಥಿಗಳು ಕುಡಿಯುವ ನೀರು ಪೂರೈಸುವಂತಿಲ್ಲಚುನಾವಣೆ ಹಾಗೂ ಮತದಾರರಿಗೆ ಆಮಿಷದಾಸೆಯ ಉದ್ದೇಶದಿಂದ ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಕಡೆ ಪಕ್ಷ ಹಾಗೂ ಅಭ್ಯರ್ಥಿಯ ಪರವಾಗಿ ಕುಡಿಯುವ ನೀರಿನ ಪೂರೈಕೆಯನ್ನೂ ಸಹ ಮಾಡುವಂತಿಲ್ಲ.
ಅದು ಸಹ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಸೇವಾ ಭಾವನೆಯಿಂದ ನೀರು ಪೂರೈಕೆ ಮಾಡಿದರೆ ಯಾವುದೇ ಅಭ್ಯಂತರವಿಲ್ಲ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಜನಪ್ರತಿನಿಧಿಗಳ ಭಾವಚಿತ್ರ ತೆರವಿಗೆ ತುಷಾರ್ ಸೂಚನೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ಹಾಗೂ ಜಾಹೀರಾತು ತೆರವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚುನಾವಣೆ ಸಿದ್ಧತೆ ಕುರಿತು ಶನಿವಾರ ಮಲ್ಲೇಶ್ವರ ಐಪಿಪಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಭಿತ್ತಿಪತ್ರ, ಗೋಡೆ ಬರಹಗಳು ಇರುವಂತಿಲ್ಲ.
ಯಾರಾದರು ಪೋಸ್ಟರ್, ಬ್ಯಾನರ್ ಹಾಕಿದರೆ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ಇದ್ದರೆ ಕೂಡಲೇ ಕಾಣದಂತೆ ಮುಚ್ಚಬೇಕು. ಇಲ್ಲವೇ ತೆರವು ಮಾಡುವಂತೆ ಸೂಚಿಸಿದರು.
ನೀತಿ ಸಂಹಿತೆ ಜಾರಿಯಾದ 24 ಗಂಟೆಯಲ್ಲಿ ಸರ್ಕಾರಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ರಾಜಕೀಯ ಪ್ರತಿನಿಧಿಗಳ ಛಾಯಾಚಿತ್ರ ತೆಗೆಯಬೇಕು. ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ(RO), ಮತದಾರ ನೋಂದಣಾಧಿಕಾರಿ(ARO) ಅವರ ಕಚೇರಿಗಳಲ್ಲಿ 24 ಗಂಟೆಯೊಳಗಾಗಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು.
ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾವಹಿಸಲು ಎಫ್‌ಎಸ್‌ಟಿ, ಎಸ್‌ಎಸ್‌ಟಿ ಸೇರಿದಂತೆ ಇನ್ನಿತರೆ ತಂಡಗಳನ್ನು ಸಕ್ರಿಯಗೊಳಿಸಬೇಕು. ಜತೆಗೆ ಪ್ರಮುಖ ಸ್ಥಳಗಳಲ್ಲಿ ಕೂಡಲೇ ಚೆಕ್ ಪೋಸ್ಟ್ ಅಳವಡಿಸಬೇಕೆಂದು ಸೂಚಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾಲಕಾಲಕ್ಕೆ ಚುನಾವಣಾ ಆಯೋಗದಿಂದ ಬರುವ ನಿರ್ದೇಶನ, ಸುತ್ತೋಲೆಗಳನ್ನು ಸರಿಯಾಗಿ ಪಾಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ.ಹರೀಶ್ ಕುಮಾರ್, ಡಾ.ಕೆ.ದಯಾನಂದ್, ವಿನೋತ್ ಪ್ರಿಯಾ ಉಪಸ್ಥಿತರಿದ್ದರು.