ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಲೋಕಸಭಾ ಕ್ಷೇತ್ರದ ವಿವಿಧ ರೈಲು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಸಂಸದ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಮಹಾ ಪ್ರಬಂಧಕ ಕೆ.ಅನಂತ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದ ವಿವಿಧ ರೈಲು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಸಂಸದ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಮಹಾ ಪ್ರಬಂಧಕ ಕೆ.ಅನಂತ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ಸಭೆಯಲ್ಲಿ ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಕುರಿತು ಚರ್ಚೆ ನಡೆಯಿತು. ಈ ಯೋಜನೆಗೆ ಅಗತ್ಯವಿರುವ ಸುಮಾರು 1430 ಎಕರೆ ಭೂಮಿ ಇನ್ನೂ ರಾಜ್ಯ ಸರ್ಕಾರದಿಂದ ರೈಲ್ವೆ ಇಲಾಖೆಗೆ ಹಸ್ತಾಂತರವಾಗಿಲ್ಲ. ರೈತರಿಗೆ ಪರಿಹಾರ ವಿತರಣೆ ಕೂಡ ನಡೆದಿಲ್ಲ ಎಂಬ ಕಾರಣದಿಂದ ಕಾಮಗಾರಿ ತಡೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಸಂಸದರು ಹೇಳಿದರು.ಬೆಳಗಾವಿ-ಪರಕನಟ್ಟಿ-ಗೋಕಾಕ-ಯಾದವಾಡ ನಡುವೆ 65 ಕಿ.ಮೀ ಉದ್ದದ ಹೊಸ ರೈಲು ಮಾರ್ಗ ನಿರ್ಮಾಣದ ಅಗತ್ಯವನ್ನೂ ಸಂಸದರು ಪ್ರಸ್ತಾಪಿಸಿದರು. ಈ ಭಾಗದಲ್ಲಿ ಸಿಮೆಂಟ್ ಉದ್ಯಮಗಳು ಹಾಗೂ ಸಕ್ಕರೆ ಕಾರ್ಖಾನೆಗಳು ಇರುವುದರಿಂದ ಸಾರ್ವಜನಿಕರು ಮತ್ತು ಉದ್ಯಮಿಗಳ ಬೇಡಿಕೆಯಂತೆ ರೈಲ್ವೆ ಬೋರ್ಡ್‌ಗೆ ಪುನಃ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದರು.ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸವದತ್ತಿ ರೇಣುಕಾದೇವಿ ಕ್ಷೇತ್ರಕ್ಕೆ ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದು, ಈ ಮಾರ್ಗದ ಸಮೀಕ್ಷೆ ಕಾರ್ಯವನ್ನು ಮೊದಲ ಹಂತವಾಗಿ ಕೈಗೊಳ್ಳುವಂತೆ ಸಂಸದರು ಸಲಹೆ ನೀಡಿದರು. ಸಮೀಕ್ಷೆಗೆ ಅಂದಾಜು ₹ 70 ಲಕ್ಷ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಪಿಎಂ ಅಮೃತ್ ಭಾರತ್ ಸ್ಟೇಶನ್ ಯೋಜನೆಯಡಿ ಬೆಳಗಾವಿ ಹಾಗೂ ಘಟಪ್ರಭಾ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಗಳಿಗೆ ವೇಗ ನೀಡುವಂತೆ ಮಹಾ ಪ್ರಬಂಧಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಬೆಳಗಾವಿ ರೈಲು ನಿಲ್ದಾಣಕ್ಕೆ ಪರ್ಯಾಯವಾಗಿ ಸಾಂಬ್ರಾ ಅಥವಾ ದೇಸೂರ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಯಿತು. ಭವಿಷ್ಯದಲ್ಲಿ ಈ ಯೋಜನೆಗೆ ಆದ್ಯತೆ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.ಬೆಳಗಾವಿ-ಮಣಗೂರ ನಡುವಿನ ರೈಲು ಸಂಚಾರ ಪುನರಾರಂಭದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ಸಿಕಂದರಾಬಾದ್, ಹೈದರಾಬಾದ್ ಹಾಗೂ ಚಾರ್ಲಪಲ್ಲಿ ಸಂಪರ್ಕ ರೈಲು ಸೇವೆಯನ್ನು ಬೆಳಗಾವಿಯಿಂದ ವಿಸ್ತರಿಸುವ ಸಾಧ್ಯತೆಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಬೆಂಗಳೂರು-ಮುಂಬೈ ನಡುವೆ ಹೊಸ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆ ಈಗ ಕೇಂದ್ರ ರೈಲ್ವೆ ಸಚಿವಾಲಯದ ಪರಿಗಣನೆಯಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸೇವೆ ಆರಂಭವಾದರೆ ಬೆಳಗಾವಿ ಮಾರ್ಗವಾಗಿ ಬೆಂಗಳೂರು-ಮುಂಬೈ ಪ್ರಯಾಣ ಕೇವಲ 23 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಇದಲ್ಲದೆ, ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಬೆಳಗಾವಿ-ಲೋಂಡಾ-ಗೋವಾ ನಡುವೆ ಹೊಸ ರೈಲು ಸೇವೆ ಆರಂಭಿಸುವಂತೆ ಸಂಸದ ಶೆಟ್ಟರ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.