ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನೀಡಲಿ

| Published : Mar 17 2024, 01:47 AM IST

ಸಾರಾಂಶ

ಕೆಲವೊಮ್ಮೆ ಹೆಚ್ಚಿನ ಮಳೆಯಾಗಿ ಈರುಳ್ಳಿ ನೆಲದಲ್ಲೇ ಕೊಳೆತು ಹೋಗುತ್ತಿದೆ. ಕೆಲವು ಮಾರಾಟಕ್ಕೆ ಬರುವ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಕೊಳೆತ ಗೆಡ್ಡ ಎಂಬ ನೆಪ ನೀಡಿ ಯೋಗ್ಯ ಬೆಲೆ ಸಿಗದೇ ಖರ್ಚು ಮಾಡಿದ ಹಣವು ಬರದೇ ರೈತ ತೀವ್ರ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ

ಶಿರಹಟ್ಟಿ: ರಾಜ್ಯದಲ್ಲಿ ೩ಲಕ್ಷಕ್ಕೂ ಅಧಿಕ ಈರುಳ್ಳಿ ಬೆಳೆಗಾರರಿದ್ದು. ಸುಮಾರು ೩೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಯೋಗ್ಯ ದರ ಸಿಗದೇ ರೈತರು ಕಂಗಾಲಾಗಿದ್ದು, ಸರ್ಕಾರ ದರ ನಿಗದಿಪಡಿಸುವುದರೊಂದಿಗೆ ಯೋಗ್ಯ ಬೆಂಬಲ ಬೆಲೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ ಕರೆ ನೀಡಿದರು.

ಶನಿವಾರ ಬೆಳಗ್ಗೆ ಪಟ್ಟಣದ ಶಿಕ್ಷಕರ ಸೊಸೈಟಿ ಸಭಾ ಭವನದಲ್ಲಿ ಈರುಳ್ಳಿ ಬೆಳೆಗಾರರ ಸಂಘದ ಶಿರಹಟ್ಟಿ ತಾಲೂಕಾಧ್ಯಕ್ಷರ ನೇಮಕಾತಿ ನಡೆಸಿ ನಂತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

೧ ಕ್ವಿಂಟಲ್ ಈರುಳ್ಳಿ ಬೆಳೆಯಲು ಕನಿಷ್ಟ ₹೨ ಸಾವಿರ ಖರ್ಚು ಬರುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಅಂತಾ ರೈತರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಇದರಿಂದ ರೈತರಿಗೆ ಆದ ನಷ್ಟ ಸರ್ಕಾರ ತುಂಬಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಕೆಲವೊಮ್ಮೆ ಹೆಚ್ಚಿನ ಮಳೆಯಾಗಿ ಈರುಳ್ಳಿ ನೆಲದಲ್ಲೇ ಕೊಳೆತು ಹೋಗುತ್ತಿದೆ. ಕೆಲವು ಮಾರಾಟಕ್ಕೆ ಬರುವ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಕೊಳೆತ ಗೆಡ್ಡ ಎಂಬ ನೆಪ ನೀಡಿ ಯೋಗ್ಯ ಬೆಲೆ ಸಿಗದೇ ಖರ್ಚು ಮಾಡಿದ ಹಣವು ಬರದೇ ರೈತ ತೀವ್ರ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ. ಕೊಳೆತ ಗೆಡ್ಡೆ ಬರುತ್ತಿದೆ ಎಂಬುದನ್ನೇ ನೆಪ ಮಾಡಿಕೊಂಡು ಖರೀದಿದಾರರು ಗುಣಮಟ್ಟದ ಈರುಳ್ಳಿಗೂ ಕಡಿಮೆ ದರ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಗ್ಯ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಮುಖಂಡ ಬಸವರಾಜ ಹಡಪದ ಮಾತನಾಡಿ, ಸರ್ಕಾರ ಈರುಳ್ಳಿ ಬೆಳೆಯುವ ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿದೆ. ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಈ ಹಿಂದೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಕೆಲವೊಂದು ತಾಂತ್ರಿಕ ಕಾರಣಗಳಿಂದ ತಿರ್ಮಾನ ಕೈಗೊಳ್ಳಾಗಿಲ್ಲ ಎಂದು ಹೇಳುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ಈರುಳ್ಳಿ ಬೆಳೆದು ಕೈತುಂಬ ಹಣ ಸಿಗುವ ಆಸೆ ಕಣ್ಣಿನಿಂದ ನೋಡುತ್ತಿದ್ದ ರೈತರಿಗೆ ಬೆಲೆ ಕುಸಿತದಿಂದ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತರ ಕಣ್ಣಲ್ಲಿ ನೀರು ತರಿಸಿದೆ. ಒಂದು ಕ್ವಿಂಟಲ್ ಈರುಳ್ಳಿಗೆ ಸುಮಾರು ₹೨ ಸಾವಿರ ಖರ್ಚು ಮಾಡಿದ ರೈತ ಮಾರುಕಟ್ಟೆಯಲ್ಲಿ ಕೇವಲ ಒಂದು ಕ್ವಿಂಟಲ್‌ಗೆ ₹ ೫೦೦-೬೦೦ ಕೇಳುತ್ತಿದ್ದು, ಇದರಿಂದ ೧೫೦೦, ೧೪೦೦ಗಳಷ್ಟು ದರ ರೈತರ ಜೇಬಿಗೆ ಕತ್ತರಿ ಬೀಳಲಿದೆ. ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಹೇಳಿದರು.

ಸಂಘದ ಜಿಲ್ಲಾ ಅಧ್ಯಕ್ಷ ವೀರಪ್ಪ ಕಾಳಗಿ ಮಾತನಾಡಿದರು. ನೂತನ ತಾಲೂಕಾಧ್ಯಕ್ಷ ಅರವಿಂದ ಶಿದ್ರಾಮಪ್ಪ ಕಟಗಿ, ಗುರುಲಿಂಗಪ್ಪ ತಿಪ್ಪಶೆಟ್ಟಿ, ಸತೀಶ ದೇಶಪಾಂಡೆ, ತಿಪ್ಪಣ್ಣ ತೋಗುಣಸಿ, ದಯಾನಂದ ಸೂರಣಗಿ, ಗುರುನಾಥ ಸೂರಣಗಿ, ತಿಪ್ಪಣ್ಣ ತಲ್ಲೂರ, ಶಿವಕುಮಾರ ಜಕ್ಕಲಿ ಸೇರಿ ಅನೇಕರು ಉಪಸ್ಥಿತರಿದ್ದರು.