ಅಂಗನವಾಡಿ ಕಾರ್ಯಕರ್ತೆಯರ ಜತೆ ಸಭೆ ನಡೆಸಿಲ್ಲ

| Published : Mar 21 2024, 01:06 AM IST

ಸಾರಾಂಶ

ನೀತಿ ಸಂಹಿತೆ ಉಲ್ಲಂಘನೆಯ ಆರೋಪಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಇತ್ತೀಚೆಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಅವರ ಕೆಲಸದ ಒತ್ತಡ ನಿವಾರಿಸಬೇಕೆಂದು ಮನವಿ ಪತ್ರ ನೀಡಲು ಬಂದಿದ್ದರು. ಚುನಾವಣೆಗೆ ಸಂಬಂಧಪಟ್ಟಂತೆ ನಾನು ಸಭೆ ನಡೆಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿ ಸಚಿವರು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಇತ್ತೀಚೆಗೆ ಪಲ್ಸ್ ಪೊಲಿಯೋ, ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ವೆ ಮಾಡಿದ್ದರು. ಈಗ ಬಿಎಲ್‌ಒ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಎಲ್‌ಒ ಆಗಲು ನಮಗೆ ತೊಂದರೆ ಆಗುತ್ತಿದೆ ಎಂದು ನನಗೆ ಹೇಳಲು ಬಂದಿದ್ದಾರೆ. ಆದರೆ, ನಾನೇ ಅವರಿಗೆ ತಿಳಿ ಹೇಳಿ ಕೆಲಸ ಮಾಡಲು ಸೂಚಿಸಿದೆ ಎಂದರು.

ಚುನಾವಣೆ ವೇಳೆ ದೂರು ನೀಡುವುದು ಸರ್ವೆ ಸಾಮಾನ್ಯ. ದೂರು ಕೊಡಲಿ, ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನಾನು ನಿಯಮ ಉಲ್ಲಂಘಿಸಿಲ್ಲ. ನಾನು ದೇಶದ ಕಾನೂನಿಗೆ ಗೌರವ ಕೊಡುತ್ತೇನೆ. ನನಗೆ ಇದು 5ನೇ ಚುನಾವಣೆ. ನನಗೆ ಚುನಾವಣೆ ಎದುರಿಸುವುದು ಹೇಗೆ ಎಂಬುವುದು ಗೊತ್ತಿದೆ ಎಂದರು.