5 ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳನ್ನು ಕೂರಿಸಬಾರದು ಎಂಬ ನಿಯಮ : ಮಿತಿ ಪಾಲಿಸೋರೇ ಇಲ್ಲ!

| Published : Sep 04 2024, 02:23 AM IST / Updated: Sep 04 2024, 08:27 AM IST

ಸಾರಾಂಶ

5 ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳನ್ನು ಕೂರಿಸಬಾರದು ಎಂಬ ನಿಯಮವಿದೆ. ಆದರೆ ಅದನ್ನು ಪಾಲಿಸುವವರೇ ಇಲ್ಲ. ಇದರಿಂದ ಭಾರಿ ಗಾತ್ರದ ಪಿಒಪಿ ಗಣೇಶನಿಗೆ ಭಾರಿ ಬೇಡಿಕೆ ಇದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈ ಹಿಂದೆ ಆದೇಶಿಸಿದಂತೆ ಗರಿಷ್ಠ ಐದು ಅಡಿ ಗಣೇಶ ಮೂರ್ತಿ ಇರಬೇಕೆಂಬ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗದಿರುವುದೇ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಸ್‌ (ಪಿಒಪಿ) ಮೂರ್ತಿ ಹಾವಳಿಗೆ ಬಹುಮುಖ್ಯ ಕಾರಣವಾಗಿದೆ.

ಕೆಎಸ್‌ಪಿಸಿಬಿಯು 2018ರಲ್ಲಿ ಐದು ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳನ್ನು ತಯಾರಿಸಬಾರದು ಹಾಗೂ ಪ್ರತಿಷ್ಠಾಪಿಸಬಾರದು ಎಂಬ ನಿಯಮ ವಿಧಿಸಿ ಆದೇಶಿಸಿತ್ತು. ಆದರೆ, ಈ ನಿಯಮ ಹಾಗೂ ಆದೇಶ ಇದೀಗ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ನಗರದಲ್ಲಿ ಭಾರೀ ಗಾತ್ರದ ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.

ಪಿಒಪಿ ನಿರ್ಬಂಧಕ್ಕೆ ಪರ್ಯಾಯ:

ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ನಾಲ್ಕುರಿಂದ ಐದು ಅಡಿಯಷ್ಟೇ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಿಂತ ಎತ್ತರದ ಮೂರ್ತಿಗಳ ನಿರ್ಮಾಣ ಬಹಳ ಕಷ್ಟ. ಒಂದು ಪಕ್ಷ ನಿರ್ಮಾಣಕ್ಕೆ ಮುಂದಾದರೂ ವೆಚ್ಚವೂ ಅಧಿಕಗೊಳ್ಳುತ್ತದೆ. ನಿರ್ಮಾಣದ ಸಮಯವೂ ಹೆಚ್ಚಾಗಲಿದೆ. ಐದು ಅಡಿಗಿಂತ ಹೆಚ್ಚಿನ ಎತ್ತರ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನಿರಾಕರಿಸಿದರೆ, ಪಿಒಪಿ ಮೂರ್ತಿಗಳ ತಯಾರಿಕೆ ನಿಯಂತ್ರಿಸಬಹುದಾಗಿದೆ.

ತ್ಯಾಜ್ಯ ವಿಲೇವಾರಿಯು ಸವಾಲು:

ಬೆಂಗಳೂರಿನಲ್ಲಿ ಬಿಬಿಎಂಪಿಯು ಕಲ್ಯಾಣಿ ಹಾಗೂ ಟ್ಯಾಂಕರ್‌ಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ವಾರ್ಡ್‌ಗಳಿಗೆ ತೆರಳುವ ಸಿಬ್ಬಂದಿ ಮೂರ್ತಿಗಳನ್ನು ವಿಸರ್ಜಿಸಿ ಅದರ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ. ಎತ್ತರವಿರುವ ಮೂರ್ತಿಗಳು ಭಾರವಾಗಿದ್ದು, ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುತ್ತವೆ. ಇದನ್ನು ವಿಲೇವಾರಿ ಮಾಡುವುದು ಕಷ್ಟವಾಗಲಿದೆ. ನಗರದಲ್ಲಿ ಕೆಲ ಕಲ್ಯಾಣಿಗಳಲ್ಲೂ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿಯೂ ಎತ್ತರದ ಮೂರ್ತಿಗಳಿಂದ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗಿ ಕಲ್ಯಾಣಿಗೆ ತೊಂದರೆಯಾಗುತ್ತಿದೆ.5 ಅಡಿ ಎತ್ತರದ ಮೂರ್ತಿ ತಯಾರಿಸಲು 70 ರಿಂದ 80 ಕೆ.ಜಿ ಮಣ್ಣು ಬೇಕಾಗುತ್ತದೆ. 5 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗೆ 100 ಕೆ.ಜಿ.ಗೂ ಅಧಿಕ ಮಣ್ಣು ಬೇಕಾಗುತ್ತದೆ. ಇಂತಹ ಮೂರ್ತಿಗಳನ್ನು ವಿಸರ್ಜಿಸುವುದು ಸುಲಭವಲ್ಲ. ಹೀಗಾಗಿ ಮೂರ್ತಿಯ ಎತ್ತರಕ್ಕೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಅಧಿಕಾರಿಗಳಿಗಿಲ್ಲ ಸ್ಪಷ್ಟ ನಿರ್ದೇಶನ

ಬಿಬಿಎಂಪಿಯ ಕಂದಾಯ ಉಪ ವಿಭಾಗ ಕೇಂದ್ರಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ, ಗಣೇಶ ಮೂರ್ತಿಗಳ ಎತ್ತರ ಬಗ್ಗೆ ಹಿರಿಯ ಅಧಿಕಾರಿಗಳು, ಬಿಬಿಎಂಪಿ, ಹಾಗೂ ಕೆಎಸ್‌ಪಿಸಿಬಿ ಯಾವುದೇ ರೀತಿಯ ನಿರ್ದೇಶನ ನೀಡಿಲ್ಲ. ಹೀಗಾಗಿ, ಅನುಮತಿ ಪಡೆಯುವವರಿಗೆ ಪ್ರತಿಷ್ಠಾಪಿಸುವ ಮೂರ್ತಿಯ ಎತ್ತರದ ಬಗ್ಗೆ ಯಾವುದೇ ನಿರ್ಬಂಧ ವಿಧಿಸುತ್ತಿಲ್ಲ.

ಅನುಮತಿ ದಿನಗಳ ಗೊಂದಲ

ಸಾರ್ವಜನಿಕ ಗಣೇಶ ಉತ್ಸವಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡಲಾಗುತ್ತಿದೆ. ಆದರೆ, ಗರಿಷ್ಠ ಎಷ್ಟು ದಿನ ಗಣೇಶ ಪ್ರತಿಷ್ಠಾಪನೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು ಎಂಬುದರ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಉತ್ತರವಿಲ್ಲ. ಗರಿಷ್ಠ ಒಂದು ತಿಂಗಳು ಅನುಮತಿ ನೀಡಬಹುದು ಎಂದು ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿಯು ಹಾಗೂ ಕೆಎಸ್‌ಪಿಸಿಬಿಯೂ ಸ್ಪಷ್ಟ ಅಧಿಸೂಚನೆ ನೀಡಿಲ್ಲ.

ಗಣೇಶೋತ್ಸವದ ವೇಳೆ ಪ್ರತಿಷ್ಠಾಪಿಸುವ ಮೂರ್ತಿಗಳ ಎತ್ತರಕ್ಕೆ ಯಾವುದೇ ನಿರ್ಬಂಧ ವಿಧಿಸುವ ಬಗ್ಗೆ ಯಾವುದೇ ಆದೇಶವನ್ನು ಈ ಬಾರಿ ಮಾಡಿಲ್ಲ. ಇನ್ನು ಎಷ್ಟು ದಿನ ಗಣೇಶ ಪ್ರತಿಷ್ಠಾಪಿಸಬಹುದು ಎಂಬುದರ ಬಗ್ಗೆ ಬಿಬಿಎಂಪಿ, ಪೊಲೀಸ್‌, ಕೆಎಸ್‌ಪಿಸಿ ಸೇರಿದಂತೆ ವಿವಿಧ ಇಲಾಖೆಯಿಂದ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ಈ ಬಗ್ಗೆ ತೀರ್ಮಾನ ಮಾಡಲಿದೆ.

-ದಯಾನಂದ್‌, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ.