ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ ಎಂದು ಭಾರತ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏಪ್ರಿಲ್ 12ರಿಂದ 19ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಏಪ್ರಿಲ್ 20ರಂದು ನಾಮಪತ್ರಗಳ ಪರಿಶೀಲನೆ, ಏ.22ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಮೇ 7ರಂದು ಮತದಾನ ನಡೆದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ₹25,000 ಮೊತ್ತದ ಭದ್ರತಾ ಠೇವಣಿ, ಪರಿಶಿಷ್ಟ ಅಭ್ಯರ್ಥಿಗಳಾಗಿದ್ದಲ್ಲಿ ₹12,500 ಭದ್ರತಾ ಠೇವಣಿ ಇರಿಸಬೇಕು. ಅಭ್ಯರ್ಥಿಯು ಚುನಾವಣೆಗೆ ₹95,000 ವರೆಗೆ ಹಣ ವೆಚ್ಚ ಮಾಡಲು ಹಾಗೂ ಅಭ್ಯರ್ಥಿಯು 4 ನಾಮಪತ್ರ ಸಲ್ಲಿಸಲು ಅವಕಾಶವಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 852107 ಪುರುಷ ಮತ್ತು 877761 ಮಹಿಳಾ ಮತದಾರರು ಹಾಗೂ 33 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 17,29,901 ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಇವರಲ್ಲಿ 18-19 ವರ್ಷದೊಳಗಿನ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ 29,788 ಯುವ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟವರು 15,315 ಮತ್ತು ವಿಕಲಚೇತನ 18,888 ಮತದಾರರು ಇದ್ದಾರೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 8600 ಸಿಬ್ಬಂದಿಯನ್ನು ಚುನಾವಣೆ ಸೇವೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿ-ಸಿಬ್ಬಂದಿಗೆ ಈಗಾಗಲೇ ವಿವಿಧ ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.2039 ಮತಗಟ್ಟೆಗಳು:
ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲಿ 325 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಕೇವಲ ರಾಜಕೀಯ ಪಕ್ಷಗಳ ಮುಖಂಡರು ಮಾತ್ರವಲ್ಲದೇ, ಸಾರ್ವಜನಿಕರೂ ಚುನಾವಣಾ ಆಯೋಗದ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರ್ಲಕ್ಷಿಸಿದಲ್ಲಿ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.
- - -ಬಾಕ್ಸ್-1 ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ ಜಿಲ್ಲೆಯಲ್ಲಿ ಯುವ ಮತದಾರರು ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು, ಯಾವುದೇ ಆಮಿಷಕ್ಕೆ ಒಳಗಾಗದೇ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವಂತೆ ಡಿಸಿ ಮನವಿ ಮಾಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳಲ್ಲಿ 05 ಸಖಿ ಮತಗಟ್ಟೆಗಳನ್ನು, ಯುವ ಮತದಾರರು ಹೆಚ್ಚಿರುವಲ್ಲಿ 1 ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗುವುದು ಅಲ್ಲದೇ ಸ್ಥಳೀಯ ವಿಶೇಷತೆಗಳನ್ನು ಒಳಗೊಂಡಂತೆ ಒಂದು ಮತಗಟ್ಟೆಯನ್ನು ತೆರೆಯಲಾವುದು ಎಂದರು.ಕ್ಷೇತ್ರದ ವ್ಯಾಪ್ತಿಯಲ್ಲಿ ಕಂಡುಬರುವ ಯಾವುದೇ ಚುನಾವಣಾ ಅಕ್ರಮ, ಒತ್ತಡ, ಆಮಿಷ ಮುಂತಾದವು ಕಂಡುಬಂದಲ್ಲಿ ಸಾರ್ವಜನಿಕರು ಸಿವಿಜಲ್ ಆ್ಯಪ್ ಮೂಲಕ ದೂರು ದಾಖಲಿಸಿದಲ್ಲಿ, ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ಕೆಲವೇ ಗಂಟೆಗಳ ಅವಧಿಯಲ್ಲಿ ಅಕ್ರಮ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಮತದಾರರ ಅನುಕೂಲಕ್ಕಾಗಿ ದಿನದ 24 ಗಂಟೆಯೂ ‘1950’ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು.
- - - ಬಾಕ್ಸ್-2 ವ್ಯವಸ್ಥಿತ ನಿರ್ವಹಣೆಗೆ ತಂಡಗಳು ಚುನಾವಣೆ ವ್ಯವಸ್ಥಿತ ನಿರ್ವಹಣೆಗಾಗಿ ಹಲವು ತಂಡಗಳನ್ನು ರಚಿಸಲಾಗಿದ್ದು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಮಾಧ್ಯಮಗಳಲ್ಲಿ ಪ್ರಕಟಗೊಳಿಸುವ ಯಾವುದೇ ಜಾಹಿರಾತು, ಪಾವತಿಸುವ ಸುದ್ದಿ ಮುಂತಾದವುಗಳನ್ನು ಪ್ರಕಟಿಸುವ ಮುನ್ನ ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು. ಊರಿಂದೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ₹50,000 ಕ್ಕಿಂತ ಹೆಚ್ಚಿನ ಹಣ ಇಟ್ಟುಕೊಂಡಿದ್ದಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ₹1 ಲಕ್ಷಕ್ಕೂ ಹೆಚ್ಚಿನ ಹಣ ದೊರೆತಲ್ಲಿ ಆದಾಯ ತೆರಿಗೆ ಇಲಾಖಾಧಿಕಾರಿ ಮೂಲಕ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದವರು ತಿಳಿಸಿದರು.
ಸಾರ್ವಜನಿಕರು ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಬಹಿರಂಗ ಸಭೆ, ಸಮಾರಂಭಗಳನ್ನು ಆಯೋಜಿಸುವವರ ಅನುಕೂಲಕ್ಕಾಗಿ ಕೋರಿಕೆಗೆ ಅನುಮತಿ ನೀಡಲು ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಗೆ ಹಾಗೂ ಈವರೆಗೆ ಹೆಸರು ಸೇರ್ಪಡೆ ಆಗದಿರುವವರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಲು ಏಪ್ರಿಲ್ 14ರವರೆಗೆ ಅವಕಾಶ ನೀಡಲಾಗಿದೆ ಎಂದರು.
- - -ಬಾಕ್ಸ್-3 ಬಿಗಿ ಭದ್ರತೆಗೆ ಸಕಲ ಕ್ರಮ: ಎಸ್‌ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಮಾತನಾಡಿ, ಚುನಾವಣಾ ಕಾರ್ಯಕ್ಕೆ ಸುಮಾರು 3000ಕ್ಕೂ ಹೆಚ್ಚಿನ ಹೆಚ್ಚಿನ ಪೊಲೀಸ್ ಹಾಗೂ ಗೃಹರಕ್ಷಕ ಸೇವೆಯನ್ನು ಹಾಗೂ ಪ್ಯಾರಾ ಮಿಲಿಟರಿ ತುಕಡಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈಗಾಗಲೇ 1500 ರೌಡಿ ಶೀಟರ್‌ಗಳು, ಗೂಂಡಾಗಳ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಹೊಂದಿರುವ ಶಸ್ತ್ರಾಸ್ತ್ರಗಳನ್ನು ಡಿಪಾಜಿಟ್ ಮಾಡುವಂತೆಯೂ ಸೂಚಿಸಲಾಗಿದೆ ಎಂದರು.-ಫೋಟೋ: ಮಿಥುನ್‌ಕುಮಾರ್, ಜಿಲ್ಲಾ ಎಸ್‌ಪಿ
- - - -16ಎಸ್ಎಂಜಿಕೆಪಿ04: ಗುರುದತ್ತ ಹೆಗಡೆ