ಮತದಾನದಿಂದ ಯಾರು ಹೊರಗುಳಿಯಬಾರದು: ಉಮೇಶ್

| Published : Mar 21 2024, 01:06 AM IST

ಸಾರಾಂಶ

ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಿಂದ ಯಾರೊಬ್ಬರು ದೂರ ಉಳಿಯಬಾರದು. 100 ವರ್ಷ ಮೇಲ್ಪಟ್ಟವರೂ ಸೇರಿದಂತೆ ಯುವಕರು ಮತದಾನ ಮಾಡಬೇಕು.

ಹೊಳಲ್ಕೆರೆ: ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಜರುಗಲಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಏ.26ರಂದು ನಡೆಯಲಿದೆ. ಹೀಗಾಗಿ ಅರ್ಹ ಮತದಾರರು ಯಾರು ಮತದಾನದಿಂದ ಹೊರಗುಳಿಯಬಾರದು ಎಂದು ಮತಗಟ್ಟೆ ಮಟ್ಟದ ಅಧಿಕಾರಿ ಟಿ.ಪಿ.ಉಮೇಶ್ ತಿಳಿಸಿದರು.

ಹೊಳಲ್ಕೆರೆ ತಾಲೂಕು ಅಮೃತಾಪುರದಲ್ಲಿ ಮನೆಮನೆ ಸಮೀಕ್ಷೆ ಮೂಲಕ ವಿಶೇಷ ಚೇತನ ಮತದಾರರನ್ನು ಮತ್ತು 85ಕ್ಕಿಂತ ವರ್ಷ ಮೀರಿದ ವೃದ್ಧರು, ಮತಗಟ್ಟೆಗೆ ಬಂದು ಮತದಾನ ಮಾಡಲು ಶಕ್ತರಲ್ಲದವರನ್ನು ಗುರುತಿಸಿ ಅವರಿಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು 12ಡಿ ಫಾರಂ ಸ್ವೀಕೃತಿ ಪಡೆಯುವ ಕಾರ್ಯ ನಿರ್ವಹಣೆಯಲ್ಲಿ ಭಾಗಿ ಮಾತನಾಡಿದರು.

ನಮ್ಮ ಗ್ರಾಮದಲ್ಲಿ 42 ಹಿರಿಯ ವಯಸ್ಕ ಮತದಾರರಿದ್ದು, 12 ಮಂದಿ ವಿಶೇಷ ಚೇತನರು ಇದ್ದಾರೆ. ಇವರು ಮತಗಟ್ಟೆಗೆ ಬಂದು ಮತದಾನ ಮಾಡಲು ಅಶಕ್ತರಾಗಿದ್ದಾರೆ. ಅವರನ್ನು ಗುರುತಿಸಿ ಅವರಿಗೆ ಅಗತ್ಯ ಚುನಾವಣಾ ಮತದಾನ ಮಾಹಿತಿಯ ನೆರವು ನೀಡುವ ಕೆಲಸ ಮಾಡಲಾಯಿತು.

ವಿಶೇಷ ಚೇತನ ಮತದಾರರು ಜಿಲ್ಲಾ ವೈದ್ಯಾಧಿಕಾರಿಗಳಿಂದ ಅಶಕ್ತತೆಯ ಕುರಿತು ಪ್ರಮಾಣ ಪತ್ರ ತರುವ ಕುರಿತು ಮಾಹಿತಿ ನೀಡಲಾಯಿತು. ಗ್ರಾಮದಲ್ಲಿ ವೀಲ್ ಚೇರ್‌ನಲ್ಲಿ ಬಂದು ಮತದಾನ ಮಾಡುವಂತಹ ಯಾವುದೇ ವಿಶೇಷ ಚೇತನ ಮತದಾರರು ಕಂಡುಬಂದಿಲ್ಲ. ಹಿರಿಯ ವಯಸ್ಕ ಮತದಾರರಲ್ಲಿ ಗ್ರಾಮದ ಶತಾಯುಷಿಯಾದ ದೈಹಿಕವಾಗಿ ಅಶಕ್ತರಾಗಿರುವ ಒಬ್ಬರನ್ನು ಅಂಚೆ ಮತದಾನಕ್ಕೆ ಸ್ವೀಕೃತಿ ಪಡೆಯಲಾಯಿತು. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಮತಗಟ್ಟೆ ಅಧಿಕಾರಿಗಳಿದ್ದು, ಅರ್ಹರನ್ನು ಮತಪಟ್ಟಿಗೆ ಸೇರಿಸುವ ಕಾರ್ಯದ ಜೊತೆಗೆ ಮತದಾನ ಜಾಗೃತಿಗಾಗಿ ಸೆಕ್ಟರ್ ಅಧಿಕಾರಿಗಳ ಜೊತೆ ಸ್ವೀಪ್ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ರೀತಿಯ ಚುನಾವಣಾ ಆಯೋಗದ ನಿರಂತರ ಮತದಾನ ಜಾಗೃತಿ ಕಾರ್ಯಕ್ರಮಗಳಿಂದ ನೂರಕ್ಕೆ ನೂರರಷ್ಟು ಮತದಾನ ನಡೆಯಲು ಸಹಾಯಕವಾಗುವುದು ಎಂದು ತಿಳಿಸಿದರು.