ಕೇಂದ್ರ ಸರ್ಕಾರ ನರೇಗಾ ಹೆಸರಿನ ಬದಲು ಜಿ.ರಾಮ್‌ಜಿ ಎಂಬ ಹೆಸರನ್ನು ಬದಲಾಯಿಸಿದ್ದಾರೆ ಹೊರತು ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಡವರಿಗೆ ಕೂಲಿ ಕೊಡುವುದು ನಿರಂತರವಾಗಿ ನಡೆಯುತ್ತದೆ. ರಾಜ್ಯ ಸರ್ಕಾರ ಈ ಯೋಜನೆ ಬಗ್ಗೆ ಜನರನ್ನು ದಿಕ್ಕು ತಪ್ಪಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾಜಿ ಪ್ರಧಾನಿ ದೇವೇಗೌಡರ ಹೋರಾಟ, ಬೆವರಿನ ಹನಿನಿಂದ ಕಟ್ಟಿರುವ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬುಡಸಮೇತ ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಚಿವ ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಪಟ್ಟಣದ ಹೊರ ವಲಯದ ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ನೆರೆವೇರಿಸಿ ಮಾತನಾಡಿ, ಜೆಡಿಎಸ್ ಮಂಡ್ಯ ಜಿಲ್ಲೆಯಿಂದ ಬುಡಸಮೇತ ಓಡಿಸಲು ನಿಮ್ಮಿಂದ ಸಾಧ್ಯವೇ ಎಂದು ಸಚಿವರನ್ನು ಪ್ರಶ್ನಿಸಿದರು.

ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಸ್ಥಾನಗಳಲ್ಲೂ ಜೆಡಿಎಸ್ ಪರ ಫಲಿತಾಂಶ ಬರಲಿದೆ. 7 ಸ್ಥಾನಗಳನ್ನು ಗೆದ್ದು ನಿಮಗೆ ಉತ್ತರ ನೀಡುತ್ತೇವೆ ಎಂದರು.

ಕೇಂದ್ರ ಸರ್ಕಾರ ನರೇಗಾ ಹೆಸರಿನ ಬದಲು ಜಿ.ರಾಮ್‌ಜಿ ಎಂಬ ಹೆಸರನ್ನು ಬದಲಾಯಿಸಿದ್ದಾರೆ ಹೊರತು ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಡವರಿಗೆ ಕೂಲಿ ಕೊಡುವುದು ನಿರಂತರವಾಗಿ ನಡೆಯುತ್ತದೆ. ರಾಜ್ಯ ಸರ್ಕಾರ ಈ ಯೋಜನೆ ಬಗ್ಗೆ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದರು.

ನರೇಗಾದ ಹೆಸರಿನಲ್ಲಿ ನೀಡುತ್ತಿರುವ ಸೌಲಭ್ಯ ಕಡಿತಗೊಳಿಸಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಹರಡುತ್ತಿದ್ದಾರೆ. ಆದರೆ, ರಾಜ್ಯದ ಜನರು ದಡ್ಡರಲ್ಲ. ಪ್ರಧಾನಿ ಮೋದಿ ಬಡ ಕುಟುಂಬ ಹಾಗೂ ಹಿಂದುಳಿದ ಸಮಾಜದಿಂದ ಬಂದಿದೆ. ಬಡವರ ಬಗ್ಗೆ ಕಾಳಜಿ ಇದೆ. ಬಡವರಿಗಾಗಿ ವಿಶೇಷ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರು.

ವಿಶ್ವಕರ್ಮ ಎಂಬ ಕಾರ್ಯಕ್ರಮದಂತಹ ಒಂದು ಕಾರ್ಯಕ್ರಮವನ್ನು 60 ವರ್ಷ ದೇಶ ಆಳಿದ ಕಾಂಗ್ರೆಸ್ ನೀಡಿಲ್ಲ. ಬಡವರು ಹಾಗೂ ದಲಿತರಿಗಾಗಿ ಒಂದು ವಿಶೇಷ ಕಾರ್ಯಕ್ರಮ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಗಂಗ ಕಲ್ಯಾಣ ಯೋಜನೆ ಜಾರಿಗೆ ತಂದರು. ವೋಟ್‌ಚೋರಿ ಎನ್ನುವುದು ಶುದ್ಧ ಸುಳ್ಳು. ಇವಿಎಂ ತಪ್ಪಾಗಿದ್ದರೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲ್ಲಿಲ್ಲ. ಕಾಂಗ್ರೆಸ್ ಕನಸು ಎಂದಿಗೂ ನನಸು ಆಗುವುದಿಲ್ಲ ಎಂದರು.

ಇದೇ ವೇಳೆ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿ ಕಂಸಾರ, ಮುಖಂಡರಾದ ಜವರೇಗೌಡ, ಮೆಹಬೂಬ್‌ಪಾಷ, ಸಿದ್ದರಾಜು, ನಂದಕುಮಾರ್, ಶ್ರೀಧರ್, ಕಾಂತರಾಜು, ಶಿವಕುಮಾರ್, ಹನುಮಂತು, ಆನಂದ್, ನಾರಾಯಣ್, ಮನು ಸೇರಿದಂತೆ ಇತರರು ಇದ್ದರು.