ಮದ್ದೂರಿನಲ್ಲಿ ನಡೆಯುವ ಸಾಮರಸ್ಯ ನಡಿಗೆಗಿಲ್ಲ ಅನುಮತಿ: ಎಸ್‌ಪಿ ಸ್ಪಷ್ಟನೆ

| Published : Sep 17 2025, 01:05 AM IST

ಮದ್ದೂರಿನಲ್ಲಿ ನಡೆಯುವ ಸಾಮರಸ್ಯ ನಡಿಗೆಗಿಲ್ಲ ಅನುಮತಿ: ಎಸ್‌ಪಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಗತಿಪರ ಸಂಘಟನೆಯವರು ಮದ್ದೂರಿನಲ್ಲಿ ಸೆ.೨೨ರಂದು ನಡೆಸಲು ಉದ್ದೇಶಿಸಿರುವ ಸಾಮರಸ್ಯ ನಡಿಗೆಗೆ ಅನುಮತಿ ನೀಡದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇದರ ನಡುವೆಯೂ ಸಾಮರಸ್ಯ ನಡಿಗೆ ಮಾಡಿಯೇ ತೀರುವುದಾಗಿ ಪ್ರಗತಿಪರ ಸಂಘಟನೆಗಳು ಹಠಕ್ಕೆ ಬಿದ್ದಿವೆ. ಮತ್ತೊಂದೆಡೆ ಇದು ಸಾಮರಸ್ಯ ನಡಿಗೆಯಲ್ಲ, ಒಂದು ಕೋಮಿನ ನಡಿಗೆ. ಇದು ನಡೆದರೆ ನಾವೂ ಬೃಹತ್ ಮಟ್ಟದಲ್ಲಿ ರ್ಯಾಲಿ ಆಯೋಜಿಸುವುದಾಗಿ ಹಿಂದೂ ಕಾರ್ಯಕರ್ತರು ಸವಾಲೆಸೆದಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಗತಿಪರ ಸಂಘಟನೆಯವರು ಮದ್ದೂರಿನಲ್ಲಿ ಸೆ.೨೨ರಂದು ನಡೆಸಲು ಉದ್ದೇಶಿಸಿರುವ ಸಾಮರಸ್ಯ ನಡಿಗೆಗೆ ಅನುಮತಿ ನೀಡದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇದರ ನಡುವೆಯೂ ಸಾಮರಸ್ಯ ನಡಿಗೆ ಮಾಡಿಯೇ ತೀರುವುದಾಗಿ ಪ್ರಗತಿಪರ ಸಂಘಟನೆಗಳು ಹಠಕ್ಕೆ ಬಿದ್ದಿವೆ. ಮತ್ತೊಂದೆಡೆ ಇದು ಸಾಮರಸ್ಯ ನಡಿಗೆಯಲ್ಲ, ಒಂದು ಕೋಮಿನ ನಡಿಗೆ. ಇದು ನಡೆದರೆ ನಾವೂ ಬೃಹತ್ ಮಟ್ಟದಲ್ಲಿ ರ್ಯಾಲಿ ಆಯೋಜಿಸುವುದಾಗಿ ಹಿಂದೂ ಕಾರ್ಯಕರ್ತರು ಸವಾಲೆಸೆದಿದ್ದಾರೆ.

ಸೆ.೭ರಂದು ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆಸಿದ ಕಲ್ಲು ತೂರಾಟ ಪ್ರಕರಣದಲ್ಲಿ ಮುಸ್ಲಿಮರಿಂದ ತಪ್ಪಾಗಿದೆ ಎಂದು ಬಹಿರಂಗವಾಗಿಯೇ ತಪ್ಪೊಪ್ಪಿಕೊಂಡಿದ್ದ ಜಾಮೀಯಾ ಮಸೀದಿ ಅಧ್ಯಕ್ಷ ಆದಿಲ್ ಖಾನ್, ಸಾಮರಸ್ಯ ನಡಿಗೆಗೆ ಬೇಕಾದ ಆರ್ಥಿಕ ನೆರವನ್ನೆಲ್ಲಾ ನೀಡಲು ಸಿದ್ಧ ಎಂಬುದಾಗಿ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದನ್ನೇ ಮುಂದಿಟ್ಟುಕೊಂಡು ಹಿಂದೂ ಸಂಘಟನೆಯವರು ಇದು ಸಾಮರಸ್ಯ ನಡಿಗೆಯಲ್ಲ, ಇದು ಒಂದು ಕೋಮಿನ ನಡಿಗೆ. ಇದರಿಂದ ಮತ್ತೊಂದು ಕೋಮಿನ ಜನರನ್ನು ಪ್ರಚೋದಿಸಿದಂತಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಇದೊಂದು ಸಾಮರಸ್ಯದ ನಡಿಗೆಯಾಗಿದ್ದು, ಇದರಲ್ಲಿ ಸಾಮರಸ್ಯ ಬಯಸುವವರು ಯಾರು ಬೇಕಾದರೂ ಭಾಗವಹಿಸಬಹುದು. ಮದ್ದೂರಿನ ಪ್ರೊ.ನಂಜುಂಡಸ್ವಾಮಿ ಪ್ರತಿಮೆಯಿಂದ ಶಿವಪುರ ಧ್ವಜ ಸತ್ಯಾಗ್ರಹ ಸೌಧದವರೆಗೆ ಮೆರವಣಿಗೆ ನಡೆಯಲಿದೆ. ಇದಾವುದೋ ಒಂದು ಕೋಮಿನ ನಡಿಗೆಯಲ್ಲ. ಶಾಂತಿಯುತವಾಗಿ ನಡೆಯುವಂತಹ ನಡಿಗೆ. ಇದರಲ್ಲಿ ಎಲ್ಲರೂ ಭಾಗವಹಿಸುವುದಕ್ಕೆ ಅವಕಾಶವಿದೆ. ನೂರಕ್ಕೆ ನೂರರಷ್ಟು ಸಾಮರಸ್ಯ ನಡಿಗೆ ನಡೆಸಿಯೇ ತೀರಲು ಪ್ರಗತಿಪರರು ಹಠಕ್ಕೆ ಬಿದ್ದಿದ್ದಾರೆ.

ಶಾಂತಿ ಕದಡುವುದಕ್ಕೆ ಕಾರಣರಾಗಿರುವವರು ಮುಸ್ಲಿಮರು. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಸಾಮರಸ್ಯ ನಡಿಗೆಯ ಅವಶ್ಯಕತೆ ಏನಿದೆ. ಬೆಂಕಿ ಹಚ್ಚಿದವರ ಜೊತೆಗೆ ಇದೀಗ ಪ್ರಗತಿಪರರೂ ಸೇರಿಕೊಂಡಿದ್ದಾರೆ. ಸಾಮರಸ್ಯ ನಡಿಗೆ ಹೆಸರಿನಲ್ಲಿ ಮತ್ತೊಮ್ಮೆ ಮದ್ದೂರಿನಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಲು ಮುಂದಾಗಿದ್ದಾರೆ. ಇದರಿಂದ ದ್ವೇಷದ ದಳ್ಳುರಿ ಮತ್ತಷ್ಟು ಹೆಚ್ಚಾಗಲಿದೆ. ಮತ್ತೊಂದು ರ್ಯಾಲಿಗೆ ನಾವು ಸಿದ್ಧರಾಗಬೇಕಾಗುತ್ತದೆ ಎಂದು ಹಿಂದೂ ಸಂಘಟನೆಗಳು ಎಚ್ಚರಿಸಿದ್ದಾರೆ.

ಪ್ರಗತಿಪರರು ಹಾಗೂ ಹಿಂದೂ ಸಂಘಟನೆಯವರ ಹಠದ ನಡುವೆ ಪೊಲೀಸರಿಗೆ ತಲೆಬಿಸಿ ಉಂಟುಮಾಡಿದೆ. ಮದ್ದೂರಿನ ಗಣೇಶನನ್ನು ನೆನೆಸಿಕೊಂಡರೆ ಹಲವು ಅಧಿಕಾರಿಗಳಿಗೆ ಚಳಿಜ್ವರ ಬರುವಂತಾಗಿದೆ. ಈ ಮಧ್ಯೆ ಪ್ರಗತಿಪರ ಮುಖಂಡರನ್ನು ಕರೆದು ಸಭೆ ನಡೆಸಿ ಸಾಮರಸ್ಯ ನಡಿಗೆ ನಡೆಸದಂತೆ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಮತ್ತೆ ಪಟ್ಟಣದಲ್ಲಿ ಶಾಂತಿ ಕದಡಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಸಾಮರಸ್ಯ ನಡಿಗೆಗೆ ಪ್ರತಿಯಾಗಿ ಹಿಂದೂ ಸಂಘಟನೆಯವರು ರ್ಯಾಲಿ ನಡೆಸಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಹಾಗಾಗಿ ಯಾವುದನ್ನೂ ಮುಂದುವರೆಸದೆ ಎಲ್ಲದಕ್ಕೂ ಇಲ್ಲಿಗೇ ಫುಲ್‌ಸ್ಟಾಪ್ ಹಾಕಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮದ್ದೂರಿನ ಅಂಬೇಡ್ಕರ್ ಭವನದಲ್ಲೂ ಮುಸ್ಲಿಮರ ಜೊತೆಗೂ ಸಭೆ ನಡೆಸಿ ಸಾಮರಸ್ಯ ನಡಿಗೆ ನಡೆಸದಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಮುಸ್ಲಿಮರೂ ಕೂಡ ಪೊಲೀಸರ ಮನವೊಲಿಕೆಗೆ ಬಗ್ಗುವ ಸ್ಥಿತಿಯಲ್ಲಿಲ್ಲ. ಒಟ್ಟಾರೆ ಮದ್ದೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪೊಲೀಸ್ ಇಲಾಖೆಗೆ ತೀವ್ರ ಸಂಕಷ್ಟವನ್ನು ತಂದೊಡ್ಡುತ್ತಿವೆ.

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ದಿನದಿಂದ ಆರಂಭವಾಗಿ ಇಲ್ಲಿಯವರೆಗೂ ಪೊಲೀಸರು ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತೊಮ್ಮೆ ಇಂತಹ ಗಲಾಟೆಗಳು ನಡೆಯುವುದಕ್ಕೆ ಅವಕಾಶ ನೀಡಿದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರಕ್ಷಕ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ. ವಿದೇಶದಿಂದ ವಾಪಸಾಗಿರುವ ಶಾಸಕ ಕೆ.ಎಂ.ಉದಯ್ ಅವರೂ ಕೂಡ ಈ ವಿಷಯವಾಗಿ ಇನ್ನೂ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸದೆ ಮೌನ ವಹಿಸಿದ್ದಾರೆ. ಹೀಗಾಗಿ ಮದ್ದೂರಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಕೋಮು ಸಾಮರಸ್ಯ ನಡಿಗೆಗೆ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ. ಜಾಮೀಯಾ ಮಸೀದಿ ಅಧ್ಯಕ್ಷ ಆದಿಲ್ ಎಂಬುವರು ಸಾಮರಸ್ಯ ನಡಿಗೆಗೆ ಹಣ ವಿನಿಯೋಗಿಸುವುದಾಗಿ ಹೇಳಿದ್ದಾರೆ. ಇದರಿಂದ ಪ್ರಚೋದನೆ ನೀಡಿದಂತಾಗುತ್ತದೆ. ಈ ಕುರಿತಂತೆ ಹಿಂದೂ ಹಿತರಕ್ಷಣಾ ವೇದಿಕೆಯವರು ದೂರು ನೀಡಿದ್ದಾರೆ. ಮತ್ತೆ ಮದ್ದೂರಿನಲ್ಲಿ ಶಾಂತಿ ಕದಡಲು ಅವಕಾಶವಾಗದಂತೆ ಸಾಮರಸ್ಯ ನಡಿಗೆಗೆ ಅವಕಾಶ ನೀಡುವುದಿಲ್ಲ.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಕ್ಷಕ ಅಧೀಕ್ಷಕರುಮದ್ದೂರಿನಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಮುಸ್ಲಿಮರು ಮತ್ತು ನಾವು ಅನ್ಯೋನ್ಯವಾಗಿ ಕೆಲಸ-ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಕಹಿ ಘಟನೆಗಳು ಮಾಸಿಹೋಗುತ್ತಿವೆ. ಈಗ ಸಾಮರಸ್ಯ ನಡಿಗೆ ನಡೆಸುವ ಅವಶ್ಯಕತೆ ಏನಿದೆ. ಹಿಂದೂ-ಮುಸ್ಲಿಂ ಏನೇ ಸಮಸ್ಯೆಗಳಿದ್ದರೂ ನಾವು ಬಗೆಹರಿಸಿಕೊಳ್ಳುತ್ತೇವೆ. ಸಂಘಟನೆಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಮರಸ್ಯ ನಡಿಗೆ ಹೆಸರಿನಲ್ಲಿ ಅತಿರೇಕಕ್ಕೆ ಕೊಂಡೊಯ್ಯುತ್ತಿವೆ. ಹಲವರು ಶಾಂತಿಯನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.

- ಸಂತೋಷ್, ಎಳನೀರು ವರ್ತಕನಾವು ಸಾಮರಸ್ಯ ನಡಿಗೆ ಮಾಡೇ ಮಾಡುತ್ತೇವೆ. ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಪೊಲೀಸರು ಅದಕ್ಕೆ ಅನುಮತಿ ನೀಡುವುದಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಬೇಕಾದರೆ ನಮ್ಮನ್ನು ಬಂಧಿಸಲಿ. ಸಾಮರಸ್ಯ ನಡಿಗೆಯಲ್ಲಿ ಇಂತಹವರೇ ಭಾಗವಹಿಸಬೇಕೆಂಬ ನಿಯಮವೇನಿಲ್ಲ. ಸಾಮರಸ್ಯ ಬಯಸುವವರೆಲ್ಲರೂ ಭಾಗವಹಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಯಾರೊಂದಿಗೂ ಸಭೆ ನಡೆಸಿಲ್ಲ.

- ಟಿ.ಎಲ್.ಕೃಷ್ಣೇಗೌಡ, ಮುಖಂಡರು, ಪ್ರಗತಿಪರ ಸಂಘಟನೆ