ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ನಮ್ಮ ಆತ್ಮಕ್ಕೆ ನಂಬಿಕೆ ಇರುವ ದೇವಾಸ್ಥಾನ ಉದ್ಘಾಟನೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ದೇವಸ್ಥಾನ ಉದ್ಘಾಟನೆ ವೇಳೆ ರಾಜಕೀಯ ಸಲ್ಲದು ಎಂದು ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಹೇಳಿದ್ದಾರೆ.ರಾಮಮಂದಿರ ಉದ್ಘಾಟನೆ ವೇಳೆ ಮತ್ತೊಂದು ಗೋದ್ರಾ ಆಗಬಹುದೆಂದು ಬಿ. ಕೆ ಹರಿಪ್ರಸಾದ್ ಹೇಳಿಕೆಗೆ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಭಾರತೀಯರ 140 ಕೋಟಿ ಜನರ ಹೆಮ್ಮೆಯ ವಿಚಾರ. ಮತ್ತೊಂದು ಅಹಿತಕರ ಘಟನೆ ಆಗುತ್ತದೆ ಎನ್ನುವುದಾದರೆ ಬಿ.ಕೆ. ಹರಿಪ್ರಸಾದ್ ಸಾಹೇಬರು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ಕೊಡಲಿ. ಆ ರೀತಿ ಘಟನೆ ಆಗಬಾರದು. ಅಂತಹ ವಿಛಿದ್ರಕಾರಿ ಶಕ್ತಿಗಳಿದ್ದರೆ ಇಡೀ ದೇಶವೇ ಒಂದಾಗಲಿದೆ. ನಾನೊಬ್ಬ ಕಾಂಗ್ರೆಸಿಗ ಎನ್ನುವುದಕ್ಕಿಂತ ದೇಶದ ಪ್ರಜೆಯಾಗಿ ಶ್ರೀರಾಮ ನಮ್ಮ ದೇವರು. ಇದರಲ್ಲಿ ರಾಜಕೀಯ ಇರಬಾರದು ಎಂದು ಹೇಳಿದರು. ಒಂದು ವೇಳೆ ಅಂತಹ ಮಾಹಿತಿ ಇದ್ದರೆ ಕೇಂದ್ರ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹರಿಪ್ರಸಾದ್ ಅವರ ಬಳಿ ಏನೇ ಮಾಹಿತಿ ಇದ್ದರೂ ಅದನ್ನು ಕೇಂದ್ರದೊಂದಿಗೆ ಹಂಚಿಕೊಳ್ಳಬೇಕು. ಇವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿದ್ದವರು. ಯಾವುದಾದರು ಮೂಲಗಳಿಂದ ಮಾಹಿತಿ ಇರುತ್ತದೆ. ಅದನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಬಿ.ಕೆ. ಹರಿಪ್ರಸಾದ್ ವಿವಿದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಹರಿಪ್ರಸಾದ್ ಅವರು ಯಾವ ಸಂದರ್ಭದಲ್ಲಿ ಹೇಳಿದರೋ ಗೊತ್ತಿಲ್ಲ ಎಂದರು. ಇಂಥ ಘಟನೆಗಳು ನಡೆಯುವ ಸೂಚನೆ ಇದ್ದರೆ ಕೇಂದ್ರಕ್ಕೆ ಮಾಹಿತಿ ಬಂದ ಬಳಿಕವೇ ಬೇರೆಯವರಿಗೆ ಮಾಹಿತಿ ಸಿಗುತ್ತದೆ. ಹಿರಿಯ ನಾಯಕರಾಗಿ ಹರಿಪ್ರಸಾದ್ ಅವರು ಯಾಕೆ ಹಾಗೆ ಹೇಳಿದರೋ ಅವರನ್ನೇ ಕೇಳಬೇಕು. ಯಾವುದೇ ಧರ್ಮವಿರಲಿ ಎಲ್ಲವೂ ಶಾಂತಿಯುತವಾಗಿ ನಡೆಯಬೇಕು. ದೇಶದಲ್ಲಿ ಎಲ್ಲ ಧರ್ಮಗಳಿಗೂ ಗೌರವ ಕೋಡಬೇಕು. ಅದು ಸರ್ಕಾರದ ಜವಾಬ್ದಾರಿ. ಸಂವಿಧಾನ ಬದ್ಧವಾಗಿ ಎಲ್ಲ ನಡೆಯಬೇಕು ಎಂಬುವುದೇ ಕಾಂಗ್ರೆಸ್ ಪಕ್ಷದ ಧೇಯ. ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎನ್ನುವುದು ತಿಳಿದು ಮಾತನಾಡುತ್ತೇನೆ ಎಂದರು.