ಪ್ರತಿಭಟನೆಗಳಿಂದ ಶಾಂತಿ ಕದಡುತ್ತಿದ್ದು, ಇದಕ್ಕೆ ಅನುಮತಿ ನೀಡಬಾರದೆಂದು ಜಯಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿ ಮುಖಂಡರು ಎಂದು ಹೇಳಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಇಂಥ ಪ್ರತಿಭಟನೆಗಳಿಂದ ಶಾಂತಿ ಕದಡುತ್ತಿದ್ದು, ಇದಕ್ಕೆ ಅನುಮತಿ ನೀಡಬಾರದೆಂದು ಜಯಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ನಡುವೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ಕೊಡುವುದಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಜಯ ಕರ್ನಾಟಕ, ಸಮತಾ ಸೇನಾ ಕರ್ನಾಟಕದ ಜಿಲ್ಲಾ ಸಮಿತಿ, ಭೀಮ ಶಕ್ತಿ, ಕದಸಂಸ ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.ಧಾರವಾಡ ಅತ್ಯಂತ ಶಾಂತಿಪ್ರಿಯ ನಗರ. ಹಲವು ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿಯಂಥ ಉನ್ನತ ಶಿಕ್ಷಣ ಕೇಂದ್ರಗಳು, ಹೈಕೋರ್ಟ್ ಸೇರಿದಂತೆ ಮಹತ್ವದ ಸಂಸ್ಥೆಗಳಿವೆ. ನಿತ್ಯವೂ ಸಾವಿರಾರು ಜನ ವಿದ್ಯಾರ್ಥಿಗಳು, ನೌಕರರು ಸಂಚರಿಸುತ್ತಾರೆ. ನೂರಾರು ಕೈಗಾರಿಕೆಗಳಿದ್ದು ಅಧಿಕಾರಿಗಳು, ಕಾರ್ಮಿಕರು ನಿತ್ಯ ಕೆಲಸಕ್ಕೆ ಹೋಗುತ್ತಾರೆ.
ಜಿಲ್ಲಾಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ, ಕೆಎಂಸಿಆರ್‌ಐಗಳಿಗೆ ತುರ್ತುಚಿಕಿತ್ಸೆಗಾಗಿ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್‌ಗಳು ಸಂಚರಿಸುತ್ತಿರುತ್ತವೆ. ಉದ್ಯೋಗಕ್ಕಾಗಿ ಎಂದು ವಿದ್ಯಾರ್ಥಿ ಮುಖಂಡರು ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಾರೆ. ಇದರಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿಯಾಗುತ್ತದೆ. ನಗರದ ಶಾಂತಿ ಕದಡುವ ಪ್ರಯತ್ನ ನಡೆಯುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದರು,.ಸಮತಾ ಸೇನಾ ಧಾರವಾಡ ಜಿಲ್ಲಾ ಅಧ್ಯಕ್ಷ ಹನುಮಂತ ಎಂ. ಮನಗುಂಡಿ, ಭೀಮಶಕ್ತಿ ಸಂಘಟನೆಯ ಶಂಕರ ಮುಗಳಿ ಎಂ. ಅರವಿಂದ, ಜಯ ಕರ್ನಾಟಕ ಸುಧೀರ ಮುಧೋಳ ಸೇರಿದಂತೆ ನೂರಾರು ಜನರು ಮನವಿ ಸಲ್ಲಿಸಿದರು.ಅನುಮತಿ ಕೊಡಲ್ಲ: ಶಶಿಕುಮಾರ
ಹುಬ್ಬಳ್ಳಿ: ಧಾರವಾಡದಲ್ಲಿ ಡಿ. 8ರಂದು ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಅನುಮತಿ ನೀಡುವುದಿಲ್ಲ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ತಿಳಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಡಿ. 8ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೀಗ ಸಾರ್ವಜನಿಕ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಖಿಲ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಟ್ಟಿತ್ತು. ಶ್ರೀನಗರ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನೆ ನಡೆಸುವುದಾಗಿ ಅರ್ಜಿ ಸಲ್ಲಿಸಿದರು. ಹೆಚ್ಚುವರಿ ಮಾಹಿತಿ ಕೇಳಲಾಗಿತ್ತು. ಆದರೆ ಸಂಘಟನೆಯವರು ಮಾಹಿತಿ ಕೊಟ್ಟಿಲ್ಲ ಎಂದು ತಿಳಿಸಿದರು.ಕಳೆದ ವಾರ ಜ್ಯುಬಿಲಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ನಾಲ್ಕೈದು ಗಂಟೆ ರಸ್ತೆ ಬಂದ್ ಮಾಡಿದ್ದರು. ಇದೀಗ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ. 1ರಂದು ನಡೆದ ಪ್ರತಿಭಟನೆಗೂ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಲಾಗಿತ್ತು. ಆದರೂ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಬಂಧಿಸಲಾಗಿತ್ತು.