ಕಾನೂನು ಸಮಸ್ಯೆ ಬಗ್ಗೆ ಯಾರೂ ತಿಳಿಸಿಕೊಡಲಿಲ್ಲ: ಶ್ರೀರಾಮ ಭಜನಾ ಮಂಡಳಿ ಸದಸ್ಯ ವಿರೂಪಾಕ್ಷ

| Published : Feb 09 2024, 01:46 AM IST

ಕಾನೂನು ಸಮಸ್ಯೆ ಬಗ್ಗೆ ಯಾರೂ ತಿಳಿಸಿಕೊಡಲಿಲ್ಲ: ಶ್ರೀರಾಮ ಭಜನಾ ಮಂಡಳಿ ಸದಸ್ಯ ವಿರೂಪಾಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಧ್ವಜಸ್ತಂಭ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದು, ಧ್ವಜಸ್ತಂಭದಲ್ಲಿ ಹನುಮಧ್ವಜ, ರಾಷ್ಟ್ರಧ್ವಜ, ನಾಡಧ್ವಜಗಳನ್ನು ಹಾರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಸಂಬಂಧ ಪಂಚಾಯ್ತಿಯಲ್ಲಿ ಮೂರು ಬಾರಿ ಸಭೆಗಳನ್ನು ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ವೇಳೆ ಪಂಚಾಯ್ತಿಯವರಾಗಲೀ, ಶಾಸಕರಾಗಲೀ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡುವುದರಿಂದ ಕಾನೂನಾತ್ಮಕ ತೊಂದರೆಯಾಗಬಹುದು ಅಥವಾ ಹನುಮಧ್ವಜ ಹಾರಿಸುವುದು ಸರಿಯಲ್ಲ ಎಂದು ತಿಳಿಸಿದ್ದರೆ ನಾವು ನಿರ್ಮಾಣ ಮಾಡುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕ ಸ್ಥಳದಲ್ಲಿ ಧ್ವಜಸ್ತಂಭ ನಿರ್ಮಿಸಿ ಧರ್ಮ ಧ್ವಜ ಹಾರಿಸುವುದು ಸರಿಯಲ್ಲ. ಇದರಿಂದ ಕಾನೂನಾತ್ಮಕ ಸಮಸ್ಯೆ ಉಂಟಾಗುತ್ತದೆ ಎಂಬ ವಿಚಾರವನ್ನು ಶಾಸಕರು ಅಥವಾ ಸ್ಥಳೀಯ ಪಂಚಾಯಿತಿಯವರು ನಮ್ಮ ಗಮನಕ್ಕೆ ತಂದಿದ್ದರೆ ನಾವು ಧ್ವಜಸ್ತಂಭವನ್ನೇ ನಿರ್ಮಿಸುತ್ತಿರಲಿಲ್ಲ ಎಂದು ಶ್ರೀರಾಮ ಭಜನಾ ಮಂಡಳಿ ಸದಸ್ಯ ವಿರೂಪಾಕ್ಷ ಸ್ಪಷ್ಟಪಡಿಸಿದರು.

ಗ್ರಾಮದಲ್ಲಿ ಧ್ವಜಸ್ತಂಭ ನಿರ್ಮಿಸಿ ಹನುಮ ಧ್ವಜ ಹಾರಿಸಲು ನಮ್ಮ ಸಂಘ ಹಾಗೂ ಇತರರು ನಿರ್ಧಾರ ಮಾಡಿ ಈ ಬಗ್ಗೆ ಪಂಚಾಯ್ತಿಗೂ ಅರ್ಜಿ ಸಲ್ಲಿಸಿ ಅನುಮತಿ ಕೇಳಿದ್ದೆವು. ಜೊತೆಗೆ ಶಾಸಕ ಪಿ.ರವಿಕುಮಾರ್ ನಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶ್ರೀಆಂಜನೇಯಸ್ವಾಮಿ ದೇವಾಲಯದ ಮುಂದೆ ಧ್ವಜಸ್ತಂಭ ನಿರ್ಮಿಸಲು ಮನವಿ ಸಲ್ಲಿಸಿದ್ದೆವು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಮನವಿಯನ್ನು ಆಲಿಸಿದ ಶಾಸಕರು, ಈ ಸ್ಥಳದಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡುತ್ತೇನೆ. ನಿಮಗೆ ಅಭಿವೃದ್ಧಿ ಮುಖ್ಯವೋ, ಧ್ವಜಸ್ತಂಭ ಮುಖ್ಯವೋ ಎಂದು ಕೇಳಿದಾಗ, ಹೈಟೆಕ್ ಬಸ್ ನಿಲ್ದಾಣ ಮಾಡುವ ವೇಳೆ ಸ್ತಂಭವನ್ನು ತೆರವುಗೊಳಿಸುವ ಭರವಸೆ ನೀಡಿದ್ದೆವು. ಅವರ ಸಲಹೆ ಮೇರೆಗೆ ರಂಗಮಂದಿರದ ಮುಂಭಾಗ ಧ್ವಜಸ್ತಂಭ ನಿರ್ಮಿಸುವುದಾಗಿ ಅವರಿಗೂ ಹೇಳಿ ನಾವೂ ನಿರ್ಧಾರ ಕೈಗೊಂಡೆವು ಎಂದು ವಿವರಿಸಿದರು.

ಹನುಮಧ್ವಜ ಹಾರಿಸಲೆಂದೇ ಮನವಿ:

ಧ್ವಜಸ್ತಂಭ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದು, ಧ್ವಜಸ್ತಂಭದಲ್ಲಿ ಹನುಮಧ್ವಜ, ರಾಷ್ಟ್ರಧ್ವಜ, ನಾಡಧ್ವಜಗಳನ್ನು ಹಾರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಸಂಬಂಧ ಪಂಚಾಯ್ತಿಯಲ್ಲಿ ಮೂರು ಬಾರಿ ಸಭೆಗಳನ್ನು ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ವೇಳೆ ಪಂಚಾಯ್ತಿಯವರಾಗಲೀ, ಶಾಸಕರಾಗಲೀ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡುವುದರಿಂದ ಕಾನೂನಾತ್ಮಕ ತೊಂದರೆಯಾಗಬಹುದು ಅಥವಾ ಹನುಮಧ್ವಜ ಹಾರಿಸುವುದು ಸರಿಯಲ್ಲ ಎಂದು ತಿಳಿಸಿದ್ದರೆ ನಾವು ನಿರ್ಮಾಣ ಮಾಡುತ್ತಿರಲಿಲ್ಲ. ಈ ಬಗ್ಗೆ ಏಕೆ ನಮಗೆ ಯಾರೊಬ್ಬರೂ ಮನವರಿಕೆ ಮಾಡಿಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧ್ವಜ ಸ್ತಂಭ ನಿರ್ಮಿಸಿ ಅದರಲ್ಲಿ ಹನುಮಧ್ವಜ ಹಾರಿಸುವುದು ನಮ್ಮ ಆಸೆಯಾಗಿದ್ದು, ಇದನ್ನು ಗ್ರಾಮದ ಪ್ರತಿ ಮನೆ ಮನೆಗೂ ತಿಳಿಸಿದ್ದೇವೆ. ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಗ್ರಾಮದವರೆಲ್ಲರೂ ಒಟ್ಟಾಗಿ ತಮ್ಮ ಕೈಲಾದಷ್ಟು ಹಣಕಾಸಿನ ನೆರವು ನೀಡಿದ್ದಾರೆ. ಧ್ವಜಸ್ತಂಭ ನಿರ್ಮಿಸಿ ಅದರಲ್ಲಿ ಮೊದಲು ಹನುಮಧ್ವಜ ಹಾರಿಸಿದ್ದೇವೆ. ಬಳಿಕ ಅದನ್ನು ತೆಗೆದು ಗಣರಾಜ್ಯೋತ್ಸವದಂದು ರಾಷ್ಟ್ರ ಧ್ವಜ ಹಾರಿಸಿದ್ದೇವೆ. ಮತ್ತೆ ಅದನ್ನು ತೆಗೆದು ಹನುಮಧ್ವಜ ಹಾರಿಸಿದ್ದೇ ಮಹಾ ಅಪರಾಧವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಧ್ವಜಸ್ತಂಭ ನಿರ್ಮಾಣ ಮಾಡುವ ವೇಳೆ ಏಕೆ ತಡೆಯಲಿಲ್ಲ. ಅನುಮತಿ ಕೊಡುವ ಮುನ್ನ ಏಕೆ ಕ್ರಮ ವಹಿಸಲಿಲ್ಲ. ಶಾಸಕರು ಹೇಳಿದ ಮಾತಿನಿಂದ ಹಿಂದೆ ಸರಿದಿದ್ದಾದರೂ ಏಕೆ ಎಂದು ಪ್ರಶ್ನೆಗಳ ಸುರಿಮಳೆಗರೆದರು.

ಈ ಎಲ್ಲ ಗೊಂದಲಗಳಿಗೂ ಶಾಸಕರು ಮತ್ತು ಸ್ಥಳೀಯ ಪಂಚಾಯ್ತಿ ಅಧ್ಯಕ್ಷರೇ ಕಾರಣರಾಗಿದ್ದು, ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಂದ್‌ಗೆ ಸಹಕಾರ ನೀಡುವಂತೆ ಎಲ್ಲರಲ್ಲೂ ಮನವಿ ಮಾಡಿದ್ದೇವೆ. ಕೆಲವರು ನಮ್ಮ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರೆ, ಮತ್ತೆ ಕೆಲವರು ಪರೋಕ್ಷ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಯಾವುದೇ ಗದ್ದಲವಿಲ್ಲದೆ ನಾಳೆ ಶಾಂತಿಯುತವಾಗಿ ಬಂದ್ ಮಾಡುತ್ತೇವೆ. ಇದರೊಂದಿಗೆ ರಾಲ್ಲಿ ಮತ್ತು ಪಾದಯಾತ್ರೆಯನ್ನೂ ಮಾಡುತ್ತೇವೆ ಎಂದರು.

ಪಿಡಒ ಲೋಪ:

ಗ್ರಾಪಂ ಸದಸ್ಯ ಮಹೇಶ್ ಮಾತನಾಡಿ, ಗ್ರಾಪಂನಲ್ಲಿ ಮೂರು ಬಾರಿ ಸಭೆ ನಡೆಸಿದಾಗಲೂ ಪಿಡಿಒ ನಮಗೆ ಕಾನೂನು ತೊಡಕಿನ ಮಾಹಿತಿ ನೀಡಬೇಕಿತ್ತು. ಅದನ್ನು ಅವರು ಮಾಡಲಿಲ್ಲ. ಗ್ರಾಪಂ ನಿರ್ಣಯವೇ ಅಂತಿಮ ಎಂಬ ಕಾರಣಕ್ಕೆ ಎಲ್ಲರೂ ಜನರ ಭಾವನೆಗಳಿಗೆ ಬೆಲೆ ನೀಡಿ ಧ್ವಜಸ್ತಂಭದ ಪರವಾಗಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.