ಸಾರಾಂಶ
ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಕುಪ್ಮಾ ಇದರ ದ.ಕ. ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನೆರವೇರಿತು.
ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇ ಬಾರದು, ಆಗ ಮಾತ್ರ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಹೇಳಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಕುಪ್ಮಾ ಇದರ ದ.ಕ. ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್, ಐಪಿಎಸ್ ಕಲಿತ ಅಧಿಕಾರಿಗಳು ನಾವು ಕೂಡ ತಳಮಟ್ಟದ ಇಂತಹ ಶಿಕ್ಷಣ ಸಂಸ್ಥೆಗಳಿಂದಲೇ ಮೇಲೆ ಬಂದಿರುವುದನ್ನು ಮರೆಯಬಾರದು. ಆಡಳಿತ ಭಾಷೆ ಕನ್ನಡ ಮಾಡುತ್ತೇವೆ ಎನ್ನುವ ಮುಖ್ಯಮಂತ್ರಿಗಳು ಬಾಯ್ಮಾತಿನಲ್ಲಿ ಹೇಳಿದರೆ ಸಾಲದು, ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಜೊತೆ ಸಂಸ್ಕಾರ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ ಎಚ್.ಎಚ್. ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರ ಪಾತ್ರ ಬಹುಮುಖ್ಯ. ಸರ್ಕಾರಿ ಶಾಲೆಗಳಿಗೆ ಸರಿಸಾಟಿಯಾಗಿ ಖಾಸಗಿ ಶಾಲೆಗಳು ಮೂಲಸೌಕರ್ಯವನ್ನು ಹೊಂದಿವೆ. ಖಾಸಗಿ ಶಾಲೆಗಳೂ ಉತ್ತಮ ರೀತಿಯ ಶಿಕ್ಷಣ ನೀಡುತ್ತಿವೆ. ರಾಜ್ಯದಲ್ಲಿ 4,500 ಪಿಯು ಕಾಲೇಜುಗಳಿದ್ದು, ದ.ಕ. ಜಿಲ್ಲೆಯಲ್ಲಿ 55 ಸರ್ಕಾರಿ ಪಿಯು, 41 ಅನುದಾನಿತ ಹಾಗೂ 113 ಅನುದಾನ ರಹಿತ ಪಿಯು ಕಾಲೇಜುಗಳಿವೆ. ಇವುಗಳಲ್ಲಿ ವಸತಿ ಶಾಲೆಗಳೂ ಸೇರಿವೆ. ಎಲ್ಲವೂ ಗುಣಟ್ಟದ ಶಿಕ್ಷಣ ನೀಡುತ್ತಿವೆ ಎಂದರು. ಕುಪ್ಮಾ ರಾಜ್ಯ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಕೊರೋನಾ ವೇಳೆ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳು ತೊಂದರೆಗೆ ಸಿಲುಕಿದ್ದು, ಬಳಿಕ ಸುಧಾರಿಸಿಕೊಂಡಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ವ್ಯಕ್ತಿತ್ವ ರೂಪಿಸುವ ಹಂತಗಳಾಗಿವೆ ಎಂದರು.ಇನ್ನೋರ್ವ ಗೌರವಾಧ್ಯಕ್ಷ ಡಾ.ಕೆ.ಸಿ.ನಾಯ್ಕ್ ಮಾತನಾಡಿ, ನಾನೇ ಸ್ಥಾಪಿಸಿದ ಕುಪ್ಮಾ ರಾಜ್ಯ ಮಟ್ಟಕ್ಕೆ ವಿಸ್ತರಣೆಗೊಳ್ಳುತ್ತಿರುವುದು ಖುಷಿ ತಂದಿದೆ. ಇನ್ನಷ್ಟು ಮಂದಿ ಸದಸ್ಯರ ಸೇರ್ಪಡೆಯಾಗಬೇಕಾಗಿದೆ ಎಂದರು.
ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್.ನಾಯಕ್ ಮಾತನಾಡಿ, 130 ಪಿಯು ಕಾಲೇಜು ಪೈಕಿ ಇದರ ಸದಸ್ಯರಾದವರು 31 ಕಾಲೇಜುಗಳು ಮಾತ್ರ. ಪ್ರತಿಯೊಬ್ಬ ಸದಸ್ಯರೂ ಹೊಸದಾಗಿ ಕನಿಷ್ಠ ಒಬ್ಬರು ಸದಸ್ಯರ ಸೇರ್ಪಡೆಗೆ ಪ್ರಯತ್ನಿಸಬೇಕು. ಈ ಮೂಲಕ ಕುಪ್ಮಾ ಸಂಘಟನೆ ಬಲಪಡಿಸಬೇಕು ಎಂದರು.ಈ ಸಂದರ್ಭ ಹೊಸ ಪದಾಧಿಕಾರಿಗಳಿಗೆ ಬ್ಯಾಡ್ಜ್ ನೀಡುವ ಮೂಲಕ ಪದಗ್ರಹಣ ನೆರವೇರಿಸಲಾಯಿತು. ಬಳಿಕ ಅಧಿಕಾರ ಹಸ್ತಾಂತರ ಪತ್ರ ಹಸ್ತಾಂತರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರನ್ನು ಗೌರವಿಸಲಾಯಿತು.
ಅಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಮಂಜುನಾಥ ರೇವಣ್ಕರ್ ವಂದಿಸಿದರು. ರಾಜ್ಯ ಸಮಿತಿ ಗೌರವ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಣೈ ಇದ್ದರು. ಸುನಿಲ್ ಪಲ್ಲಮಜಲು ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))