ಹಣೆ ಬರಹದಲ್ಲಿ ಸಿಎಂ ಸ್ಥಾನವಿದ್ರೆ ಯಾರೂ ತಪ್ಸೋಕಾಗಲ್ಲ!

| Published : Oct 24 2025, 01:00 AM IST

ಹಣೆ ಬರಹದಲ್ಲಿ ಸಿಎಂ ಸ್ಥಾನವಿದ್ರೆ ಯಾರೂ ತಪ್ಸೋಕಾಗಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಾರೆಂದು ಯಾರಿಗಾದರೂ ಗೊತ್ತಿತ್ತಾ? ಅದಕ್ಕಿಂತಲೂ ಮುಂದೆ ಜಗದೀಶ ಶೆಟ್ಟರ್ ಸಹ ಅದೇ ರೀತಿ ಮುಖ್ಯಮಂತ್ರಿಯಾದರು. ನಮ್ಮ ಪಕ್ಷದಲ್ಲೂ ಬಹಳಷ್ಟು ಜನರು ಮುಖ್ಯಮಂತ್ರಿ ಆಗಿದ್ದಾರೆ. ಯಾರ ಹಣೆಬರಹದಲ್ಲಿ ಏನಿದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಣಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನಾವೇನೂ ತಲೆಕೆಡಿಸಿಕೊಂಡಿಲ್ಲ: ಎಸ್ಸೆಸ್ಸೆಂ ಹೇಳಿಕೆ । ಬೊಮ್ಮಾಯಿ, ಶೆಟ್ಟರ್‌, ನಮ್ಮ ಪಕ್ಷದಲ್ಲೂ ಅನೇಕರು ಸಿಎಂ ಆದರಲ್ವಾ?

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಾರೆಂದು ಯಾರಿಗಾದರೂ ಗೊತ್ತಿತ್ತಾ? ಅದಕ್ಕಿಂತಲೂ ಮುಂದೆ ಜಗದೀಶ ಶೆಟ್ಟರ್ ಸಹ ಅದೇ ರೀತಿ ಮುಖ್ಯಮಂತ್ರಿಯಾದರು. ನಮ್ಮ ಪಕ್ಷದಲ್ಲೂ ಬಹಳಷ್ಟು ಜನರು ಮುಖ್ಯಮಂತ್ರಿ ಆಗಿದ್ದಾರೆ. ಯಾರ ಹಣೆಬರಹದಲ್ಲಿ ಏನಿದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಣಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ನೀವೂ ಆಕಾಂಕ್ಷಿಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಯಾರ ಹಣೆ ಬರಹದಲ್ಲಿ ಏನಿದೆಯೋ ಅದನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಾವೇನೂ ತಲೆಕೆಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋಡಿ ಮಠದ ಸ್ವಾಮೀಜಿ ನಮ್ಮ ಮನೆಗೆ ಭೇಟಿ ನೀಡಿದ್ದು ನಿಜ. ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರ ಭೇಟಿ ಮಾಡಲೆಂದು ಬಂದಿದ್ದರು. ತಂದೆಯವರ ಆರೋಗ್ಯ ವಿಚಾರಿಸಿದ ಸ್ವಾಮೀಜಿ ಸ್ವಲ್ಪ ಹೊತ್ತು ಇದ್ದು, ಹೋದರು. ಇದನ್ನು ಹೊರತುಪಡಿಸಿದರೆ ಬೇರಾವುದೇ ವಿಚಾರವನ್ನೂ ಕೋಡಿ ಮಠದ ಸ್ವಾಮೀಜಿ ಬಳಿ ಚರ್ಚೆ ನಡೆಸಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ, ಅರ್ಹ, ಸಮರ್ಥವಾಗಿ ಇದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಯಾಕಾಗಬಾರದು ಎಂದಿದ್ದಾರೆ. ಜಾರಕಿಹೊಳಿ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರಷ್ಟೇ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಎಂದು ಎಂಎಲ್‌ಸಿ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಡಿನ್ನರ್‌ ಪಾರ್ಟಿ ಅಶೋಕ್ ಪಕ್ಷದಲ್ಲಿದೆ:

ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ. ನಮ್ಮದು ಎಲ್ಲ ಹೈಕಮಾಂಡ್ ನಿರ್ಧರಿಸುವ ಪಕ್ಷವಾಗಿದೆ. ನಮ್ಮ ದೆಹಲಿಯ ನಾಯಕರು ಇದನ್ನೆಲ್ಲಾ ನಿರ್ಧಾರ ಮಾಡುತ್ತಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಬಿಹಾರ ಚುನಾವಣೆಗೆ ಹಣವನ್ನು ಹೊಂದಿಸಲು ಡಿನ್ನರ್ ಪಾರ್ಟಿ ಅಂದಿದ್ದಾರೆ. ಅದೆಲ್ಲಾ ಆರ್‌. ಅಶೋಕ್‌ರ ಪಕ್ಷದಲ್ಲಿದೆ. ನಮ್ಮ ಪಕ್ಷದಲ್ಲಲ್ಲ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ತಿರುಗೇಟು ನೀಡಿದರು.

- - -

-23ಕೆಡಿವಿಜಿ7, 8, 9.ಜೆಪಿಜಿ: ಎಸ್.ಎಸ್.ಮಲ್ಲಿಕಾರ್ಜುನ.