ಪ್ರಾಮಾಣಿಕರನ್ನು ಪುರಸ್ಕರಿಸುವವರೇ ಇಲ್ಲ: ಕಿಮ್ಮನೆ ರತ್ನಾಕರ್

| Published : Nov 16 2025, 01:30 AM IST

ಸಾರಾಂಶ

ನಮ್ಮ ದೇಶದ ಜನಸಂಖ್ಯೆಯಲ್ಲಿ ೩೦ ಕೋಟಿ ಜನರು ಬಡತನದಲ್ಲಿದ್ದಾರೆ. ದೇಶದ ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಸಿವಿನ ವಿರುದ್ಧ ಹೋರಾಟ ನಡೆಸಬೇಕಿದೆ. ಹಸಿವಿಗೆ ಜಾತಿ- ಧರ್ಮ- ಮತ ಯಾವುದೂ ಇಲ್ಲ. ಹಸಿವನ್ನು ನಿವಾರಿಸುವ ಮೂಲಕ ಮಾನವೀಯತೆ, ಮನುಷ್ಯತ್ವದ ಆಧಾರದ ಮೇಲೆ ದೇಶವನ್ನು ಕಟ್ಟಬೇಕು .

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಅದನ್ನು ಪುರಸ್ಕರಿಸುವವರೂ ಇಲ್ಲ. ಇಂತಹ ಸಮಯದಲ್ಲಿ ಪ್ರಾಮಾಣಿಕರನ್ನು ಗುರುತಿಸುವವರು ಯಾರು? ಭ್ರಷ್ಟಾಚಾರದಿಂದ ಕೂಡಿರುವ ವ್ಯವಸ್ಥೆ ಬದಲಾಗಬೇಕಾದರೆ ಪ್ರಾಮಾಣಿಕರನ್ನು ಪುರಸ್ಕರಿಸುವ ಗುಣ ಜನರಲ್ಲಿ ಮೂಡಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಶನಿವಾರ ಕನ್ನಡಸೇನೆ- ಕರ್ನಾಟಕ ವತಿಯಿಂದ ನಡೆದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕೇವಲ ಜನರಷ್ಟೇ ಬದಲಾದರೆ ಸಾಲದು. ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಮೂರೂ ವರ್ಗದವರು ಬದಲಾವಣೆಯಾಗಬೇಕು. ಇವೆಲ್ಲಕ್ಕೂ ಒಂದಕ್ಕೊಂದು ಸಂಬಂಧವಿದೆ. ಎಲ್ಲಿ ಹಕ್ಕಿದೆಯೋ ಅಲ್ಲಿ ಕರ್ತವ್ಯವಿದೆ. ಎಲ್ಲಿ ಕರ್ತವ್ಯವಿದೆಯೋ ಅಲ್ಲಿ ಜವಾಬ್ದಾರಿ ಇದೆ. ಅದನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಈ ಮೂರೂ ಜನರಲ್ಲಿ ಬರುವವರೆಗೆ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುವುದು ಕಷ್ಟ ಎಂದು ಹೇಳಿದರು.

ನಮ್ಮ ದೇಶದ ಜನಸಂಖ್ಯೆಯಲ್ಲಿ ೩೦ ಕೋಟಿ ಜನರು ಬಡತನದಲ್ಲಿದ್ದಾರೆ. ದೇಶದ ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಸಿವಿನ ವಿರುದ್ಧ ಹೋರಾಟ ನಡೆಸಬೇಕಿದೆ. ಹಸಿವಿಗೆ ಜಾತಿ- ಧರ್ಮ- ಮತ ಯಾವುದೂ ಇಲ್ಲ. ಹಸಿವನ್ನು ನಿವಾರಿಸುವ ಮೂಲಕ ಮಾನವೀಯತೆ, ಮನುಷ್ಯತ್ವದ ಆಧಾರದ ಮೇಲೆ ದೇಶವನ್ನು ಕಟ್ಟಬೇಕು ಎಂದು ನುಡಿದರು.

ಉದ್ಯಮ ಇಲ್ಲದಿದ್ದರೆ ಹಸಿವನ್ನು ತಣಿಸುವುದಕ್ಕೆ ಸಾಧ್ಯವಿಲ್ಲ. ಕೊಳ್ಳುವ ಶಕ್ತಿಯನ್ನು ಮನುಷ್ಯನಿಗೆ ಕೊಡಬೇಕು. ದುಡಿದು ತಿನ್ನುವಂತಹ ಮನೋಭಾವವನ್ನು ಸರ್ಕಾರಗಳು ಜನರಲ್ಲಿ ಬೆಳೆಸಬೇಕು. ದುಡಿಮೆಯ ಶಕ್ತಿಯನ್ನು ಕೊಡಲಾಗದಿದ್ದರೆ ಸರ್ಕಾರ ಜನರನ್ನು ಸಾಕಬೇಕಾಗುತ್ತದೆ. ಹಾಗಾಗಿ ಅಧಿಕಾರದಲ್ಲಿರುವವರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಆಡಳಿತ ನಡೆಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

ಮೂರು ದಿನ ಕೂಲಿಗೆ ಹೋಗದಿದ್ದರೆ, ನಾಲ್ಕನೇ ದಿನ ಅಕ್ಕಿ ಸಿಗದಿದ್ದರೆ, ಐದನೇ ದಿನ ಆಸ್ಪತ್ರೆಗೆ ಹೋಗಬೇಕಾದರೆ ಆತ ಸಾಯಬೇಕು ಅಷ್ಟೇ. ಜನರಿಗೆ ಉದ್ಯೋಗ ಸೃಷ್ಟಿಸುವ, ದುಡಿಯುವ ಶಕ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದ ಕಿಮ್ಮನೆ ರತ್ನಾಕರ್, ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಎಲ್‌ಕೆಜಿಯಿಂದ ಪಿಯುಸಿಯವರೆಗೆ ಉಚಿತ ಮತ್ತು ಸಮಾನ ಶಿಕ್ಷಣ ನೀಡುವಂತಹ ವ್ಯವಸ್ಥೆ ಜಾರಿಯಾಗಬೇಕು. ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಬಗ್ಗೆ ಮಾತನಾಡುವವರು ಎಷ್ಟು ಜನ ಪುಸ್ತಕ ಕೊಂಡು ಓದಿದ್ದಾರೆಂದು ಪ್ರಶ್ನಿಸಿದ ರತ್ನಾಕರ್ ಅವರು, ಕನ್ನಡ ಭಾಷೆಯೊಂದೇ ಪ್ರಪಂಚಕ್ಕೇ ಒದಗಿಸುವಷ್ಟು ಸಾಹಿತ್ಯವನ್ನು ಹೊಂದಿದೆ. ಹಾಗಾಗಿ ಕನ್ನಡ ಹೋರಾಟಗಾರರು ಕೂಡ ನಿತ್ಯ ಒಂದೊಂದು ಪುಸ್ತಕ ಓದುವಂತೆ ಸಲಹೆ ನೀಡಿದರು.

ಕನ್ನಡ ಜಾಗೃತಿ ಸಮಾವೇಶ ಉದ್ಘಾಟಿಸಿದ ವಿಶ್ರಾಂತ ಲೋಕಾಯುಕ್ತ ನ್ಯಾ.ಸಂತೊಷ್ ಹೆಗ್ಗಡೆ ಮಾತನಾಡಿ, ಮನುಷ್ಯ ತನಗೆ ಧಕ್ಕಿದ್ದಕ್ಕಷ್ಟೇ ತೃಪ್ತಿಪಟ್ಟುಕೊಂಡರೆ ಜೀವನದಲ್ಲಿ ಸುಖ- ಶಾಂತಿ, ತೃಪ್ತಿಯನ್ನು ಕಾಣಬಹುದು. ಇಲ್ಲದಿದ್ದರೆ ಭ್ರಷ್ಟಾಚಾರ ನಡೆಸಿ ಅಶಾಂತಿಯಿಂದ ನರಳಬೇಕಾಗುತ್ತದೆ ಎಂಬುದಕ್ಕೆ ದೇಶದಲ್ಲಿ ನಡೆದಿರುವ ಹಲವಾರು ಹಗರಣಗಳೇ ಸಾಕ್ಷಿ ಎಂದು ಹೇಳಿದರು.

ದೇಶದಲ್ಲಿ ಬೋಫೋರ್ಸ್‌ ಸೇರಿದಂತೆ ನಡೆದಿರುವ ಬಹುತೇಕ ಹಗರಣಗಳು ಲಕ್ಷ ಲಕ್ಷ ಕೋಟಿಯಲ್ಲಿವೆ. ಅವರೆಲ್ಲ ನೂರಾರು ವರ್ಷ ಬಾಳಿ ಬದುಕಿದವರೇನಲ್ಲ. ಇವತ್ತಿಗೂ ನಮ್ಮ ರಾಜ್ಯದಲ್ಲಿ ೪೦ ಪರ್ಸೆಂಟ್ ೬೦ ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆಡಳಿತ, ವಿರೋಧ ಪಕ್ಷಗಳವರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರು ೧೯೮೫ರಲ್ಲೇ ಒಂದು ಮಾತು ಹೇಳಿದ್ದರು. ನಾನು ಪ್ರಧಾನಿಯಾಗಿ ಒಂದು ರು. ಬಿಡುಗಡೆ ಮಾಡಿದರೆ, ೧೮ ಪೈಸೆಯಷ್ಟು ಮಾತ್ರ ಕೆಲಸವಾಗಿರುತ್ತದೆ ಎಂದು ಭ್ರಷ್ಟಾಚಾರದ ವಿರಾಟ ದರ್ಶನ ಮಾಡಿಸಿದ್ದರು. ಹಾಗಾಗಿ ಪ್ರತಿಯೊಬ್ಬರಲ್ಲೂ ತೃಪ್ತಿ ಎಂಬುದಿದ್ದರೆ ದುರಾಸೆ ಬರಲ್ಲ. ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ಸಂತೃಪ್ತ ಬದುಕು ನಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಕನ್ನಡ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಶಾಸಕ ಪಿ.ರವಿಕುಮಾರ್, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಚಿತ್ರನಟ ಟೆನ್ನಿಸ್‌ಕೃಷ್ಣ, ಕನ್ನಡಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ವಿವಿಧ ಕಲಾ ತಂಡಗಳೊಂದಿಗೆ ಸಾಗಿದ ಕನ್ನಡದ ಮೆರವಣಿಗೆ ಗಾಂಧಿ ಭವನದಲ್ಲಿ ಸಂಪನ್ನಗೊಂಡಿತು.