ಕೆ.ಎಚ್‌. ಪಾಟೀಲ ನೇರ ನುಡಿಯ ನಿಷ್ಠುರ ರಾಜಕಾರಣಿ

| Published : Mar 17 2024, 01:47 AM IST

ಕೆ.ಎಚ್‌. ಪಾಟೀಲ ನೇರ ನುಡಿಯ ನಿಷ್ಠುರ ರಾಜಕಾರಣಿ
Share this Article
  • FB
  • TW
  • Linkdin
  • Email

ಸಾರಾಂಶ

ನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ಕೆ.ಎಚ್. ಪಾಟೀಲ ಅವರು ನನಗೆ ತಂದೆ ಸಮಾನರು. ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ರಾಜ್ಯಕ್ಕೆ ವಿಶೇಷ ಅಭಿವೃದ್ಧಿ ಕಾರ್ಯ, ಕ್ರಾಂತಿಕಾರ ಯೋಜನೆಗಳನ್ನು ಜಾರಿಗೆ ತಂದಿದ್ದರು

ಗದಗ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸುಳ್ಳೇ ಸಾಧನವಾಗಿದೆ. ಆದರೆ ಕೆ.ಎಚ್‌. ಪಾಟೀಲ ಅದಕ್ಕೆ ವ್ಯತರಿಕ್ತರಾಗಿದ್ದರು. ಅವರು ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದರು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಚಿತ್ರಣವನ್ನು ಸೂಕ್ಷ್ಮವಾಗಿ ಬಿಡಿಸಿ ಹೇಳಿದರು.

ಅವರು ಶನಿವಾರ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ವಿದ್ಯಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಪ್ರಾರಂಭೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ರೈತರ ಅಭ್ಯುದಯಕ್ಕೆ ರಾಜಕಾರಣಿಯಾಗಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಕೆ.ಎಚ್. ಪಾಟೀಲ ಮಾಡಿದ್ದಾರೆ. ತಮ್ಮ ಜೀವನದುದ್ದಕ್ಕೂ ನೇರ ನುಡಿಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಗಳು ಕೆಪಿಸಿಸಿ ಕಚೇರಿಗೆ ಬಂದು ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡುವಂತೆ ಅಧಿಕಾರ ಅವರು ನಡೆಸಿದ್ದರು. ಅವರು ನಡೆದು ಬಂದ ದಾರಿಯನ್ನು ಇಂದಿನ ಯುವಕರಿಗೆ ಪರಿಚಯಿಸಬೇಕಿದೆ. ಅದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅವರ ಜೀವನ, ಸಾಧನೆ, ರಾಜಕಾರಣ, ಸಹಕಾರ ತತ್ವದಡಿಯಲ್ಲಿ ಬೆಳೆಸಿದ ಸಂಸ್ಥೆಗಳು ಸೇರಿದಂತೆ ಅವರ ಸಮಗ್ರವಾದ ಮಾಹಿತಿ ಒಳಗೊಂಡ ಕಿರು ಹೊತ್ತಿಗೆ ಹೊರ ತಂದು ಅದನ್ನು ಎಲ್ಲರಿಗೂ ತಲುಪಿಸುವ ಕಾರ್ಯವಾಗಬೇಕು ಎಂದರು.

ಕೆ.ಎಚ್. ಪಾಟೀಲ ನೇರ ನುಡಿಯ ನಿಷ್ಠುರ ರಾಜಕಾರಣಿಯಾಗಿದ್ದರು. ಆದರೆ ಅವರ ಮಗ ಎಚ್.ಕೆ. ಪಾಟೀಲ ಅವರು ಮಾತ್ರ ಸೌಮ್ಯ ಸ್ವಭಾವದವರು. ಸೌಮ್ಯವಾಗಿಯೇ ಕೆ.ಎಚ್. ಪಾಟೀಲ ಅವರಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ಕೆ.ಎಚ್. ಪಾಟೀಲ ಅವರು ನನಗೆ ತಂದೆ ಸಮಾನರು. ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ರಾಜ್ಯಕ್ಕೆ ವಿಶೇಷ ಅಭಿವೃದ್ಧಿ ಕಾರ್ಯ, ಕ್ರಾಂತಿಕಾರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಅವರ ಮಕ್ಕಳಾದ ಡಿ.ಆರ್. ಪಾಟೀಲ, ಎಚ್.ಕೆ. ಪಾಟೀಲ ಸಮರ್ಥವಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ. ಇದು ಕೂಡಾ ಅಭಿನಂದನಾರ್ಹ ಕಾರ್ಯವಾಗಿದೆ. ಜನ್ಮಶತಮಾನೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸೆಂಟರ್, ಗ್ರಾಮೀಣ ಭಾಗದಲ್ಲಿ ಆರಂಭವಾದ ದೇಶದ ಮೊದಲ ಕಿಡ್ನಿ ಕಸಿ ಕೇಂದ್ರವಾಗಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ತುಮಕೂರು ಸಂಸದ ಜಿ.ಎಸ್. ಬಸವರಾಜ ಮಾತನಾಡಿ, ಕೆ.ಎಚ್. ಪಾಟೀಲ ನನ್ನ ತಂದೆ ಸಮಾನರು. ನಾನು ಸಂಸದನಾಗಲು ಕಾರಣ ಮಾತ್ರವಲ್ಲ, 22 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಲು ಮಾರ್ಗದರ್ಶನ ಮಾಡಿದರು. ಅವರ ವ್ಯಕ್ತಿತ್ವವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಬದುಕು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದ ಅವರು, ಅವರ ಸ್ಮರಣೆಯಲ್ಲಿ ತುಮಕೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.

ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲ ಅವರ ಚಿಂತನೆ ಪ್ರತಿ ಭಾನುವಾರ ಅನುಷ್ಠಾನ ಆಗುವ ಹಾಗೆ ವರ್ಷಪೂರ್ತಿ ಮಾಡಲಾಗುವುದು. 60 ಕೆಲಸಗಳ ಪಟ್ಟಿ ಮಾಡಿ, ರಚನಾತ್ಮಕ ಕಾರ್ಯಕರ್ತರ ಪಡೆ ಅವರ ಕನಸು ನನಸು ಮಾಡಲು ಶ್ರಮಿಸಲಿದೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಶ್ರೀನಿವಾಸ ಮಾನೆ, ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕ ಬಿ.ಆರ್.‌ ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಐ.ಜಿ.‌ ಸನದಿ, ಎ.ಎಂ. ಹಿಂಡಸಗೇರಿ, ಹಾವೇರಿ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಬಿ.ಬಿ.‌ ಅಸೂಟಿ, ಮಿಥುನ್ ಪಾಟೀಲ, ಅಕ್ಬರ್‌ಸಾಬ ಬಬರ್ಚಿ ಇತರರು ಉಪಸ್ಥಿತರಿದ್ದರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸೆಂಟರ್‌ಗೆ ಸಂಸದ ಜಿ.ಎಸ್. ಬಸವರಾಜ ಚಾಲನೆ ನೀಡಿದರು. ಜನಮೆಚ್ಚಿದ ನಾಯಕ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.