ಚನ್ನಕೇಶವ ದೇಗುಲ ಪಾರ್ಕಿಂಗ್ ಶುಲ್ಕ ಜಟಾಪಟಿಗೆ ಅಲ್ಪವಿರಾಮ

| Published : Dec 19 2023, 01:45 AM IST

ಚನ್ನಕೇಶವ ದೇಗುಲ ಪಾರ್ಕಿಂಗ್ ಶುಲ್ಕ ಜಟಾಪಟಿಗೆ ಅಲ್ಪವಿರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಕೇಶವ ದೇಗುಲದ ವಾಹನಗಳ ಪಾರ್ಕಿಂಗ್ ಕಳೆದ ದಶಕಗಳಿಂದ ದೇಗುಲದ ವತಿಯಿಂದಲೇ ನಡೆಸುತ್ತಾ ಬಂದಿತ್ತು. ಆದರೆ ಕಳೆದ ಮೂರು ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಪಾರ್ಕಿಂಗ್‌ ಶುಲ್ಕ ವಸೂಲಾತಿಗೆ ಸ್ವತಃ ಜಿಲ್ಲಾಧಿಕಾರಿಗಳು ಆದೇಶ ನೀಡಿದ ಬೆನ್ನಲ್ಲೆ ದೇಗುಲ ವ್ಯವಸ್ಥಾಪನಾ ಸಮಿತಿ ಮತ್ತು ಗುತ್ತಿಗೆದಾರನ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೇಗುಲ ವ್ಯವಸ್ಥಾಪನಾ ಸಮಿತಿ ನೀಡಿದ ಲಿಖಿತ ರೂಪದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಯಿಂದ ನೀಡಿದ ಟೆಂಡರ್‌ ರದ್ದುಪಡಿಸಿದ ಹಿನ್ನೆಲೆಯಲ್ಲಿ ಭಾನುವಾರು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ತಮ್ಮ ಸದಸ್ಯರೊಂದಿಗೆ ಗುತ್ತಿಗೆದಾರರು ಶುಲ್ಕ ವಸೂಲಾತಿ ನಿಲ್ಲಿಸಬೇಕು ಎಂದು ತಿಳಿವಳಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಚನ್ನಕೇಶವ ದೇಗುಲದ ಪಾರ್ಕಿಂಗ್‌ ಶುಲ್ಕ ವಸೂಲಾತಿಗೆ ಸಂಬಂಧಪಟ್ಟಂತೆ ದೇಗುಲ ಮತ್ತು ಪ್ರವಾಸೋಧ್ಯಮ ಇಲಾಖೆಯಿಂದ ಟೆಂಡರ್‌ ಪಡೆದ ಗುತ್ತಿಗೆದಾರನ ನಡುವೆ ನಡೆಯುತ್ತಿದ್ದ ಗೊಂದಲವನ್ನು ಜಿಲ್ಲಾಧಿಕಾರಿ ಬಗೆಹರಿಸಿದ್ದು ಶುಲ್ಕ ವಸೂಲಿ ಜಟಾಪಟಿಗೆ ಅಲ್ಪವಿರಾಮ ದೊರಕಿದಂತಾಗಿದೆ.

ಚನ್ನಕೇಶವ ದೇಗುಲದ ವಾಹನಗಳ ಪಾರ್ಕಿಂಗ್ ಕಳೆದ ದಶಕಗಳಿಂದ ದೇಗುಲದ ವತಿಯಿಂದಲೇ ನಡೆಸುತ್ತಾ ಬಂದಿತ್ತು. ಆದರೆ ಕಳೆದ ಮೂರು ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಪಾರ್ಕಿಂಗ್‌ ಶುಲ್ಕ ವಸೂಲಾತಿಗೆ ಸ್ವತಃ ಜಿಲ್ಲಾಧಿಕಾರಿಗಳು ಆದೇಶ ನೀಡಿದ ಬೆನ್ನಲ್ಲೆ ದೇಗುಲ ವ್ಯವಸ್ಥಾಪನಾ ಸಮಿತಿ ಮತ್ತು ಗುತ್ತಿಗೆದಾರನ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೇಗುಲ ವ್ಯವಸ್ಥಾಪನಾ ಸಮಿತಿ ನೀಡಿದ ಲಿಖಿತ ರೂಪದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಯಿಂದ ನೀಡಿದ ಟೆಂಡರ್‌ ರದ್ದುಪಡಿಸಿದ ಹಿನ್ನೆಲೆಯಲ್ಲಿ ಭಾನುವಾರು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ತಮ್ಮ ಸದಸ್ಯರೊಂದಿಗೆ ಗುತ್ತಿಗೆದಾರರು ಶುಲ್ಕ ವಸೂಲಾತಿ ನಿಲ್ಲಿಸಬೇಕು ಎಂದು ತಿಳಿವಳಿಕೆ ನೀಡಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ಚನ್ನಕೇಶವ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಕಳೆದ ಮೂರು ತಿಂಗಳ ಹಿಂದೆ ದೇಗುಲದಿಂದ ನಡೆಯುವ ಪಾರ್ಕಿಂಗ್ ಶುಲ್ಕ ವಸೂಲಾತಿಯನ್ನು ಹಾಸನ ಜಿಲ್ಲಾಧಿಕಾರಿಗಳು ೫ ವರ್ಷಕ್ಕೆ ಕೇವಲ ೧೦ ಲಕ್ಷ ರು.ಗೆ ಟೆಂಡರ್ ನೀಡಿದ್ದು, ಈ ಬಗ್ಗೆ ದೇಗುಲ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರನ ನಡುವೆ ಗೊಂದಲಕ್ಕೆ ಕಾರಣವಾಯಿತು. ಈ ಬಗ್ಗೆ ಇಲ್ಲಿನ ವ್ಯವಸ್ಥಾಪನಾ ಸಮಿತಿ ಸಭೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವಲ್ಲಿ ಸಫಲವಾಗಿದೆ. ದೇಗುಲದಲ್ಲಿ ನೌಕರರಿಗೆ ವೇತನ ಮತ್ತು ದಾಸೊಹ ನಡೆಸಲು ಹಣವಿಲ್ಲ. ಇದೇ ಪಾರ್ಕಿಂಗ್‌ ಹಣದಿಂದಲೇ ನಡೆಸಬೇಕಿದೆ. ಪ್ರತಿ ವರ್ಷ ದೇಗುಲದಿಂದ ರು. ೬೦ ಲಕ್ಷ , ೭೦ ಲಕ್ಷಕ್ಕೆ ಟೆಂಡರ್ ಆಗಿತ್ತು. ಆದರೆ ಜಿಲ್ಲಾಧಿಕಾರಿಗಳು ೫ ವರ್ಷಕ್ಕೆ ಕೇವಲ ೧೦ ಲಕ್ಷ ರು.ಗೆ ನೀಡುವ ಮೂಲಕ ದೇಗುಲದ ವರಮಾನಕ್ಕೆ ನಷ್ಟವಾಗಿದೆ ಎಂದು ಮನವರಿಕೆ ಮಾಡಿದ ಕಾರಣದಿಂದ ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಯಿಂದ ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ವಸೂಲಾತಿ ರದ್ದುಪಡಿಸಲಾಗಿದೆ ಎಂದು ಆದೇಶ ನೀಡಿದ್ದಾರೆ ಎಂದರು.