ಸಾರಾಂಶ
ಗುರುವಾರ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಮಧ್ವ ಜಯಂತಿ ಅಂಗವಾಗಿ ನಡೆದ ‘ಆಧುನಿಕ ಜೀವನದಲ್ಲಿ ಮಧ್ವಸಿದ್ಧಾಂತದ ಪ್ರಸ್ತುತತೆ’ ಎಂಬ ವಿಚಾರಗೋಷ್ಠಿ ನೆರವೇರಿತು.
ಉಡುಪಿ: ಇತ್ತೀಚೆಗೆ ತೀವ್ರ ಆತಂಕಕ್ಕೆ ಕಾರಣವಾಗಿರುವ ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ಗೆ ಜೀವವಿಲ್ಲ, ಅದೊಂದು ಜಡವಾದ್ದರಿಂದ, ಆ ಬಗ್ಗೆ ಆತಂಕ ಪಡುವ ಕಾರಣವಿಲ್ಲ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ರಾಜಾಂಗಣದಲ್ಲಿ ಶ್ರೀ ಮಧ್ವ ಜಯಂತಿ ಅಂಗವಾಗಿ ನಡೆದ ‘ಆಧುನಿಕ ಜೀವನದಲ್ಲಿ ಮಧ್ವಸಿದ್ಧಾಂತದ ಪ್ರಸ್ತುತತೆ’ ಎಂಬ ವಿಚಾರಗೋಷ್ಠಿ ಉದ್ಘಾಟಿಸಿ, ಸಮಾರೋಪ ಭಾಷಣ ಮಾಡಿದರು.ಎಐ ಎಂದರೆ ಕೃತಕ ಜ್ಞಾನ, ಅದಕ್ಕೆ ಸುಖದುಃಖಗಳಿಲ್ಲ, ಅದಕ್ಕೆ ಭಾವನೆಗಳಿಲ್ಲ, ಭಕ್ತಿ ವೈರಾಗ್ಯಗಳಿಲ್ಲ. ಅದು ಪೆನ್‌ಡ್ರೈವ್‌ನಲ್ಲಿರುವ ಜ್ಞಾನದಂತೆ, ಜಡವಾಗಿರುತ್ತದೆ, ಆದ್ದರಿಂದ ಪೆನ್‌ಡ್ರೈವ್‌ನಂತಿರದೇ ಎಲ್ಲವನ್ನೂ ಗ್ರಹಿಸುವ ರಾಡರ್‌ನಂತೆ ಚೇತನವಾಗಿರಬೇಕು, ಜ್ಞಾನ ನಿತ್ಯ ಪ್ರವರ್ಧಮಾನವಾಗಿರಬೇಕು, ಸಮಕಾಲೀನ ಸ್ಥಿತಿಗತಿಗೆ ಸ್ಪಂಧಿಸುವಂತಿರಬೇಕು ಮತ್ತು ಚೇತನಭರಿತವಾಗಿರಬೇಕು, ಮಧ್ವಸಿದ್ಧಾಂತ ಕೂಡ ಇದನ್ನೇ ಹೇಳುತ್ತದೆ ಎಂದವರು ವಿಶ್ಲೇಷಿಸಿದರು.ತಾವು ಭಕ್ತಿಗೆ ಒಲಿಯುತ್ತೇನೆ ಎಂದು ಕೃಷ್ಣನೇ ಹೇಳಿದ್ದಾನೆ, ಜ್ಞಾನ ಇದ್ದರೇ ಸಾಲದು, ಭಾವನೆಗಳಿರಬೇಕಾಗುತ್ತದೆ, ಆದ್ದರಿಂದ ಕೃಷ್ಣ ಕೇವಲ ಜಡ ಜ್ಞಾನಕ್ಕೆ ಒಲಿಯುವುದಿಲ್ಲ, ಭಕ್ತಿ ಚೇತನಕ್ಕೆ ಒಲಿಯುತ್ತಾನೆ ಎಂದವರು ಹೇಳಿದರು.ವಿದ್ವಾಂಸರಾದ ಕೃಷ್ಣರಾಜ್ ಕುತ್ಪಾಡಿ, ಡಾ. ಪ್ರತೋಷ್ ಎ.ಪಿ. ಮತ್ತು ಡಾ. ಸುದರ್ಶನ್ ವಿಚಾರಗಳನ್ನು ಮಂಡಿಸಿದರು. ವಿದ್ವಾನ್ ಡಾ. ಷಣ್ಮುಖ ಹೆಬ್ಬಾರ್ ಗೋಷ್ಠಿ ನಿರ್ವಹಿಸಿದರು.ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮುಂಬೈ ಉದ್ಯಮಿ ಸುರೇಶ್ ರಾವ್ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದ ಸಂಯೋಜಕ ದುಬೈಯ ಮುರಳಿಧರ ತಂತ್ರಿ ಪಣಿಯಾಡಿ ಸ್ವಾಗತಿಸಿದರು, ವಿದ್ವಾನ್ ಗೋಪಾಲಾಚಾರ್ಯ ನಿರೂಪಿಸಿದರು.