ಬಂಡಾಯ ಸ್ಪರ್ಧಿಸಿ ಯಾರೂ ಗೆದ್ದಿಲ್ಲ: ಎಲ್‌.ಹನುಮಂತಯ್ಯ

| Published : Apr 20 2024, 01:05 AM IST

ಬಂಡಾಯ ಸ್ಪರ್ಧಿಸಿ ಯಾರೂ ಗೆದ್ದಿಲ್ಲ: ಎಲ್‌.ಹನುಮಂತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಯಾವುದೇ ಬಂಡಾಯವಿದ್ದರೂ ಕಾಂಗ್ರೆಸ್ ಗೆಲುವನ್ನು ತಡೆಯಲಾಗದು. ದೇಶದ ಇತಿಹಾಸದಲ್ಲಿ ಬಂಡಾಯ ಎದ್ದು ಸ್ಪರ್ಧೆ ಮಾಡಿ, ಗೆದ್ದವರು ಯಾರೂ ಇಲ್ಲ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಗೆಲುವನ್ನು ಯಾರೂ ತಡೆಯಲಾಗದು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆಯಲ್ಲಿ ಯಾವುದೇ ಬಂಡಾಯವಿದ್ದರೂ ಕಾಂಗ್ರೆಸ್ ಗೆಲುವನ್ನು ತಡೆಯಲಾಗದು. ದೇಶದ ಇತಿಹಾಸದಲ್ಲಿ ಬಂಡಾಯ ಎದ್ದು ಸ್ಪರ್ಧೆ ಮಾಡಿ, ಗೆದ್ದವರು ಯಾರೂ ಇಲ್ಲ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಕಳೆದ ಸಲ ಕಾಂಗ್ರೆಸ್ ಬೆಂಬಲದಿಂದ ಸುಮಲತಾ ಗೆದ್ದಿದ್ದರು. ಆದರೆ, ದಾವಣಗೆರೆಯಲ್ಲಿ ಜಿ.ಬಿ.ವಿನಯಕುಮಾರ ಗೆಲುವುದು ಸುಲಭವೂ ಅಲ್ಲ ಎಂದರು.

ಚುನಾವಣೆ ಗೆಲ್ಲಲು ನರೇಂದ್ರ ಮೋದಿಯದ್ದು ಭಾವನಾತ್ಮಕ ಪ್ರಣಾಳಿಕೆಯಾದರೆ, ಕಾಂಗ್ರೆಸ್ಸಿನದ್ದು ನಿರ್ದಿಷ್ಟ ಯೋಜನೆಗಳ ಪ್ರಣಾಳಿಕೆಯಾಗಿದೆ. ಮತದಾರರು ಭಾವನಾತ್ಮಕತೆಗೆ ಮಾರುಹೋಗದೇ, ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ನಂಬಿ, ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಹಾಲಕ್ಷ್ಮೀ ಯೋಜನೆಯಡಿ ವರ್ಷಕ್ಕೆ ₹1 ಲಕ್ಷ ನೀಡಲು ಆಲೋಚಿಸಿದ್ದು, ಇದು ಬಿಜೆಪಿ ನಿದ್ದೆಗೆಡಿಸಿದೆ. ಇದು ಸಾಧ್ಯವಾ, ಹಣ ಎಲ್ಲಿಂದ ತರುತ್ತಾರೆಂದು ಬಿಜೆಪಿ ಪ್ರಶ್ನಿಸಿದೆ. ರಾಜ್ಯದ 5 ಗ್ಯಾರಂಟಿ ಘೋಷಿಸಿದಾಗಲೂ ಇದೇ ಬಿಜೆಪಿ ತಕರಾರು ತೆಗೆದಿತ್ತು. ನಾವು ಗ್ಯಾರಂಟಿ ಜಾರಿಗೊಳಿಸಿ, ತಕ್ಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಹಿನ್ನಡೆ ಆಗಿದೆಯೆನಿಸಿದರೂ ಬಡವರ ಮನೆಯಲ್ಲಿ ಹಣ ಓಡಾಡುತ್ತಿದೆಯಲ್ಲವೇ, ಅದು ನಿಜವಾದ ಆರ್ಥಿಕ ಅಭಿವೃದ್ಧಿ. ಶ್ರೀಮಂತರ ಮನೆಯಲ್ಲಿ ಹಣ ಹರಿದರೆ ಅದು ಕಪ್ಪು ಹಣವಾಗುತ್ತದೆ. ಕಾಂಗ್ರೆಸ್ ಏನೇ ಪ್ರಣಾಳಿಕೆ ಘೋಷಿಸಿದರೂ ಬಿಜೆಪಿ ವಿರೋಧಿಸುತ್ತದೆ. ಮತದಾರರನ್ನು ದಾರಿ ತಪ್ಪಿಸಲೆತ್ನಿಸುತ್ತದೆ. ಕಾಂಗ್ರೆಸ್ ಪ್ರಣಾಳಿಕೆ ಪ್ರಾಯೋಗಿಕವಲ್ಲ. ಆದರೆ, ಬಿಜೆಪಿಯದ್ದು ಮಾತ್ರ ಪ್ರಾಯೋಗಿಕವೆಂದು ಬಿಂಬಿಸಲು ಯತ್ನಿಸುತ್ತದೆ ಎಂದು ಕಿಡಿಕಾರಿದರು.

ಹತ್ತು ವರ್ಷದಲ್ಲಿ ಮೋದಿ ಸರ್ಕಾರ ದೇಶದ ಜನರನ್ನು ಭ್ರಮನಿರಸನಗೊಳಿಸಿದೆ. ಅಧಿಕಾರದ ಪೂರ್ವದಲ್ಲಿ‌ ನೀಡಿದ್ದ ಭರವಸೆಗಳ ಯೋಜನೆ ಜಾರಿ ಮಾಡದೇ ಮತದಾರರಿಗೆ ನಿರಾಸೆ ಮೂಡಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಹಿಂದೆ ಸುಮಾರು ₹14 ಸಾವಿರ ಕೋಟಿ ಇದ್ದ ಕಪ್ಪುಹಣ ಈಗ ಬಿಜೆಪಿಯ ಹತ್ತು ವರ್ಷದಲ್ಲಿ ₹30 ಸಾವಿರ ಕೋಟಿ ಆಗಿದೆ. ಈ ಸರ್ಕಾರದಲ್ಲೇ ಭ್ರಷ್ಟಾಚಾರ ದುಪ್ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ವಿ.ಎಚ್. ವೀರಭದ್ರಪ್ಪ, ಬಿ.ಎಂ ಹನುಮಂತಪ್ಪ, ಎಲ್.ಎಂ ಹನುಮಂತಪ್ಪ, ಎಲ್.ಡಿ ಗೋಣೆಪ್ಪ, ಸೋಮಲಾಪುರದ ಹನುಮಂತಪ್ಪ, ಎನ್. ನೀಲಗಿರಿಯಪ್ಪ, ಎಲ್.ಎಂ.ಎಚ್.ಸಾಗರ್, ಹರೀಶ, ಎಚ್.ಹರೀಶ, ಹಿರಿಯ ವಕೀಲರಾದ ಪ್ರಕಾಶ ಪಾಟೀಲ್, ನಾಗರಾಜ, ಚಂದ್ರಶೇಖರ, ಎಂ.ಟಿ ಸುಭಾಶ್ಚಂದ್ರ, ರಮೇಶ್, ಕೃಷ್ಯನಾಯ್ಕ್, ಶ್ಯಾಂ, ಅಂಜಿನಪ್ಪ, ರಾಕಿ, ಮಂಜಪ್ಪ ಹಲಗೇರಿ, ಈಶಣ್ಣ, ಕುಂದುವಾಡ ಮಂಜುನಾಥ ಇತರರು ಇದ್ದರು.

- - -

ಬಾಕ್ಸ್‌ ಲಲ್ಲು ವಿರುದ್ಧ ಕ್ರಮವಿಲ್ಲದ್ದೇ ಬಿಜೆಪಿ ಅಜೆಂಡಾಸಮೀಕ್ಷೆಯೊಂದರ ಪ್ರಕಾರ ಮಧ್ಯಮ ವರ್ಗ ಮತ್ತು ಮೇಲ್ವರ್ಗದವರೇ ಹೆಚ್ಚಾಗಿ ಮೋದಿಯೆಂಬ ಮಾಯಾ ಜಿಂಕೆ ಹಿಂದೆ ಬಿದ್ದಿದ್ದಾರೆ. ಆದರೆ, ಶೋಷಿತ, ಬಡ, ಮಧ್ಯಮ ವರ್ಗದ ವಿರೋಧಿ ಸರ್ಕಾರ ಇದಾಗಿದೆ ಎಂಬ ಬಗ್ಗೆ ಅರಿವು ಮೂಡಿಸಬೇಕಿದೆ. ಸಂವಿಧಾನ ಬದಲಾವಣೆಯನ್ನು ಅಂಬೇಡ್ಕರ್ ಬಂದು ಹೇಳಿದರೂ ಮಾಡುವುದಿಲ್ಲವೆಂದು ಮೋದಿ ಹೇಳಿದ್ದಾರೆ. ಆದರೂ ಸಂವಿಧಾನ ಬದಲಾವಣೆ ಮಾಡುವುದೇ ಬಿಜೆಪಿಯ ಉದ್ದೇಶವೆಂದು ಯುಪಿ ಬಿಜೆಪಿ ಅಭ್ಯರ್ಥಿ ಲಲ್ಲು ಹೇಳಿದ್ದಾರೆ. ಲಲ್ಲು ವಿರುದ್ಧ ಕ್ರಮ ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಮೋದಿ ಅಜೆಂಡಾ ತಿಳಿಯುತ್ತದೆ ಎಂದು ಹನುಮಂತಯ್ಯ ದೂರಿದರು.

- - -

-19ಕೆಡಿವಿಜಿ12: ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿದರು.