ಕ್ಯಾನ್ಸರ್ ಬಗ್ಗೆ ಭಯಪಡುವ ಅಗತ್ಯವಿಲ್ಲ: ಡಾ. ಕೆ.ಬಿ ಲಿಂಗೇಗೌಡ

| Published : May 03 2024, 01:08 AM IST

ಕ್ಯಾನ್ಸರ್ ಬಗ್ಗೆ ಭಯಪಡುವ ಅಗತ್ಯವಿಲ್ಲ: ಡಾ. ಕೆ.ಬಿ ಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಯಾನ್ಸರ್‌ ಮಾರಕವಲ್ಲದ ರೋಗವಾಗಿದ್ದು, ಮಾರ್ಗದರ್ಶನ ಮತ್ತು ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್‌ನ್ನು ವಾಸಿ ಮಾಡಲು ಸಾಧ್ಯವಿಲ್ಲ ಎಂಬ ಭಯವಿದೆ.

ಕನ್ನಡಪ್ರಭ ವಾರ್ತೆ ತುಮಕೂರುಕ್ಯಾನ್ಸರ್‌ ಮಾರಕವಲ್ಲದ ರೋಗವಾಗಿದ್ದು, ಮಾರ್ಗದರ್ಶನ ಮತ್ತು ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್‌ನ್ನು ವಾಸಿ ಮಾಡಲು ಸಾಧ್ಯವಿಲ್ಲ ಎಂಬ ಭಯವಿದೆ. ಅದನ್ನು ಹೋಗಲಾಡಿಸಲು ಸಿದ್ದಾರ್ಥ ಅಸ್ಪತ್ರೆಯಲ್ಲಿ ಕ್ಯಾನ್ಸರ್‌ ಉಚಿತ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಬಿ ಲಿಂಗೇಗೌಡ ಹೇಳಿದರು.ನಗರದ ಅಗಳಕೊಟೆಯಲ್ಲಿನ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಮೇ 2 ರಿಂದ 31 ರತನಕ ಹಮ್ಮಿಕೊಳ್ಳಲಾಗಿರುವ ಕ್ಯಾನ್ಸರ್‌ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್‌ ರೋಗದ ಬಗ್ಗೆ ಭಯ ಪಡಬೇಕಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿದ್ದು, ಶೇ. 90 ರಷ್ಟು ಗುಣಪಡಿಸಬಹುದು. ಅತ್ಯಾಧುನಿಕ ಚಿಕಿತ್ಸಾ ಮಾದರಿಯಿಂದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬಹುದು ಎಂದರು.

ಉಪ ಪ್ರಾಚಾರ್ಯ ಡಾ.ಜಿ.ಎನ್.ಪ್ರಭಾಕರ್‌ ಮಾತನಾಡಿ, ಕಾಲೇಜಿನಲ್ಲಿ ನೂತನವಾಗಿ ಕಾರ್ಯಾರಂಭವಾಗಿರುವ ಸೂಪರ್ ಸ್ಪೆಷಾಲಿಟಿಯ ಕ್ಯಾನ್ಸರ್ ವಿಭಾಗದಲ್ಲಿ ನುರಿತ ವೈದ್ಯರು ತಂಡ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ರೀತಿಯ ಕ್ಯಾನ್ಸರ್‌ಗೆ ಚಿಕಿತ್ಸೆ ದೊರೆಯುತ್ತದೆ. ಪಡಿತರ ಚೀಟಿ ಹೊಂದಿರುವವರಿಗೆ 5 ಲಕ್ಷ ರು.ವರೆಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಆಯುಷ್ಮಾನ್ ಭಾರತ್‌ನಂತಹ ಸೌಲಭ್ಯಗಳು ಇದ್ದು, ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರದ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ರೋಗಗಳನ್ನು ಪತ್ತೆ ಹಚ್ಚಲು ವಿಶೇಷ ಸ್ತ್ರೀ ರೋಗ ವಿಭಾಗವಿದ್ದು, ನೂತನ ವೈದ್ಯರ ತಂಡವಿದೆ. ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹಾಗೂ ಸುತ್ತಮುತ್ತಲಿನ ಜನರು ಕಾರ್ಯಕ್ರಮದ ಉಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ವಿಭಾಗದ ತಜ್ಞ ಡಾ. ಶರತ್‌ಕುಮಾರ್, ಸರ್ಜಿಕಲ್‌ ಕ್ಯಾನ್ಸರ್‌ ತಜ್ಞೆ ಡಾ.ದಿವ್ಯಾ, ಸ್ತ್ರೀ ರೋಗತಜ್ಞೆ ಡಾ.ಸುವರ್ಣ ಗುಳೆದ್ ಇತರರು ಉಪಸ್ಥಿತರಿದ್ದರು.