ಹುಬ್ಬಳ್ಳಿ:
ಎರಡು ನಗರಗಳ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆಗಳಾಗದೇ ಒಂದೇ ಪಾಲಿಕೆಯಾಗಿ ಮುಂದುವರಿಯುವುದು ಸೂಕ್ತ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ.ಮಾಧ್ಯಮಗೋಷ್ಠಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಇದ್ದ ಸನ್ನಿವೇಶದಲ್ಲಿ ಅವಳಿ ನಗರಕ್ಕೆ ಹೆಚ್ಚಿನ ಅನುದಾನ ಬರಬೇಕು ಎನ್ನುವ ಉದ್ದೇಶದಿಂದ ಪ್ರತ್ಯೇಕ ಪಾಲಿಕೆ ಅಗತ್ಯತೆ ಇತ್ತು. ಬದಲಾದ ಸನ್ನಿವೇಶದಲ್ಲಿ ಪ್ರತ್ಯೇಕ ಪಾಲಿಕೆ ಆದರೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಅದಕ್ಕಾಗಿ ತಮ್ಮ ನಿಲುವಿನಲ್ಲಿ ಬದಲಾವಣೆಯಾಗಿದೆ. ನಾನಷ್ಟೇ ಅಲ್ಲದೇ, ಕೇಂದ್ರ ಸಚಿವರಿಗೂ, ಸ್ಥಳೀಯ ಶಾಸಕರ ಹಾಗೂ ಪ್ರತ್ಯೇಕ ಪಾಲಿಕೆ ಹೋರಾಟಗಾರರ ಜತೆಯೂ ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಈ ಹಿಂದೆ ರಾಜ್ಯ ಸರ್ಕಾರದ ಅನುದಾನದ ಮೇಲೆ ಅವಲಂಬಿಸಬೇಕಿತ್ತು. ಆಗ ದೊಡ್ಡ, ಸಣ್ಣ ಪಾಲಿಕೆ ಎಂದು ವಿಭಜಿಸದೇ ಎಲ್ಲ ಪಾಲಿಕೆಗಳಿಗೆ ಸಮಾನವಾಗಿಯೇ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಹೀಗಾಗಿ ಪ್ರತ್ಯೇಕ ಪಾಲಿಕೆಯಾದರೆ ಪ್ರತ್ಯೇಕ ಅನುದಾನ ಬರಲಿದೆ ಎಂಬ ಕಾರಣಕ್ಕೆ ಪ್ರತ್ಯೇಕ ಪಾಲಿಕೆಗೆ ಒತ್ತಾಯಿಸಲಾಗಿತ್ತು. ಅಲ್ಲದೇ, ಹೋರಾಟ ಮಾಡಿದ್ದೇವು. ಆದರೆ, ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದಲ್ಲಿ ನಗರದ ಜನಸಂಖ್ಯೆ ಆಧಾರದ ಮೇಲೆ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. ಧಾರವಾಡ ಪ್ರತ್ಯೇಕ ಆಗುವುದರಿಂದ ಅವಳಿ ನಗರದ ಜನಸಂಖ್ಯೆಯೂ ವಿಭಜನೆಗೊಂಡು ಹುಬ್ಬಳ್ಳಿ ಹಾಗೂ ಧಾರವಾಡಕ್ಕೂ ಅನುದಾನ ದೊರೆಯುವುದಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಇದಕ್ಕೆ ಅವಕಾಶ ನೀಡಬಾರದು ಎನ್ನುವುದಕ್ಕಾಗಿ ಹಿಂದಿದ್ದ ಧಾರವಾಡ ಪ್ರತ್ಯೇಕ ಪಾಲಿಕೆ ಪರವಾದ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.2011ರ ಜನಗಣತಿ ಪ್ರಕಾರ ಅವಳಿ ನಗರದ ಜನಸಂಖ್ಯೆ 12 ಲಕ್ಷ ಇದೆ. 16ನೇ ಹಣಕಾಸು ಆಯೋಗದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಿಗೆ ವಾರ್ಷಿಕ ₹ 500ರಿಂದ ₹ 1000 ಕೋಟಿ ಅನುದಾನ ದೊರೆಯಲಿದೆ. ಇದಲ್ಲದೇ ಬೇರೆ ಬೇರೆ ಯೋಜನೆಗಳಿಂದಲೂ ಅನುದಾನ ಬರುತ್ತದೆ. ಪ್ರತ್ಯೇಕ ಪಾಲಿಕೆ ಆದರೆ, ಇದ್ಯಾವ ಅನುದಾನಕ್ಕೂ ನಮ್ಮ ಪಾಲಿಕೆಗಳು ಅರ್ಹವಾಗುವುದಿಲ್ಲ ಎಂದರು.
ಠರಾವು ಪಾಸ್ ಮಾಡಲಿ:
ಹಿಂದೆ ಪ್ರತ್ಯೇಕ ಪಾಲಿಕೆಗೆ ಮಹಾನಗರ ಪಾಲಿಕೆ ಠರಾವು ಪಾಸ್ ಮಾಡಿತ್ತು. ಆದರೆ, ಇದೀಗ ಪ್ರತ್ಯೇಕ ಪಾಲಿಕೆ ಬೇಡ ಎನ್ನುವ ಠರಾವು ಪಾಸ್ ಮಾಡುವಂತೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ಜತೆ ಚರ್ಚಿಸಿ ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರ ಧಾರವಾಡ ಪ್ರತ್ಯೇಕ ಪಾಲಿಕೆ ಮಾಡಿದೆ. ಆದರೆ, ಅದಕ್ಕೆ ಇನ್ನೂ ರಾಜ್ಯಪಾಲರ ಅನುಮೋದನೆ ದೊರೆತಿಲ್ಲ. ಅಷ್ಟರೊಳಗೆ ಪಾಲಿಕೆ ಠರಾವು ಪಾಸ್ ಮಾಡಿದರೆ, ಅದನ್ನು ಸರ್ಕಾರಕ್ಕೆ ಕಳುಹಿಸಿ ಪಾಲಿಕೆ ರಚನೆಯನ್ನು ಹಿಂಪಡೆಯಬಹುದಾಗಿದೆ ಎಂದು ಬೆಲ್ಲದ ಹೇಳಿದರು.