ತಾಲೂಕಾಡಳಿತ ಸೌಧದಲ್ಲಿ ರಸಗೊಬ್ಬರ, ಬೀಜ ಮತ್ತು ಪೀಡೆನಾಶಕ ಮಾರಾಟಗಾರರ ಸಭೆಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನಲ್ಲಿರುವ ರಸಗೊಬ್ಬರ, ಬೀಜ ಹಾಗೂ ಪೀಡೆನಾಶಕ ರಸಾಯನಿಕ ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ದರಕ್ಕೆ ಮಾರಾಟ ಮಾಡಬೇಕು ಹಾಗೂ ಯೂರಿಯಾ ರಸಗೊಬ್ಬರದ ಜೊತೆಗೆ ಒತ್ತಾಯ ಪೂರ್ವಕವಾಗಿ ಬೇರೆ ಯಾವುದೇ ವಸ್ತುಗಳ ಲಿಂಕ್ ಮಾಡಿ ಮಾರಾಟ ಮಾಡಬಾರದು ಎಂದು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಎಚ್ಚರಿಸಿದರು.ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ನಡೆದ ತಾಲೂಕು ಮಟ್ಟದ ರಸಗೊಬ್ಬರ, ಬೀಜ ಮತ್ತು ಪೀಡೆನಾಶಕ ರಸಾಯನಿಕ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸಗೊಬ್ಬರ ತಯಾರಿಕಾ ಕಚ್ಚಾ ಸಾಮಗ್ರಿಗಳ ದರದ ಹೆಚ್ಚಳದಿಂದ ಕೆಲವು ರಸಗೊಬ್ಬರಗಳ ದರಗಳು ಹೆಚ್ಚಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಬಳಿ ಖರೀದಿಗಾಗಿ ಬರುವ ರೈತರಿಗೆ ರಸಾಯನಿಕ ಗೊಬ್ಬರಗಳನ್ನು ಆದಷ್ಟು ಹಿತಮಿತವಾಗಿ ಅವಶ್ಯಕತೆಗೆ ತಕ್ಕಂತೆ ಬಳಸಲು ಮನವರಿಕೆ ಮಾಡಿರಿ ಎಂದರು. ರೈತರಿಗೆ ರಸಗೊಬ್ಬರ ಮಾರಾಟ ಮಾಡಿದಾಗ ಅವರಿಗೆ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಸೂಚಿಸಿದರು.ಅರಣ್ಯ ಅತಿಕ್ರಮಣ ಮಾಡಿ ಕೃಷಿ ಮಾಡುತ್ತಿರುವ ರೈತರಿಗೂ ಯೂರಿಯಾ ಪೂರೈಸಲು ಅವಶ್ಯಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರರು ಹೇಳಿದರು.
ರಸಗೊಬ್ಬರ-ಬೀಜದ ಕೊರತೆಯಿಲ್ಲ:
ಸಭೆಯಲ್ಲಿದ್ದ ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಮಾಹಿತಿ ನೀಡಿ, ಹಳಿಯಾಳ-ದಾಂಡೇಲಿ ತಾಲೂಕಿನಲ್ಲಿ ರಸಗೊಬ್ಬರಕ್ಕೆ ಹಾಗೂ ಬಿತ್ತನೆ ಬೀಜಕ್ಕೆ ಯಾವುದೇ ತರಹದ ಕೊರೆತೆಯಾಗಿಲ್ಲ. ಈ ಭಾಗದಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಯೂರಿಯಾ ರಸಗೊಬ್ಬರವನ್ನು ನಿಯಂತ್ರಣ ಮಾಡಲು ಏಪ್ರಿಲ್ ತಿಂಗಳಿನಿಂದಲೇ ರೈತರಿಗೆ ಹಿಡುವಳಿಯನ್ನಾಧರಿಸಿ ಕೆ-ಕಿಸಾನ್ ತಂತ್ರಾಂಶದ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೇರೆ ಎಲ್ಲಾ ನಮೂನೆಯ ರಸಗೊಬ್ಬರಗಳ ಮಾರಾಟವು ಮೊದಲಿನ ವ್ಯವಸ್ಥೆಯಂತೆ (ಆಧಾರ ಹಾಗೂ ಪಿಒಎಸ್ ಮಶೀನ ಮೂಲಕ) ಇರುತ್ತದೆ. ಸದ್ಯ ಇಲ್ಲಿರುವ ಎಲ್ಲಾ ಖಾಸಗಿ ಹಾಗೂ ಸಹಕಾರಿ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಮುಂಗಾರು ಬಿತ್ತನೆ ಹಂಗಾಮು ಹಾಗೂ ಮಳೆ ಸುರಿದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಹಳಿಯಾಳ-ದಾಂಡೇಲಿ ತಾಲೂಕಿನ ಖಾಸಗಿ ಹಾಗೂ ಸಹಕಾರಿ ಸಂಘಗಳ ಮೂಲಕ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.