ಖರ್ಗೆ ಹೋಮ್‌ ಪಿಚ್‌ನಲ್ಲಿ ಮೋದಿ ಭರ್ಜರಿ ಬ್ಯಾಟಿಂಗ್‌

| Published : Mar 17 2024, 01:48 AM IST / Updated: Mar 17 2024, 12:26 PM IST

ಸಾರಾಂಶ

ಬಿಸಿಲೂರಿನ ಎನ್‌ವಿ ಮೈದಾನದಲ್ಲಿ 45 ನಿಮಿಷಕಾಲ ಮಾತನಾಡಿದರೂ ಸಹ ಎಐಸಿಸಿ ಅಧ್ಯಕ್ಷ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಡಾ. ಮಲ್ಲಿಕರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೆ ಇಂಡಿಯಾ ಕೂಡ ಹಾಗೂ ಕಾಂಗ್ರೆಸ್‌ ವಿರುದ್ಧ ಗದಾಪ್ರಹಾರ ಮಾಡಿದ್ದು ವಿಶೇಷವಾಗಿತ್ತು.

ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಧಾನಿ ನರೇಂದ್ರ ಮೋದಿ ಖರ್ಗೆ ತವರು ಕಲಬುರಗಿಗೆ ಆಗಮಿಸಿ ಲೋಕ ಸಮರಕ್ಕೆ ಕಹಳೆ ಮೊಳಗಿಸಿದರು. ಅವರು ಬಿಸಿಲೂರಿನ ಎನ್‌ವಿ ಮೈದಾನದಲ್ಲಿ 45 ನಿಮಿಷಕಾಲ ಮಾತನಾಡಿದರೂ ಸಹ ಎಐಸಿಸಿ ಅಧ್ಯಕ್ಷ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಡಾ. ಮಲ್ಲಿಕರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೆ ಇಂಡಿಯಾ ಕೂಡ ಹಾಗೂ ಕಾಂಗ್ರೆಸ್‌ ವಿರುದ್ಧ ಗದಾಪ್ರಹಾರ ಮಾಡಿದ್ದು ವಿಶೇಷವಾಗಿತ್ತು.

ನಾಲ್ಕು ದಿನಗಳ ಹಿಂದಷ್ಟೇ ಇದೇ ಎನ್‌ವಿ ಮೈದಾನದಲ್ಲಿ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಡಾ. ಖರ್ಗೆ ಮೋದಿಯವರನ್ನ, ಅವರ ಶೈಲಿಯನ್ನ, ಮಾತಿನ ದಾಟಿಯನ್ನ ಅಣುಕಿಸುತ್ತ ಭಾಷಣ ಮಾಡಿ ಜನರ ಗಮನ ಸೆಳೆಯೋ ಯತ್ನ ಮಾಡಿದ್ದರು.

ಈ ಲೆಕ್ಕಾಚಾರದಲ್ಲೇ ಇದ್ದ ಜನತೆ ಈ ಬಾರಿ ಮೋದಿ ಇಲ್ಲಿಗೆ ಬಂದಾಗ ಖರ್ಗೆ ಮೇಲೆ ಎಗರಿ ಬೀಳೋ ಸಾಧ್ಯತೆಗಳನ್ನ ಇಟ್ಟುಕೊಂಡು ಅಲ್ಲಿಗೆ ಬಂದರೆ ಎಗರಿ ಬೀಳದಿರಲಿ, ಖರ್ಗೆ ಕುರಿತಂತೆ ಚಕಾರ ಸಹ ಎತ್ತದೆ ಮೋದಿ ಸೇರಿದ್ದವರಲ್ಲಿ ಅಚ್ಚರಿ ಮೂಡಿಸಿದರು.

ಅವರಿಗೆ ತಾವು ಸೋಲುತ್ತೇವೆಂಬ ಅರಿವಾಗಿ ಸುಮ್ಮನಿದ್ದಾರೆಂದು ಹೇಳುತ್ತ ಇಂಡಿಯಾ ಕೂಟವನ್ನ ಸೂಚ್ಯವಾಗಿ ತಿವಿದರಲ್ಲದ ದಿಲ್ಲಿ ಪರಿವಾರ ಎಂದು ಹೇಳುತ್ತ ಗಾಂಧಿ ಕುಟುಂಬವನ್ನ ಕುಟುಕಿದರು. 

ಖರ್ಗೆಯವರ ಹೆಸರಾಗಲಿ, ಸೂಚ್ಯ ಪದಗಳನ್ನು ಬಳಸಿಯಾಗದಲಿ ಪ್ರಸ್ತಾಪವೆ ಮಾಡದೆ ಕಲಬುರಗಿ ಜನ ಈ ವಿಚಾರದಲ್ಲಿ ಮೋದಿಯವರ ತಾಳ್ಮೆ, ಸಹನೆಯನ್ನು ಮೆಚ್ಚುವಂತೆ ಮಾಡಿದರು.

ಸಭೆಗೆ ಬಂದ ಅನೇಕರು 3 ದಿನದ ಹಂದೆ ಖರ್ಗೆ ಇದೇ ಗ್ರೌಂಡ್‌ನಲ್ಲಿ ಮೇದಿಗೆ ಹಿಗ್ಗಾಮುಗ್ಗ ಬೈದಿದ್ರು, ಈಗ ಮೋದಿ ಇಲ್ಲೇ ಬಂದ್ರೂ ಖರ್ಗೆ ಹೆಸರನ್ನೇ ಹೇಳಲಿಲ್ಲವಲ್ಲ ಎಂದು ಜನರೇ ಆಡಿಕೊಂಡ ನೋಟಗಳು ಸಭೆಯಲ್ಲಿ ಕಂಡವು.

ಪ್ರಧಾನಿ ಸಂಕ್ಷಿಪ್ತ ರೋಡ್‌ ಷೋ: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ತುಂಬ ಸಂಕ್ಷಿಪ್ ಮಾಡಿದರು. ಪೊಲೀಸ್ ಪರೇಡ್‌ ಮೈದಾನದ ಹೆಲಿಪ್ಯಾಡ್‌ನಿಂದ ಕಾರಿನಿಂದಲೇ ಜನರತ್ತ ಕೈ ಬೀಸಿ ರೋಡ್ ಶೋ ಪೂರ್ಣಗೊಳಿಸಿದರು. 

ದಾರಿಯಲ್ಲಿ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನ, ಮಹಿಳೆಯರು, ಮಕ್ಕಳು ಮೋದಿಗಾಗಿ ಕಾದಿದ್ದರಾದರೂ ಬಿಸಿಲಿನ ಕಾರಣದಿಂದಾಗಿ ಮೋದಿ ಹೆಚ್ಚು ಹೊತ್ತು ರೋಡ್‌ ಷೋ ನಡೆಸಲಿಲ್ಲ

ಮೋದಿಯವರಿದ್ದ ಕಾರ್‌ ಬರುತ್ತಿದ್ದಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಯಾಗಿದ್ದ ಜನರಿಂದ ಜಯಘೋಷ ಕೇಳಿ ಬಂದವು. 

ಭಾರತ ಮಾತಾಕಿ ಜೈ... ಜೈ ಮೋದಿ ಮುಗಿಲು ಮುಟ್ಟಿದ ಘೋಷಣೆಗಳ ನಡುವೆ ಮೋದಿ ತೆರಳಿದಾಗ ಜನರು ಕೆಲವರು ಪುಷ್ಪದಳ ಸುರಿಮಳೆ ಗರೆದರು.ಕಾರಿನಿಂದಲೇ ಮೋದಿ ಕಮಲದ ಹೂವಿನ ಆಕಾರ ಪ್ರದರ್ಶಿಸುತ್ತ ಕಮಲಕ್ಕೆ ಬೆಂಬಲಿಸುವಂತೆ ಕೋರಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದ ಯಡಿಯೂರಪ್ಪ: ಮೋದಿ ವೇದಿಕೆಗೆ ಬರುವುದಕ್ಕೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡುತ್ತ ಕಲ್ಯಾಣ ಕರ್ನಾಟಕದಿಂದ ಮೋದಿಯವರು ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.

ನಮ್ಮ ರಾಜ್ಯಕ್ಕೆ ಮೋದಿಯವರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಮೋದಿಯವರು ಮೂರನೇ ಬಾರಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು.

ಕಾಂಗ್ರೆಸ್‌ ಮುಳುಗುತ್ತಿರುವ ಹಜಡಗು ಎಂದು ಹೇಳಿದ ಯಡಿಯೂರಪ್ಪ , ಕಲ್ಯಾಣ ಕರ್ನಾಟಕ ಹೆಚ್ಚು ಆಸಕ್ತಿಯನ್ನ ಮೋದಿಯವರು ಕೊಟ್ಟಿದ್ದಾರೆ. 

ಕಲ್ಯಾಣದ 5 ಸ್ಥಾನ ಸೇರಿದಂತೆ ಈ ಬಾರಿ 28 ಕ್ಕೆ 28 ಸ್ಥಾನ ಗೆಲ್ತೀವಿ. 28 ಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು ಸ್ಥಾನನಾದ್ರು ಗೆಲ್ಲಲಿ ನೋಡೋಣ, 28 ಕ್ಕೆ 28 ಕ್ಷೇತ್ರವೂ ಗೆಲ್ಲುವ ಮೂಲಕ ಮೋದಿಯವರಿಗೆ ಶಕ್ತಿ ತುಂಬೋಣ. ಮೋದಿ ವಿಶ್ವವೇ ಮೆಚ್ಚಿದ ನಾಯಕ. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ ಎಂದರು.

ಸೋಲುವ ಭೀತಿಯಿಂದಾಗಿ ಕಾಂಗ್ರೆಸ್‌ನಲ್ಲಿ ಮಂತ್ರಿಗಳು ಸ್ಪರ್ಧಿಸಲು ಸಿದ್ಧರಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್‌ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸೌಧಧಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ರು. 

ಅವರ ಮೇಲೆ ಕಾಂಗ್ರೆಸ್ ಯಾವುದೇ ಕ್ರಮ ತಗೊಂಡಿಲ್ಲ. ದೇಶದ ಭದ್ರತೆಗಾಗಿ, ಪಾಕಿಸ್ತಾನ ಘೋಷಣೆ ಕೂಗಿದವರ ಹೆಡೆಮುರಿ ಕಟ್ಟಲು ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಸಿಂಹದ ರೀತಿಯಲ್ಲಿ ಘರ್ಜನೆ ಮಾಡಿದಂತವರು ನರೇಂದ್ರ ಮೋದಿಯವರು ಎಂದರು.

ಕಾಂಗ್ರೆಸ್ ನಲ್ಲಿ ಯಾವುದೇ ಅಭ್ಯರ್ಥಿ ಗಳು ನಿಲ್ಲಲು ರೆಡಿ ಇಲ್ಲ, ಮೊದಲು 20 ಮಂತ್ರಿಗಳು ಕಣದಲ್ಲಿರುತ್ತಾರೆಂದು ಹೇಳಲಾಗಿತ್ತು. ಈಗ ಅವರೂ ಸಿದ್ಧರಿಲ್ಲ. ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯಿಂದ ಮಾತ್ರ ಈ ದೇಶ ರಕ್ಷಣೆ ಮಾಡೋಕೆ ಸಾಧ್ಯ ಎಂದರು.

ಒಂದೇ ಒಂದು ಕಾಳು ಅಕ್ಕಿಯನ್ನು ಸಿದ್ದರಾಮಯ್ಯ ಕೊಟ್ಟಿಲ್ಲ, ಅದನ್ನು ಕೊಟ್ಟಿದ್ದು ನರೇಂದ್ರ ಮೋದಿಯವರು. ಅನ್ನ ಅಲ್ಲ, ಕನ್ನ ಹಾಕೋಕೆ ಲೂಟಿ ಮಾಡೋಕೆ ಸಿದ್ದರಾಮಯ್ಯ ಬಂದಿರೋದು. ಸಿದ್ದರಾಮಯ್ಯ ಕಾಲಿಟ್ಟಿದ್ದೇ ಇಟ್ಡಿದ್ದು ರಾಜ್ಯದಲ್ಲಿ ಬರಗಾಲ. 

ನೀರಿಲ್ಲ ನೀರಿಲ್ಲ ಎಲ್ಲೆಲ್ಲೂ ನೀರಿಲ್ಲ ನೀರಿಲ್ಲ, ಹಿಂದೆಯೂ ಸಿದ್ದರಾಮಯ್ಯ ಇದ್ದಾಗ ಬರಗಾಲ. ಆಮೇಲೆ ಯಡಿಯೂರಪ್ಪ ಸಿಎಂ ಆದರು ಅವಾಗ ಎಲ್ಲೆಲ್ಲೂ ಮಳೆ ಎಂದರು. 

ಸಿದ್ದರಾಮಯ್ಯ ರವರೇ ನಿಮಗೆ ಆತ್ಮಸಾಕ್ಷಿ ಇದ್ದರೆ, ಅಭಿವೃದ್ಧಿ ಗೆ ಒಂದು ರೂಪಾಯಿ ಕೊಟ್ಟಿದ್ದೀರಾ ಹೇಳಿ ನೋಡೋಣ ಎಂದು ಸವಾಲು ಹಾಕಿದರಲ್ಲದೆ ಒಂದು ರೂಪಾಯಿ ಕೆಲಸ ಇಲ್ಲ, ಆದರೆ ಫ್ರೀ ಫ್ರೀ ಅಂತೀರಿ.

 ಕದ್ದು ಮುಚ್ಚಿ ಎಲ್ಲದಕ್ಕೂ ಟ್ಯಾಕ್ಸ್, ನನ್ನ ದುಡ್ಡು ತಗೊಂಡು ನನ್ನ ಹೆಂಡತಿಗೆ ಕೊಡೋಕೆ ನೀನು ಯಾರಯ್ಯ ಎಂದು ಸಿದ್ದರಾಮಯ್ಯ ಗೆ ಕೇಳಬೇಕು ಎಂದು ಜನತೆಗೆ ಕರೆ ನೀಡಿದರು.

28 ಸ್ಥಾನ ಗೆಲ್ಲಿಸಿ ಜನರೆ ಉತ್ತರ ಕೊಡ್ತಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡುತ್ತ ಮೋದಿ ಹೇಳ್ತಾರೆ ನಾನು ದೇಶದ ಪ್ರಧಾನಿ ಅಲ್ಲ, ನಾನು ದೇಶದ ಸೇವಕ ಎನ್ನುತ್ತಾರೆ. ನಮ್ಮಸಿಎಂ ಸಿದ್ದರಾಮಯ್ಯ ಕೇಳ್ತಾರೆ ಮೋದಿ ಏನ್ ಕೊಡುಗೆ ಕೊಟ್ಟಿದ್ದಾರೆ ರಾಜ್ಯಕ್ಕೆ ಎಂದು,

ಅದಕ್ಕೆ ಉತ್ತರ ನಾವು ಕೊಡೋದಿಲ್ಲ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ರಾಜ್ಯದಲಲಿ 400 ಕ್ಕೂ ಹೆಚ್ಚು ದೇಶದಲ್ಲಿ ಗೆಲ್ಲಿಸಿ ನಮ್ಮ ಜನರ ಉತ್ತರಿಸುತ್ತಾರೆಂದರು.

ಅಂಬೇಡ್ಕರ್ ರನ್ನ ಕಾಂಗ್ರೆಸ್ ಎರಡು ಬಾರಿ ಸೋಲಿಸಿದ್ರು, ಅವರಿಗೆ ಭಾರತ ರತ್ನ ಕೊಡಲಿಲ್ಲ, ಅವರಿಗೆ ಅಂತ್ಯಸಂಸ್ಕಾರ ಮಾಡಲಿಲ್ಲ, ರಾಜ್ಯಕ್ಕೆ ಮೋದಿ ಕೊಟ್ಟಿರುವ ಅನುದಾನಕ್ಕೆ ನಾವು ಅಭಾರಿಯಾಗಿದ್ದೇವೆ. 

ಮೋದಿಯವರಿಗೆ ಕನ್ನಡದ ಮೇಲೆ ಪ್ರೀತಿ ಇದೆ ಎಂದರು.ಪ್ರಲ್ಹಾದ್‌ ಜೋಷಿ ಮಾತನಾಡುತ್ತ ಖರ್ಗೆಯವರಿಗೆ ಟಾಂಗ್‌ ನೀಡಿದರಲ್ಲದೆ ದಶಕಗಳ ಕಾಲ ಕಲ್ಯಾಣ ನಾಡನ್ನಾಳಿರುವ ಖರ್ಗೆ ಪರಿವಾರದಿಂದ ಪ್ರಗತಿ ಶೂನ್ಯ ಎಂದರಲ್ಲದೆ ಲೋಕ ಸಮರದಲ್ಲಿ ಕಾಂಗ್ರೆಸ್‌ ಇಲ್ಲಿ ಧೂಳಿಪಟವಾಗಲಿದೆ ಎಂದರು. ಮೋದಿ ನೇತತ್ವದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಮೋದಿ ಕೆಲಸಗಳನ್ನು ವಿವರಿಸಿದರು.

ಮೊಬೈಲ್‌ ಟಾರ್ಚ್‌ ಬೆಳಗಿಸಿ ಗ್ಯಾರಂಟಿ ನೀಡಿದ ಜನ: ಸಮಾರಂಭದಲ್ಲಿ ಮೋದಿ ತಮ್ಮ ಗ್ಯಾರಂಟಿಗಳ ಬಗ್ಗೆ ಹೇಳುತ್ತ ಕಮಲಕ್ಕೆ ಮತ ಹಾಕಿ ನೀವು ನನಗೆ ಗ್ಯಾರಂಟಿ ಕೊಡಿ ಎಂದು ಸೇರಿದ್ದ ಜನತೆಗೆ ಕೋರಿದಾಗ ಎಲ್ಲರೂ ಏಕಕಾಲಕ್ಕೆ ಮೋಬೈಲ್‌ ಹೊರತೆಗೆದು ಅದರಲ್ಲಿನ ಟಾರ್ಚ್ ಬೆಳಗಿಸಿದಾಗ ಮೋದಿ ಖುಷಿಪಟ್ಟರು. ಕಮಲಕ್ಕೆ ಮತ ಹಾಕಿ ಹೆಚ್ಚಿನ ಸಂಸದರಿಗೆ ದಿಲ್ಲಿಗೆ ಕಳುಹಿಸಿ ತಮ್ಮ ಕೈ ಬಲಪಡಿಸುವಂತೆ ಕೋರಿದರು.

ಖರ್ಗೆ ವಿರುದ್ಧ ಜಾಧವ್‌ ವಾಗ್ದಾಳಿ: ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್‌ ಮಾತನಾಡಿ, ಮೋದಿ ಕಲಬುರಗಿಗೆ ಏನ್‌ ಕೊಡುಗೆ ಕೊಟ್ಟರೆಂದು ಖರ್ಗೆಯವರು ಕೇಳ್ತಾರೆ, ವಂದೇ ಭಾರತ ಸೇರಿದಂತೆ ಕಳೆದ 5 ವರ್ಷಗಳಲ್ಲಿ ಮೋದಿ ಏನ್‌ ಕೊಟ್ಟಿಲ್ಲವೆಂದು ಜನ ಕೇಳಿರಿ? ಕಮಲಕ್ಕೆ ಬಹುಮತದಿಂದ ಗೆಲ್ಲಿಸಿ ಮೋದಿ ಕೊಡುಗೆಯನ್ನ ಪ್ರಶ್ನಿಸುವವರಿಗೆ ಸಾರಿ ಹೇಳಿ ಎಂದರು.

ಬೀದರ್‌ನ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿದರು. ಕಾರ್ಯಕ್ರಮ ನೀರೂಪಿಸಿ ಶಶಿಕಲಾ ತೆಂಗಳಿ, ಲೋಕಸಬೆ ಇನ್‌ಚಾರ್ಜ್‌ ರಾಜುಗೌಡ, ರಾಜಕುಮಾರ್‌ ತೇಲ್ಕೂರ್‌ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದು ಮೋದಿಯರ ಪರವಾಗಿ ಘೋಷಣೆಗಳನ್ನು ಕೂಗುತ್ತ ಜನರಿಂದಲೂ ಪ್ರತಿಧ್ವನಿಯಾಗುವಂತೆ ಮಾಡಿ ಇಡೀ ವಾತಾವರಣದಲ್ಲಿ ಮೋದಿ ಹವಾ ಇರುವಂತೆ ನೋಡಿಕೊಂಡರು.