ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಾವು ಕಡಿತ ಉಂಟಾದ ತಕ್ಷಣ ಹತ್ತಿರದ ಪಿಎಚ್‌ಸಿ ಅಥವಾ ಯಾವುದೇ ಆಸ್ಪತ್ರೆಗೆ ತೆರಳಿ ಶೀಘ್ರ ಚಿಕಿತ್ಸೆ ಪಡೆಯಬೇಕು. ನಾಟಿ ವೈದ್ಯರ ಬಳಿ ತೆರಳಿ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು. ಹಾವು ಕಡಿತಕ್ಕೆ ನಾಟಿ ಔಷಧಿ ನೀಡುವ ನಾಟಿ ವೈದ್ಯರ ವಿರುದ್ದ ಸೂಕ್ತ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಸೂಚನೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿ, ಹಾವು ಕಡಿತ ಉಂಟಾದ ತಕ್ಷಣದಲ್ಲೇ ಆಸ್ಪತ್ರೆಗೆ ಕರೆತರಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ನೀಡುವ ಅಗತ್ಯ ಔಷಧಿ ಲಭ್ಯ ಇಟ್ಟುಕೊಳ್ಳಬೇಕು. ಮುನ್ನೆಚ್ಚರಿಕೆ ಹಾಗೂ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮನೆ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಹಾಗೂ ಶಾಲಾ ಆವರಣದಲ್ಲಿ ಅನಗತ್ಯ ಗಿಡ ಗಂಟೆಗಳನ್ನು ಸ್ವಚ್ಚಗೊಳಿಸಬೇಕು ಎಂದರು ಹಾಗೂ ಹಾವು ಕಡಿತಕ್ಕೆ ಯಾವುದೇ ಕಾರಣಕ್ಕೆ ನಾಟಿ ವೈದ್ಯರ ಬಳಿ ತೆರಳದೇ ತತ್‌ಕ್ಷಣ ಆಸ್ಪತ್ರೆಗೆ ರೋಗಿಯನ್ನು ಕರೆತರಬೇಕು ಎಂದರು.ಕೆಎಫ್‌ಡಿಗೆ ಕಾರಣವಾಗುವ ಉಣ್ಣೆ ಕಡಿತದಿಂದ ರಕ್ಷಣೆ ಪಡೆಯಲು ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ಡೇಪಾ ಎಣ್ಣೆಯನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ಇಲ್ಲಿನ ಮಕ್ಕಳು ಶಾಲೆಗೆ ಮತ್ತು ಹೊರಗೆ ಹೋಗುವಾಗ ಡೇಪಾ ಎಣ್ಣೆ, ಸಾಕ್ಸ್ ಧರಿಸಿಕೊಂಡು ಹೋಗಬೇಕು. ಜ್ವರ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಒಳಪಡಿಸಬೇಕು ಎಂದು ಎಚ್ಚರಿಕೆ ನೀಡಬೇಕು ಎಂದರು.
ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ದೈನಂದಿನ ಕ್ಷೇತ್ರ ಭೇಟಿಯ ಸಮಯದಲ್ಲಿ ನಿಗದಿತ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ ನಾಶಪಡಿಸುವ ಕಾರ್ಯವನ್ನು ಮುಂದುವರಿಸಬೇಕು. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶುಕ್ರವಾರದಂದು ನಗರ ಪ್ರದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಲಾರ್ವಾ ನಾಶ ಚಟುವಟಿಕೆಗಳನ್ನು ಮುಂದುವರಿಸುವುದು. ಇದರಲ್ಲಿ ಪ್ರಮುಖವಾಗಿ ಹೈ-ರಿಸ್ಕ್ ಪ್ರದೇಶಗಳು, ಸರ್ಕಾರಿ/ಖಾಸಗಿ ಕಚೇರಿಗಳು ಹಾಗೂ ನಿರ್ಮಾಣ ಹಂತದ ಕಟ್ಟಡಗಳ ಸ್ಥಳಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ: ಜಿಲ್ಲೆಯಲ್ಲಿ ಈ ತಿಂಗಳು 2254 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಈವರೆಗೆ 8140 ನಾಯಿ ಕಡಿತ ಪ್ರಕರಣ ದಾಖಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ. ನಾಯಿ ಕಡಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಬೇಕು. ಹೋಟೆಲ್, ದರ್ಶಿನಿಗಳು ಛತ್ರಗಳು, ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಹಾಗೂ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಪದಾರ್ಥ ಹಾಕಬಾರದು ಎಂದು ವಿ.ಅಭಿಷೇಕ್ ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧಿ ದಾಸ್ತಾನು ಲಭ್ಯವಿರುವಂತೆ ಕ್ರಮ ವಹಿಸುವಂತೆ ಸೂಚಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಈವರೆಗೆ 1682 ಪರೀಕ್ಷೆ ನಡೆದಿದ್ದು, 42 ಪಾಸಿಟಿವ್ ಪ್ರಕರಣ ದಾಖಲಾಗಿ ಚಿಕಿತ್ಸೆ ನಡೆಯುತ್ತಿದೆ. ಮಲೇರಿಯಾ 5 ಪ್ರಕರಣ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ ಮಾತನಾಡಿ, 14 ರಿಂದ 15 ವರ್ಷದೊಳಗಿನ ಎಲ್ಲ ವಿದ್ಯಾರ್ಥಿನಿಯರಿಗೆ ಹೆಚ್‌ಪಿವಿ ಲಸಿಕೆ ಹಾಕಿಸಬೇಕು. ವಿದ್ಯಾರ್ಥಿನಿಯರು ತಮ್ಮ ಹತ್ತಿರದ ಪಿಎಚ್‌ಸಿ, ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಈ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಗರ್ಭಗೊರಳಿನ ಕ್ಯಾನ್ಸರ್‌ನ್ನು ತಡೆಗಟ್ಟಬಹುದಾಗಿದ್ದು, ಎಲ್ಲ ಪ್ರೌಢಶಾಲೆಗಳಲ್ಲಿ ಈ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಶಿಕ್ಷಕರು ತಿಳಿಸಬೇಕು ಎಂದರು.ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಡಿಎಚ್‌ಓ ಡಾ.ನಟರಾಜ್, ಆರ್‌ಸಿಎಚ್‌ಒ ಡಾ. ಮಲ್ಲಪ್ಪ, ಇತರೆ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು, ಟಿಎಚ್‌ಒಗಳು ಹಾಜರಿದ್ದರು.
ಜಿಲ್ಲೆಯಲ್ಲಿ ಒಟ್ಟು 226 ಹಾವು ಕಡಿತದ ಪ್ರಕರಣಡಿಎಸ್ಒ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 226 ಹಾವು ಕಡಿತದ ಪ್ರಕರಣಗಳಿದ್ದು, 3 ಸಾವು ಸಂಭವಿಸಿದೆ. ಸಾಗರ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದರು. ಜಿಲ್ಲೆಯಲ್ಲಿ ಈವರೆಗೆ ಕೆಎಫ್‌ಡಿ 123 ಪಾಸಿಟಿವ್ ಪ್ರಕರಣಗಳಿದ್ದು, ಚಿಕಿತ್ಸೆ ನಡೆಸಲಾಗುತ್ತಿದೆ. ಒಟ್ಟು 5 ಸಾವು ಸಂಭವಿಸಿದೆ. ಟಿಕ್ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಈವರೆಗೆ 625 ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ ಅದರಲ್ಲಿ 3 ಟಿಕ್ ಪೂಲ್ ಪಾಸಿಟಿವ್ ಬಂದಿದೆ. ಈವರೆಗೆ 147 ಮಂಗಗಳು ಸಾವನ್ನಪ್ಪಿದ್ದು, ಇದರಲ್ಲಿ 34 ಅಟಾಪ್ಸಿ ನಡೆಸಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ ಎಂದು ತಿಳಿಸಿದರು.