ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಬೇಡ: ಬಾಳಪ್ಪ

| Published : Jan 02 2025, 12:31 AM IST

ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಬೇಡ: ಬಾಳಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ಸಾವಿರ ವರ್ಷಗಳ ಹಳೆಯದಾದ ಶಿಲಾ ಸಮಾಧಿ ಹೊಂದಿದ ಹಿರೇ ಬೆಣಕಲ್ ಪ್ರದೇಶದ ಸುತ್ತ ಅಣು ವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಬಾರದು ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಮೂರು ಸಾವಿರ ವರ್ಷಗಳ ಹಳೆಯದಾದ ಶಿಲಾ ಸಮಾಧಿ ಹೊಂದಿದ ಹಿರೇ ಬೆಣಕಲ್ ಪ್ರದೇಶದ ಸುತ್ತ ಅಣು ವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಬಾರದು ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರವು ಸಮತಟ್ಟಾದ 1200 ಎಕರೆ ಭೂಮಿ ಗುರುತಿಸಿ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಿಂದ ಅಧಿಕಾರಿಗಳ ತಂಡ ಜಿಲ್ಲೆಯ ನಾನಾ ಕಡೆಗಳಲ್ಲಿ ಭೂಮಿ ಗುರುತಿಸಲು ಮುಂದಾಗಿದೆ. ಜಿಲ್ಲೆಯ ಕೆಲ ಗ್ರಾಮಗಳ ಭೂಮಿಯನ್ನು ಗುರುತಿಸಲು ಸಂಬಂಧಿಸಿದ ತಹಶೀಲ್ದಾರರಿಂದ ಮಾಹಿತಿ ಪಡೆದಿದ್ದು, ಅದರಂತೆ ಹಿರೇಬೆಣಕಲ್ ಪ್ರದೇಶದ ವ್ಯಾಪ್ತಿಯ ಭೂಮಿಯನ್ನು ಗಂಗಾವತಿ ತಹಶೀಲ್ದಾರರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಿರೇಬೆಣಕಲ್ ಸುತ್ತಮುತ್ತ ಅಣು ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಭೂಮಿ ಗುರುತಿಸಬಾರದು. ಈ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕಗಳು ಮತ್ತು ಬೆಟ್ಟ, ಗುಡ್ಡಗಳ ನೈಸರ್ಗಿಕ ಪರಿಸರ ಇದೆ.

ಇಲ್ಲಿಂದ ಕೇವಲ 20 ಕಿಮೀ ಒಳಗೆ ಅಂಜನಾದ್ರಿ ಪರ್ವತ, 10 ಕಿಮೀ ವ್ಯಾಪ್ತಿಯಲ್ಲಿ ಗಂಗಾವತಿ ನಗರ ಇದ್ದು, ಪಕ್ಕದ 12 ಕಿಮೀ ವ್ಯಾಪ್ತಿಯಲ್ಲಿ ಗಂಡುಗಲಿ ಕುಮಾರ ರಾಮನು ಆಳ್ವಿಕೆ ನಡೆಸಿದ ತಾಣವಿದೆ. ಅಲ್ಲದೇ ಹಿರೇ ಬೆಣಕಲ್ ಗ್ರಾಮ ಮೂರು ಸಾವಿರ ವರ್ಷಗಳ ಹಿಂದಿನ ಮೋರೆರ್ (ಕುಬ್ಜ)ರ ಶಿಲಾ ಸಮಾಧಿಗಳಿವೆ. ಈ ಐತಿಹ್ಯ ಕೇಂದ್ರಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಇನ್ನು ರಾತ್ರೋ ರಾತ್ರಿ ಅಧಿಕಾರಿಗಳು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಬಾರದು. ಈ ಪ್ರದೇಶದ ಜನರ ಮತ್ತು ರೈತರು ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ಕಾರ್ಯಕ್ಕೆ ಮುಂದಾಗಬೇಕು. ಅವೈಜ್ಞಾನಿಕ ಅಣು ವಿದ್ಯುತ್ ಸ್ಥಾವರದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಬಾರದು. ಈ ದೀಶೆಯಲ್ಲಿ ಜಿಲ್ಲಾಡಳಿತ ಸೂಕ್ತ ನಿರ್ಧಾರಕ್ಕೆ ಮುಂದಾಗಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಾಳಪ್ಪ ಎಚ್ಚರಿಕೆ ನೀಡಿದ್ದಾರೆ.