ಕನ್ನಡಪ್ರಭ ಪ್ರಕಟಿಸಿದ್ದ ವರದಿಯ ಫಲಶೃತಿ । ಶಾಲೆಯ 200 ಮೀ. ವ್ಯಾಪ್ತೀಲಿ ನಿರ್ಬಂಧ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪರಿಮಿತಿ 200 ಮೀಟರ್ ಒಳಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ವೇಳೆ ಬೆಳಿಗ್ಗೆ 8ರಿಂದ 10.30ರವರೆಗೆ ಹಾಗೂ ಶಾಲೆಯಿಂದ ನಿರ್ಗಮಿಸುವ ವೇಳೆ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಎಲ್ಲಾ ರೀತಿಯ ಭಾರಿ ವಾಹನಗಳ (ಟಿಪ್ಪರ್, ಭಾರಿ ಲಾರಿಗಳು ಹಾಗೂ ಇತರೆ ಭಾರಿ ಸರಕು ಸಾಗಣಿಕೆ ವಾಹನಗಳು) ಸಂಚಾರ/ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶ ಹೊರಡಿಸಿದ್ದಾರೆ.‘ಇಂದು ಶಾಲಾರಂಭ: ಟಿಪ್ಪರ್ ಹಾವಳಿಗೆ ಸಿಗುವುದೇ ಮುಕ್ತಿ?’ ಎಂಬ ಶೀರ್ಷಿಕೆಯಡಿ ಜೂ.1ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಇದರ ಫಲಶೃತಿಯಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಸೂಚಿತ ಸಮಯವಲ್ಲದೆ ಇನ್ನುಳಿದ ಸಮಯದಲ್ಲಿಯೂ ಸಹ ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು 30 ಕಿ.ಮೀ ವೇಗದ ಮಿತಿಯಲ್ಲಿರಬೇಕು. ವಾಹನಗಳು ಸಾಮರ್ಥ್ಯಕಿಂತ ಹೆಚ್ಚಿನ ಭಾರವನ್ನು ಸಾಗಿಸಬಾರದು. ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು ಕರ್ಕಶ (ಹಾರ್ನ್) ಶಬ್ಧಗಳನ್ನು ಮಾಡಬಾರದು. ಶಾಲಾ ಪರಿಮಿತಿಯಲ್ಲಿ ಯಾವುದೇ ಭಾರಿ ವಾಹನಗಳನ್ನು ನಿಲ್ಲಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ.
ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿದ್ದು, ವಿವಿಧ ಭಾಗಗಳಲ್ಲಿ ಟಿಪ್ಪರ್, ಭಾರಿ ಸರಕು ಸಾಗಣಿಕೆ, ಗಣಿಗಾರಿಕೆಯ ಕಲ್ಲು, ಮರಳು, ಖನಿಜಗಳನ್ನು ಸಾಗಿಸುವ ವಾಹನಗಳಿಂದ ಸಂಚಾರ ದಟ್ಟಣೆ, ಅಪಘಾತಗಳ ಸಂಭವ ಹೆಚ್ಚಾಗುತ್ತಿವೆ. ಇದರಿಂದ ಶಾಲಾ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದಾಗಿ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ದಟ್ಟಣೆ ಮತ್ತು ಅಪಘಾತಗಳನ್ನು ತಡೆಯುವ ಉದ್ದೇಶದಿಂದ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಶಾಲೆಗಳ ಪ್ರಾರಂಭ ಮತ್ತು ಬಿಡುವ ಸಮಯದಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದ್ದಾರೆ.