ಕಾಂಗ್ರೆಸ್ಸಿಗೆ ನೀರಲಕೇರಿ ರಾಜೀನಾಮೆ

| Published : Mar 17 2024, 01:47 AM IST

ಸಾರಾಂಶ

ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ ಪಕ್ಷದ ಸಂಘಟನೆ ಮಾಡಿದ ಪಿ.ಎಚ್‌. ನೀರಲಕೇರಿ ಲೋಕಸಭಾ ಚುನಾವಣೆಯ ಪ್ರಸ್ತುತ ಸಂದರ್ಭದಲ್ಲಿಯೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಧಾರವಾಡ:

ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ ಪಕ್ಷದ ಸಂಘಟನೆ ಮಾಡಿದ ಪಿ.ಎಚ್‌. ನೀರಲಕೇರಿ ಲೋಕಸಭಾ ಚುನಾವಣೆಯ ಪ್ರಸ್ತುತ ಸಂದರ್ಭದಲ್ಲಿಯೇ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿರುವ ಅವರು, ಮುಂದಿನ ನನ್ನ ರಾಜಕೀಯ ಜೀವನದ ನಿರ್ಧಾರವನ್ನು ಬೆಂಬಲಿಗರ ಜತೆ ಚರ್ಚಿಸಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

1992 ರಿಂದ ಈ ವರೆಗೆ ಕಾಂಗ್ರೆಸ್‌ ಪಕ್ಷದ ಸಂಘಟನೆ ಮಾಡಿರುವ ನೀರಲಕೇರಿ ಕವಿವಿ ಸಿನೆಟ್‌ನಿಂದ ಹಿಡಿದು ಇತ್ತೀಚಿನ ವಿಧಾನಸಭಾ ಚುನಾವಣೆ ವರೆಗೂ ಪಕ್ಷಕ್ಕಾಗಿ ದುಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ಕೈ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್‌ ಸಿಕ್ಕಿರಲಿಲ್ಲ. ನಂತರ ಇತ್ತೀಚಿಗಿನ ರಾಜ್ಯಸಭಾ ಸದಸ್ಯತ್ವಕ್ಕೂ ಪ್ರಯತ್ನ ಮಾಡಿದ್ದರು. ಅಲ್ಲೂ ವಿಫಲರಾಗಿದ್ದರು. ಮೂರು ದಶಕಗಳ ಪಕ್ಷ ಸಂಘಟನೆ ಮಾಡಿದರೂ ಪಕ್ಷ ನನ್ನನ್ನು ಸರಿಯಾಗಿ ಗುರುತಿಸಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿತ್ತು. ಜತೆಗೆ ಪಕ್ಷದ ಸ್ಥಳೀಯ ಮುಖಂಡರು ನೀರಲಕೇರಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ಸಹ ಅವರು ಪಕ್ಷಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ನೀರಲಕೇರಿ ಬರೀ ಕಾಂಗ್ರೆಸ್‌ ಸಂಘಟನೆ ಮಾತ್ರವಲ್ಲದೇ, ಹೈಕೋರ್ಟ್‌ ಹೋರಾಟ, ಬೈಪಾಸ್‌ ಅಗಲೀಕರಣದ ಹೋರಾಟ, ರೈತ ವಿರೋಧಿ ಕಾನೂನು ವಿರೋಧಿಸಿ ಹೋರಾಟ, ಖಾದಿ ಕೇಂದ್ರಗಳ ಉಳಿವು ಸೇರಿದಂತೆ ಹಲವು ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರಲ್ಲಿ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪಕ್ಷದಲ್ಲಿ ಮಾಧ್ಯಮ ವಿಶ್ಲೇಷಕರು, ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರು.