ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರಕೃತಿಗೆ ಪೂಜೆ ಸಲ್ಲಿಸುವುದು ನಮ್ಮ ಸಂಸ್ಕೃತಿ. ಕಾವೇರಿ ಆರತಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ತಾಲೂಕಿನ ಗಗನಚುಕ್ಕಿಯಲ್ಲಿ ನಡೆಯುತ್ತಿರುವ ಜಲಪಾತೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಾವೇರಿ ಆರತಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಇದರ ಯೋಜನೆ ತಯಾರಾಗುತ್ತಿದೆ. ಕೆಲ ರೈತಸಂಘಗಳು ಈ ಆಚರಣೆಗೆ ವಿರೋಧ ಮಾಡಿ ನ್ಯಾಯಾಲಯಕ್ಕೂ ಹೋಗಿದ್ದಾರೆ. ಆದರೆ, ಪ್ರಕೃತಿ ಮಾತೆಗೆ ಪೂಜೆ, ಆರತಿ ಮಾಡಲು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕಾವೇರಿ ನಮ್ಮೆಲ್ಲರ ಪುಣ್ಯ ಮಾತೆ. ಅನ್ನ, ಜನ್ಮ, ಬದುಕು ನೀಡಿದ್ದಾಳೆ. ಕೊಡಗಿನಿಂದ ಹರಿದು ಅರಬ್ಬಿ ಸಮುದ್ರದವರೆಗೂ ಎಲ್ಲರ ಬದುಕು, ಕುಡಿಯುವ ನೀರು, ವ್ಯವಸಾಯ, ವಿದ್ಯುತ್ ಉತ್ಪಾದನೆ, ಮೀನುಗಾರಿಕೆ ಸೇರಿ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾಳೆ ಎಂದು ಹೇಳಿದರು.ಮಳವಳ್ಳಿಯಲ್ಲಿ ಕಾವೇರಿ ನೀರು ಗಗನದ 300 ಅಡಿ ಎತ್ತರದಿಂದ ಬೀಳುತ್ತಿದೆ. ರಾಜ್ಯದಲ್ಲಿ 544 ಚಿಕ್ಕ ಹಾಗೂ ದೊಡ್ಡ ಜಲಪಾತಗಳಿವೆ. ಶಿವಮೊಗ್ಗದಲ್ಲಿ ಬಹಳ ಎತ್ತರದ ಜಲಪಾತ ಇದೆ. ಪ್ರಕೃತಿಯ ವೈಭವ ಕಣ್ತುಂಬಿಕೊಂಡು ಪೂಜಿಸಿದರೆ ನಮ್ಮ ಸಂಸ್ಕೃತಿ ಉಳಿವಿಗೆ ಶಕ್ತಿ ನೀಡಿದಂತಾಗುತ್ತದೆ ಎಂದರು.
ಜಿಲ್ಲೆಗೆ 2 ಸಾವಿರ ಕೋಟಿ ರು. ಅನುದಾನ ಬಿಡುಗಡೆ:ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಅವಧಿಯಲ್ಲಿ ಇಡೀ ರಾಜ್ಯದ ಇತಿಹಾಸದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ 2 ಸಾವಿರ ಕೋಟಿ ರು. ಅನುದಾನ ನೀಡಲಾಗಿದೆ. ಇದುವರೆಗೂ 1970 ಕೋಟಿ ರು. ಅನುದಾನ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ. ಇದು ಸುಳ್ಳಾದರೆ ವಿರೋಧ ಪಕ್ಷದವರು ಪರಿಶೀಲಿಸಬಹುದು ಎಂದರು.
ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ನನ್ನ ಎರಡು ಕಣ್ಣುಗಳಿದ್ದಂತೆ. ರೈತರ ಬದುಕು ಹಾಗೂ ಅಭಿವೃದ್ಧಿಗೆ ಎಲ್ಲ ರೀತಿಯ ಕಾರ್ಯಕ್ರಮ ರೂಪಿಸಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದರು.ಸೇತುವೆ ನಿರ್ಮಾಣಕ್ಕೆ ಕ್ರಮ ಭರವಸೆ:
ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಶ್ರಮದಿಂದ 300 ಕೋಟಿ ರು. ಅನುದಾನ ಮಂಜೂರಾತಿ ನೀಡಲಾಗಿದೆ. ಬ್ಲಫ್‌ಗೆ ಹೋಗಲು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಇಂಧನ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಮನುಷ್ಯನಿಗೆ ಅಮೂಲ್ಯ ವಸ್ತು ಒಳ್ಳೆಯ ಮನಸ್ಸು. ಸ್ವಾರ್ಥಕ್ಕಿಂತ ಹೆಚ್ಚು ಮೌಲ್ಯ ತ್ಯಾಗಕ್ಕಿದೆ. ಈ ಸರ್ಕಾರದ ಮೇಲೆ ನಂಬಿಕೆ ಇಟ್ಟುಕೊಂಡು 2028ಕ್ಕೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು. ನಿಮ್ಮ ಜೊತೆ ನಾವಿರುತ್ತೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ದಿನೇಶ್‌ಗೂಳಿಗೌಡ, ಮಧು ಜಿ.ಮಾದೇಗೌಡ, ಪಿ.ರವಿಕುಮಾರ್ , ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣೇಗೌಡ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಆಂಧ್ರಪ್ರದೇಶದ ಮಾಜಿ ಶಾಸಕ ಶ್ರೀಧರ್ ಹೆಗಡೆ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾಜುನ ಬಾಲದಂಡಿ, ಕಾನೀನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ಮತ್ತಿತರರಿದ್ದರು.