ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬಾಲ್ಯವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಮಂಡ್ಯವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆನಂದ್ ತಿಳಿಸಿದರು.ಪಟ್ಟಣದಲ್ಲಿ ಜಿಲ್ಲಾಡಳಿತ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಬಾಲ್ಯ ವಿವಾಹ ಮುಕ್ತ ಮಂಡ್ಯ ಜಿಲ್ಲೆ ಅಭಿಯಾನದಡಿ ನಡೆದ ಬಾಲ್ಯ ವಿವಾಹ ವಿರೋಧಿಸಿ ಜನಜಾಗೃತಿ ಜಾಥಾದಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ತಾಲೂಕಿನಲ್ಲಿ ಜನಜಾಗೃತಿಯನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬಾಲ್ಯ ವಿವಾಹ ಸಮಾಜಕ್ಕೆ ಮಾರಕವಾಗಿದೆ. ತಂದೆ ತಾಯಿಗಳಿಗೂ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಬಾಲ್ಯ ವಿವಾಹದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅವಶ್ಯಕವಾಗಿದೆ ಎಂದರು.
ಹೆಣ್ಣಿಗೆ 18 - ಗಂಡಿಗೆ 21 ವರ್ಷ ತುಂಬುವ ಮುನ್ನವೇ ಮುಂಚಿತವಾಗಿ ವಿವಾಹ ಮಾಡಿದರೇ ಅಪರಾಧವಾಗುತ್ತದೆ. ಬಾಲ್ಯ ವಿವಾಹದಲ್ಲಿ ಪಾಲ್ಗೊಳ್ಳುವ ತಂದೆ ತಾಯಿ ಸೇರಿದಂತೆ ಸಂಬಂಧಿಕರು ತಪ್ಪಿತಸ್ಥರಾಗುತ್ತಾರೆ ಎಂದು ಎಚ್ಚರಿಸಿದರು.ಬಾಲ್ಯ ವಿವಾಹ ತಡೆಯಲು ಪ್ರಬಲ ಕಾನೂನು ಇದ್ದು, ಒಂದು ಲಕ್ಷ ರು. ದಂಡ ಎರಡು ವರ್ಷ ಜೈಲು ಶಿಕ್ಷೆ ಇದ್ದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ಇಂದಿಗೂ ನಡೆಯುತ್ತಿದೆ. ಈ ಬಗ್ಗೆ ಜನರಿಗೆ ಮೂಡಿಸುವ ಉದ್ದೇಶದಿಂದ ಜನಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.
ಬಾಲ್ಯ ವಿವಾಹ ಕಂಡು ಬಂದರೇ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ 112 ಕರೆ ಮಾಡಿ ಮಾಹಿತಿ ನೀಡಿದರೇ ಬಾಲ್ಯ ವಿವಾಹವನ್ನು ತಡೆಯಬಹುದು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸಲು ಹಾಗೂ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಸಮಾಜ ಆಧುನಿಕವಾಗಿ ಮುಂದುವರೆದರೂ ಕೂಡ ಬಾಲ್ಯ ವಿವಾಹ ನಡೆಯುತ್ತಿರುವುದು ದುರಂತ. ಮಕ್ಕಳ ಮೇಲಿನ ದೌರ್ಜನ್ಯ, ಹಕ್ಕುಗಳ ಉಲ್ಲಂಘನೆ, ಶಿಕ್ಷಣ ಹಕ್ಕು, ಅವಕಾಶ ಭಾಗವಹಿಸುವ ಹಕ್ಕು, ವಿಕಾಶದ ಹಕ್ಕು, ಬದುಕು ಹಕ್ಕನ್ನು ಕಸಿಯುವುದೇ ಬಾಲ್ಯ ವಿವಾಹವಾಗಿದೆ ಎಂದರು.
ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹಿಂದಿನಿಂದಲೂ ಹೋರಾಟ ನಡೆದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ನ್ಯಾಯಾಲಯ ಸೇರಿದಂತೆ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.ಇದೇ ವೇಳೆ ತಹಸೀಲ್ದಾರ್ ಲೊಕೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿ ಅರಿವು ಮೂಡಿಸಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಎಂ ಸುಂದರ್, ತಾಪಂ ಇಓ ಶ್ರೀನಿವಾಸ್, ಸಿಡಿಪಿಒ ನಂಜಮ್ಮಣ್ಣಿ, ಬಿಇಓ ವಿ.ಈ ಉಮಾ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಗಮನ ಸೆಳೆದ ಜಾಥಾ:ಬಾಲ್ಯವಿವಾಹ ಮುಕ್ತವಾಗಿಸುವ ಹಿನ್ನೆಲೆಯಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ವಾಕಾಥಾನ್ ಜಾಥಾ ಜನರ ಗಮನ ಸೆಳೆಯಿತು. ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಚಾಲನೆ ನೀಡಿದರು. ಅಂದೋಲನದಲ್ಲಿ ಸಾವಿರಾರು ವಿದ್ಯಾರ್ಥಿಗಳು, ವಕೀಲರು, ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ವಿವಿಧ ಘೋಷಣೆಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.