ಪಂನ ಬಳಕೆ ಇಲ್ಲದೆ ವಾಹನ ಹರಾಜು ಮಾಡಬೇಕು. ಪಪಂಗೆ ಆದಾಯದ ಮೂಲಗಳೇನು ಎಂಬುದನ್ನು ಹೇಳಬೇಕು

ಕುಕನೂರು: ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರೇ ಇಲ್ಲವಲ್ಲ ಎಂದು ಪಪಂನ ಸದಸ್ಯರೇ ಧ್ವನಿ ಎತ್ತಿದ ಘಟನೆ ಪಟ್ಟಣದ ಸ್ಥಳೀಯ ಪಪಂನ ಆಯವ್ಯಯ ಪೂರ್ವಭಾವಿ ಹಾಗೂ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಜರುಗಿತು. ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಆಯವ್ಯಯ ಪೂರ್ವಭಾವಿ ಹಾಗೂ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಾಧಿಕಾರಿಗಳೇ ಇದು ಸಾರ್ವಜನಿಕ ಸಮಾಲೋಚನಾ ಸಭೆ ಎನ್ನುತ್ತಿರಿ ಇಲ್ಲಿ ಸಾರ್ವಜನಿಕರೇ ಇಲ್ಲವಲ್ಲ ಎಂದು ದೂರಿದರು. ಇದಕ್ಕೆ ಮುಖ್ಯಾಧಿಕಾರಿ ನಾವುಗಳು ಧ್ವನಿವರ್ಧಕ ಮೂಲಕ ಜನರಿಗೆ ತಿಳಿಸಿದ್ದೇವೆ. ಜನರು ಹಾಜರಾಗಿಲ್ಲ ಎಂದು ಉತ್ತರಿಸಿದರು. ಅಲ್ಲದೇ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಮುಖ್ಯಾಧಿಕಾರಿಗಳು ಆಲಿಸಬೇಕು ಎಂದು ಸದಸ್ಯ ಮಲ್ಲು ಚೌದರಿ ಹೇಳಿದರು.

ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಪಪಂನ ಬಳಕೆ ಇಲ್ಲದೆ ವಾಹನ ಹರಾಜು ಮಾಡಬೇಕು. ಪಪಂಗೆ ಆದಾಯದ ಮೂಲಗಳೇನು ಎಂಬುದನ್ನು ಹೇಳಬೇಕು. ಅಮೃತ ಯೋಜನೆಯ ಕಾಮಗಾರಿಗಳಲ್ಲಿ ರಸ್ತೆ ಹದಗೆಟ್ಟಿದ್ದು ಅದನ್ನು ಸರಿಪಡಿಸುವವರಾರು ಎಂದು ಕೇಳಿದರು. ಕುಕನೂರಿನ ಐತಿಹಾಸಿಕ ಸ್ಥಳ, ನಾನಾ ರಸ್ತೆ, ವಾರ್ಡ್‌ಗಳ ಹೆಸರು ಸೂಚಿಸುವ ನಾಮಫಲಕ ಅಳವಡಿಸಬೇಕು ಎಂದು ಹೇಳಿದರು.

ಜೆಸಿಬಿ ಖರೀದಿಯಾಗಿ ಹಲವಾರು ವರ್ಷ ಕಳೆದಿದ್ದರೂ ಸಹ ಅದು ಇನ್ನೂ ರಿಜಿಸ್ಟರ್ ಆಗಿಲ್ಲ.ಅದಕ್ಕೆ ಹೊಣೆ ಯಾರು ಎಂದು ಕೇಳಿದಾಗ ಮುಖ್ಯಾಧಿಕಾರಿಗಳು ಅದು ಅಡಿಟ್ ವರದಿಯಲ್ಲಿ ನೋಂದಣಿ ಆಗಿದೆ. 8 ಲಕ್ಷ ರಿಕವರಿಗಾಗಿ ಹಳೆ ಮುಖ್ಯಾಧಿಕಾರಿಗಳ ಮೇಲೆ ರಿಕವರಿ ಇದೆ ಎಂದರು.

ಪಟ್ಟಣದ ಜವಳದ ಸಂಪರ್ಕಿಸುವ ಕೆಇಬಿ ರಸ್ತೆಯನ್ನು ಸರಿಪಡಿಸಲು ಮುಖಂಡ ಅಂದಪ್ಪ ಜವಳಿ ಕೇಳಿದರು. ಅದರ ಬಗ್ಗೆ ಸರ್ವೆ ಕಾರ್ಯ ಮಾಡಿ ರಸ್ತೆ ಜಾಗ ಸರ್ಕಾರದ ಹಂತದಲ್ಲಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ಹೇಳಿದರು.

ಪಟ್ಟಣದಲ್ಲಿ ಸ್ವಾಗತ ಕಮಾನು, ಸ್ಮಶಾನ ಅಭಿವೃದ್ಧಿ, ನಿವೇಶನದ ಹಂಚಿಕೆ ಪ್ರಯುಕ್ತ ಜಮೀನು ಖರೀದಿ, ಎಲ್.ಇ.ಡಿ ಲೈಟ್ ಅಳವಡಿಕೆ ಕುರಿತು ಪ್ರಸ್ತಾಪಿಸಲಾಯಿತು.

ಪತ್ರಕರ್ತ ನಾಗರಾಜ ಬೆಣಕಲ್ಲ ಮಾತನಾಡಿ, ಪಟ್ಟಣ ಬಸ್ ನಿಲ್ದಾಣ ಎದುರು ಅರ್ಧಕ್ಕೆ ನಿಂತಿರುವ ಪಪಂನ ಮಾರಾಟ ಮಳಿಗೆಗಳ ನಿರ್ಮಾಣದ ಕಾರ್ಯ ಪೂರ್ಣ ಮಾಡಬೇಕು. ಇದರಿಂದ ಪಪಂನ ಆದಾಯ ಹೆಚ್ಚುತ್ತದೆ. ಇಲ್ಲದಿದ್ದರೆ ಅದು ಅಕ್ರಮ ಚಟುವಟಿಕೆಗಳ ತಾಣವಾಗುತ್ತದೆ.ಜವಳದ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ನಾಗೇಶ, ಪಪಂ ಸದಸ್ಯರಾದ ಪ್ರಶಾಂತ ಆರಬೆರಳಿನ್, ಬಾಲರಾಜ ಗಾಳಿ, ರಾಮಣ್ಣ ಬಂಕದಮನಿ, ಸಿದ್ದು ಉಳ್ಳಾಗಡ್ಡಿ, ನೂರುದ್ದೀನ್ ಗುಡಿಹಿಂದಲ್, ಜುನಾಥ ಕೋಳೂರು, ಜಗನ್ನಾಥಗೌಡ, ಸಾಧಿಕ ಪಾಷಾ, ಸಿದ್ದಪ್ಪ ದೊಡ್ಮನಿ, ವಿರೇಶ ಸಬರದ, ಮಂಜುನಾಥ ಮಾಲಗಿತ್ತಿ, ಮಹಾಂತೇಶ ಮೂಧೋಳ, ಮಹಾಂತೇಶ ಹೂಗಾರ, ನಾಗಪ್ಪ ಕಲ್ಮನಿ, ವೀರಣ್ಣ ಯಲಬುರ್ಗಿ, ಪಪಂ ಸಿಬ್ಬಂದಿ ವರ್ಗದವರಿದ್ದರು.