ಶಾಂತಕವಿಗಳ ಬದುಕು, ಬರಹದ ಸಂಶೋಧನೆ ಆಗಲಿ

| Published : Mar 17 2024, 01:47 AM IST

ಸಾರಾಂಶ

ಶಾಂತ ಕವಿಗಳನ್ನು ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಯಲಾಗಿದೆ. ಆಧುನಿಕ ರಂಗಭೂಮಿಗೆ ಇವರ ಕೊಡುಗೆ ಅನನ್ಯ.

ಧಾರವಾಡ:

ಶಾಂತ ಕವಿಗಳನ್ನು ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಯಲಾಗಿದೆ. ಆಧುನಿಕ ರಂಗಭೂಮಿಗೆ ಇವರ ಕೊಡುಗೆ ಅನನ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವಿನಾಯಕ ನಾಯಕ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಕ್ಕರಿ ಬಾಳಾಚಾರ್ಯ `ಶಾಂತಕವಿ’ಗಳ ಸ್ಮರಣೆಯಲ್ಲಿ ಮಾತನಾಡಿದ ಅವರು, 19ನೇ ಶತಮಾನದ ಆದಿಭಾಗದಲ್ಲಿ ಉತ್ತರ ಕರ್ನಾಟಕದ ಧಾರವಾಡ ಹಾಗೂ ಬೆಳಗಾವಿ ಪ್ರದೇಶದಲ್ಲಿ ಮರಾಠಿ ಪ್ರಾಬಲ್ಯದಿಂದ ಕನ್ನಡಿಗರು ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದಾಗ, ಸಕ್ಕರಿ ಬಾಳಾಚಾರ್ಯರು ಕನ್ನಡಿಗರಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಜಾಗೃತಿ ಅಭಿಮಾನ ಮೂಡಿಸಿದರು. ಶಾಂತಕವಿಗಳು 30ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ಬರೆದು ಕಲಿಸಿ ರಂಗದ ಮೇಲೆ ಪ್ರಯೋಗಿಸಿದರು. ಕನ್ನಡದಲ್ಲಿ ಕೀರ್ತನೆಗಳೇ ಇಲ್ಲ ಎನ್ನುವ ಕಾಲದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದರು ಎಂದರು.ಶಾಂತಕವಿಗಳು ಒಂದು ದೃಷ್ಟಿಯಿಂದ ಕನ್ನಡ ರಂಗಭೂಮಿಗೆ ಮರುಜೀವ ನೀಡಿದವರು. ಕನ್ನಡದಲ್ಲಿ ಏನಿದೆ? ಎನ್ನುವವರಿಗೆ ಕನ್ನಡದಲ್ಲಿ ಎಲ್ಲವೂ ಇದೆ ಎಂದು ತೋರಿಸಿಕೊಟ್ಟು ಕನ್ನಡದ ಅಸ್ಮಿತೆಯನ್ನು ಕಾಪಾಡಿದರು. ಆದರೆ ಅವರ ಬದುಕು, ಬರಹ ಕುರಿತು ಆಗಬೇಕಾದಷ್ಟು ಸಂಶೋಧನೆ ನಡೆಯದಿರುವುದು ವಿಷಾದನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಡೆ. ಚೆನ್ನಬಸಪ್ಪ ಹಾಗೂ ಶಾಂತಕವಿಗಳ ಪಾತ್ರ ಅಪಾರ. ಶಾಂತಕವಿಗಳು ರಚಿಸಿದ ಮೊದಲ ನಾಟಕ `ಉಷಾಹರಣ’ ಹಾಗೂ `ಸೀತಾಅರಣ್ಯ ಪ್ರವೇಶ’ಗಳು ಅವರಿಗೆ ಹೆಚ್ಚಿನ ಜನಮನ್ನಣೆ ತಂದುಕೊಟ್ಟವು. ಕನ್ನಡ ಸಾಹಿತ್ಯ ಉಳಿಯಬೇಕಾದರೆ ಓದುಗರ ಸಂಖ್ಯೆ ಹೆಚ್ಚಾಗಬೇಕು. ಸ್ವಕೀಯತೆ ಉಳಿಸಿಕೊಂಡು, ಪರಕೀಯತೆಯನ್ನು ನಾವು ತ್ಯಜಿಸಬೇಕೆಂದರು.

ಸಕ್ಕರಿ ಬಾಳಾಚಾರ್ಯರ 104ನೇ ಪುಣ್ಯತಿಥಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘವು ಶಾಂತಕವಿಗಳ ಹೆಸರಿನಲ್ಲಿ ನಡೆಸುತ್ತಿರುವ `ಶಾಂತೇಶ ವಾಚನಾಲಯಕ್ಕೆ’ ಸಕ್ಕರಿ ಬಾಳಾಚಾರ್ಯ `ಶಾಂತಕವಿ’ ಟ್ರಸ್ಟ್ ವತಿಯಿಂದ ₹ 95 ಸಾವಿರಗಳ ಕಬ್ಬಿಣದ ಐದು ಹೊಸ ಕಪಾಟುಗಳನ್ನು ದೇಣಿಗೆಯಾಗಿ ನೀಡಿದರು. ಪ್ರಸಾದ ಸುಧಾಕರ ಪ್ರಭು ಹಾಗೂ ಸಂಗಡಿರು ಸಕ್ಕರಿ ಬಾಳಾಚಾರ್ಯರ ರಂಗ-ಗೀತೆಗಳನ್ನು ಪ್ರಸ್ತುತಪಡಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಾಬುರಾವ ಸಕ್ರಿ ಇದ್ದರು. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಸ್.ಎಂ. ರಾಚಯ್ಯನವರ ವಂದಿಸಿದರು.