ಸಾರಾಂಶ
ತಂಬಾಕಿಗೆ ಚಿನ್ನದ ಬೆಲೆ । ತಂಬಾಕು ಬೆಳೆ ಬೆಳೆಯಲು ಅನ್ನದಾತರು ಉತ್ಸುಕ । ಬಿತ್ತನೆ ಆರಂಭ । ಕೆಜಿಗೆ ₹200 ರಿಂದ 265 ಮಾರಾಟ ಶೇಖರ್ ವೈ.ಡಿ.
ಕನ್ನಡಪ್ರಭ ವಾರ್ತೆ ಅರಕಲಗೂಡುತಂಬಾಕಿಗೆ ಚಿನ್ನದ ಬೆಲೆ ದೊರೆತ ಕಾರಣಕ್ಕಾಗಿ ರೈತರು ಈ ಬಾರಿ ಹೊಗೆಸೊಪ್ಪು ಬೆಳೆ ಬೆಳೆಯಲು ಹೆಚ್ಚು ಉತ್ಸುಕರಾಗಿದ್ದು ಈಗಾಗಲೇ ಸಸಿ ಮಾಡಿ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಬೆಳೆಗಾರರ ಪಾಲಿಗೆ ಕೆಲ ವರ್ಷಗಳ ಕಾಲ ಕಹಿಯಾಗಿದ್ದ ಹೊಗೆಸೊಪ್ಪು ಬೆಳೆ ಈ ಸಲ ಕಲ್ಪವೃಕ್ಷವಾಗುತ್ತಿದೆ. ಹೌದು, ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಈ ಬಾರಿ ಹೊಗೆಸೊಪ್ಪಿಗೆ ಬಂಪರ್ ಬೆಲೆ ದೊರೆತ ಕಾರಣ ಬೆಳೆಗಾರರು ಹೊಗೆಸೊಪ್ಪು ಬೆಳೆಯತ್ತ ಹೊರಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸರಾಸರಿ ದರ ಕೂಡ ಗರಿಷ್ಠ ಮಟ್ಟ ತಲುಪಿತ್ತು. ಒಂದು ಕೆಜಿ ಹೊಗೆಸೊಪ್ಪು ಕನಿಷ್ಠ 200 ರಿಂದ 265 ರು. ತನಕ ಮಾರಾಟವಾಯಿತು. ಸರಾಸರಿ 257 ರು. ದರ ದೊರೆಯಿತು. ಇದರಿಂದಾಗಿ ಹೆಚ್ಚಿನ ರೈತರು ಬೆಳೆ ಬೆಳೆಯಲು ಮತ್ತಷ್ಟು ಆಸಕ್ತಿ ತೋರಿದ್ದಾರೆ.ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು ರೈತರ ಆದಾಯದ ಮೂಲವಾಗಿದೆ. ಕಳೆದ ಹಲವಾರು ವರ್ಷಗಳ ಕಾಲ ರೈತರು ತಂಬಾಕು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು ಇದೇ ಬೆಳೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪಿನ ದರ ಕುಸಿದಿತ್ತು. ಒಂದು ಕೆಜಿ ಹೊಗೆಸೊಪ್ಪಿನ ದರ ಪಾತಾಳಕ್ಕೆ ಕುಸಿದಿತ್ತು. ಲಕ್ಷಾಂತರ ರು. ಸಾಲ ಮಾಡಿ ಬೆಳೆದಿದ್ದ ರೈತರು ದಲ್ಲಾಳಿಗಳಿಗೆ ಕೇವಲ ೧೦ ರು.ಗೆ ನೀಡಿ ನಿರಾಸೆಯಿಂದ ಮರಳುತ್ತಿದ್ದರು. ಕೆಲವು ಸಲ ಬೆಳೆಗಳಿಗೆ ಕೊಳ್ಳಿ ಇಟ್ಟು ಸುಟ್ಟಿದ್ದರು. ಈ ಬಾರಿ ಮಾರುಕಟ್ಟೆಯಲ್ಲಿ ತಂಬಾಕಿನ ದರ ಸುಧಾರಣೆ ಕಂಡ ಕಾರಣ ಹೆಚ್ಚಿನ ರೈತರು ಇದೀಗ ಬೆಳೆ ಬೆಳೆಯಲು ಒಲವು ವ್ಯಕ್ತಪಡಿಸಿದ್ದಾರೆ.
ತಂಬಾಕು ಮಾರುಕಟ್ಟೆ ಅಧಿಕಾರಿಗಳ ಪ್ರಕಾರ, ಈಗಾಗಲೇ ಐಟಿಸಿ ಕಂಪನಿ ಮೂಲಕ ಸಿಎಚ್3 ಹಾಗೂ ತಂಬಾಕು ಮಂಡಳಿ ಮೂಲಕ ಕಾಂಚನಾ, ವೆರೈಟಿ ತಳಿಯ ಬೀಜಗಳನ್ನು ಪಡೆದು ಶೇ.80ರಷ್ಟು ರೈತರು ಸಸಿ ಮಾಡಿ ಬಿತ್ತನೆ ಕೈಗೊಂಡಿದ್ದಾರೆ. ಬೆಳೆ ಬೆಳೆಯುವುದ ನಿಲ್ಲಿಸಿದ್ದ ಬೆಳೆಗಾರರು ಕೂಡ ಬಿತ್ತನೆಗೆ ಮಾರು ಹೋಗಿದ್ದಾರೆ. ಹೀಗಾಗಿ ಈ ಬಾರಿ ತಂಬಾಕು ಬೆಳೆ ವಿಸ್ತೀರ್ಣದಲ್ಲಿ ಹೆಚ್ಚಳವಾಗುವುದು ನಿಚ್ಚಳವಾಗಿದೆ ಎನ್ನುತ್ತಾರೆ ರಾಮನಾಥಪುರ ತಂಬಾಕು ಮಾರುಕಟ್ಟೆ ಕ್ಷೇತ್ರಾಧಿಕಾರಿಗಳು.ರಾಮನಾಥಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಾವಿರಾರು ರೈತರು ಹೊಗೆಸೊಪ್ಪು ಉತ್ಪಾದಿಸುತ್ತಾರೆ. ಪ್ಲಾಟ್ ಫಾರಂ 7ರಲ್ಲಿ 4072 ರೈತರು ಅಧಿಕೃತವಾಗಿ ಪರವಾನಗಿ ಹೊಂದಿದ್ದಾರೆ. ಪ್ಲಾಟ್ ಫಾರಂ 63ರಲ್ಲಿ 3173 ಅಧಿಕೃತ ಪರವಾನಗಿ ಹೊಂದಿದ್ದರೆ, 1320 ಕಾರ್ಡುದಾರರು ಇದ್ದಾರೆ. ಎರಡು ಪ್ಲಾಟ್ ಫಾರಂ ವ್ಯಾಪ್ತಿಯಲ್ಲಿ 10 ಸಾವಿರ ಬ್ಯಾರಲ್ ಮನೆಗಳಿದ್ದು ಈ ಬಾರಿ ಬಹುತೇಕ ಬೆಳೆಗಾರರು ಹೊಗೆಸೊಪ್ಪು ಉತ್ಪಾದನೆಗೆ ಮುಂದಾಗಿದ್ದಾರೆ.
ತಂಬಾಕಿಗೆ ಉತ್ತಮ ಬೇಡಿಕೆ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ದರ ಸುಧಾರಣೆ ಕಂಡು ಬೆಳೆಗಾರರಿಗೆ ಲಾಭವಾಗಿದೆ. ಭೂಮಿ ಫಲವತ್ತತೆ ಹೆಚ್ಚಿಸಿಕೊಂಡು ರೈತರು ಎಕರೆವಾರು ಕಡಿಮೆ ವಿಸ್ತೀರ್ಣದಲ್ಲಿ ಅಧಿಕ ಇಳುವರಿ ನಡೆಸಬೇಕು. ಈಗಾಗಲೇ ಶೇ. 80ರಷ್ಟು ರೈತರಿಗೆ ಬಿತ್ತನೆ ಬೀಜ ಒದಗಿಸಲಾಗಿದೆ.ಜಿ.ಬಿ. ಸುಬ್ಬಾರಾವ್, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ. (16ಎಚ್ಎಸ್ಎನ್6ಎ)
ಹೊಗೆಸೊಪ್ಪಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿರುವುದು ಸಂತಸದಾಯಕ. ಈಗಾಗಲೇ ಬೋರ್‌ವೆಲ್ ಮೂಲಕ ತಂಬಾಕು ಬಿತ್ತನೆ ನಡೆಸಲಾಗಿದ್ದು, ಸುಡು ಬಿಸಿಲನ್ನು ಲೆಕ್ಕಿಸದೆ ಸಸಿಗಳ ಬೆಳವಣಿಗೆಗೆ ತಕ್ಕಂತೆ ಕಳೆ ತೆಗೆದು ನೀರು ಹಾಕಿ ಆರೈಕೆಯಲ್ಲಿ ತೊಡಗಿದ್ದೇವೆ.ರೈತ ಬಸವಾಪಟ್ಟಣ ಕುಮಾರ್. (16ಎಚ್ಎಸ್ಎನ್6ಬಿ). ಅರಕಲಗೂಡು ತಾಲೂಕಿನಲ್ಲಿ ತಂಬಾಕು ಸಸಿ ಮಾಡಿ ರೈತರು ಹೊಲಗಳಲ್ಲಿ ಕಳೆ ತೆಗೆಯುವಲ್ಲಿ ನಿರತರಾಗಿರುವುದು.