ಬಿಎನ್‌ಎಸ್, ಬಿಎನ್‌ಎನ್‌ಎಸ್‌ನಲ್ಲಿ ಋಣಾತ್ಮಕ ಅಂಶಗಳಿಲ್ಲ: ನ್ಯಾ.ಪ್ರಭಾಕರ ಶಾಸ್ತ್ರಿ

| Published : Apr 27 2024, 01:15 AM IST

ಬಿಎನ್‌ಎಸ್, ಬಿಎನ್‌ಎನ್‌ಎಸ್‌ನಲ್ಲಿ ಋಣಾತ್ಮಕ ಅಂಶಗಳಿಲ್ಲ: ನ್ಯಾ.ಪ್ರಭಾಕರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘ ವತಿಯಿಂದ ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳ ಬದಲಾಗಿ ಜಾರಿಗೆ ಬರಲಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ.ಎನ್.ಎನ್‌‌.ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯರನ್ನು ತಮ್ಮ ಸೇವೆ ಹಾಗೂ ಆಡಳಿತಕ್ಕೆ ಒಗ್ಗಿಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರು ತಮ್ಮ ಕಾನೂನುಗಳ ಮೂಲಕ ಭಾರತದ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದರು. ಸ್ವಾತಂತ್ರ್ಯ ನಂತರವೂ ಮುಂದುವರಿದಿದ್ದ ಕಾನೂನುಗಳು ಇಂದು ಬದಲಾಗುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ ತಿಳಿಸಿದರು.ಅವರು ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘ ವತಿಯಿಂದ ಆಯೋಜಿಸಿದ ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳ ಬದಲಾಗಿ ಜಾರಿಗೆ ಬರಲಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ.ಎನ್.ಎನ್‌‌.ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಪಸಂಖ್ಯಾತರಾಗಿದ್ದ ಬ್ರಿಟಿಷರು ಸ್ಥಳೀಯ ಭಾರತೀಯ ನಿವಾಸಿಗಳ ಮೇಲೆ ವಿವಿಧ ರೀತಿಯ ಕಾನೂನುಗಳ ಮೂಲಕ ಹತ್ತಿಕ್ಕಲು ಯತ್ನಿಸಿದರು.‌ ಆದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿಯೂ, ಬ್ರಿಟಿಷರ ಕಾನೂನಿನ ಬಗ್ಗೆ ನಾವು ತಗ್ಗಿ ಬಗ್ಗಿ ನಡೆದುಕೊಳ್ಳುತ್ತಿದ್ದ ರೀತಿ ಕೊನೆಗೂ ಬದಲಾಗಿದೆ. ಹಿಂದಿನ ಸೆಕ್ಷನ್‌ಗಳನ್ನು ತೆಗೆದು ಹೊಸ ಸೆಕ್ಷನ್‌ಗಳನ್ನು ಜಾರಿಗೊಳಿಸಿದ್ದು, ಆ ಮೂಲಕ ಭಾರತೀಯರ ಜೀವನ ಶೈಲಿಗೆ ಅನುಗುಣವಾದ ಕಾನೂನನ್ನು ರೂಪಿಸಲಾಗಿದೆ. ಇದು ಲೋಕಸಭೆ, ರಾಜ್ಯ ಸಭೆಯಲ್ಲೂ ಅಂಗೀಕಾರಗೊಂಡು ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಆದರೆ ಅವುಗಳ ಬಗ್ಗೆ ಋಣಾತ್ಮಕ ಹಾಗೂ ಧನಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಇದರಲ್ಲಿ ಋಣಾತ್ಮಕ ಅಂಶಗಳು ಖಂಡಿತಾ ಇಲ್ಲ ಎಂದರು.ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಿನೇಶ್ ಹೆಗ್ಡೆ, ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಧೀಶ ಶ್ರೀನಿವಾಸ್ ಸುವರ್ಣ ಉಪಸ್ಥಿತರಿದ್ದರು.ವಕೀಲೆ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು.