ಸಾರಾಂಶ
ಮಲ್ಲಿಕಾರ್ಜುನ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಚುನಾವಣೆಗೆ ಮಾತ್ರ ತಮ್ಮರಾಜಕೀಯವನ್ನು ಸೀಮಿತಗೊಳಿಸಿ, ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹರಿಹರ ನಗರಸಭೆ ಆವರಣದಲ್ಲಿ ಸೋಮವಾರ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಉಪ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳು, ಜನಪರ ಕೆಲಸಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ, ಕೆಲಸ ಮಾಡೋಣ ಎಂದರು.ಸಾರ್ವಜನಿಕರಿಗೆ ಒಳಿತಾಗಬೆಕೆಂಬ ಸದುದ್ದೇಶದಿಂದ ಹರಿಹರ ನಗರಸಭೆ ಆವರಣದಲ್ಲಿ ದೂಡಾ ಉಪ ಕಚೇರಿ ಸ್ಥಾಪಿಸಲಾಗಿದೆ. ಇದು ಉದ್ಘಾಟನೆಗೆ, ಸರ್ಕಾರಿ ಕಚೇರಿ ಅಂತಷ್ಟೇ ಸೀಮಿತವಾಗಿರದೇ, ಜನರಿಗೆ ಇಂತಹ ಉಪ ಕಚೇರಿಯಿಂದ ಒಳಿತಾಗಬೇಕು. ಜನರಿಗೆ ತ್ವರಿತವಾಗಿ ಸೇವೆ ಸಿಗುವಂತಾಗಬೇಕು. ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆ ಈಡೇರಿಸಿದ ಸಂತೃಪ್ತಿ ತಮಗಿದೆ ಎಂದು ಅವರು ಹೇಳಿದರು.
ಹಲವು ಬಾರಿ ಹರಿಹರಕ್ಕೆ ಹಾಗೂ ತಾಲೂಕಿಗೆ ಭೇಟಿ ನೀಡಿದ್ದ ವೇಳೆ, ಸಾರ್ವಜನಿಕರು ದೂಡಾ ವಿಚಾರವಾಗಿ ಅನೇಕ ಸಲ ಮನವಿ ಮಾಡಿದ್ದರು. ದೂಡಾ ಉಪ ಕಚೇರಿ ಉದ್ಘಾಟನೆ ಆದಾಕ್ಷಣ ಎಲ್ಲಾ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ಕಚೇರಿ ಸ್ಥಾಪನೆಯ ಉದ್ದೇಶ ಅರಿತು, ಸಾರ್ವಜನಿಕರನ್ನು ಅಲೆದಾಡಿಸದೇ, ಕಾಲಮಿತಿಯಲ್ಲಿ ಸರಿಯಾಗಿ ಜನರ ಕೆಲಸ, ಕಾರ್ಯ ಮಾಡಿ ಕೊಡಬೇಕು ಎಂದು ಅವರು ಸೂಚಿಸಿದರು.ಬೆಂಕಿ ನಗರ, ಕಾಳಿದಾಸ ನಗರದ ಬಳಿ ಇರುವ ದೇವರ ಬೆಳಕೆರೆ ಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ₹71ಲಕ್ಷ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಪೂರ್ಣವಾಗಲಿದೆ. ಮಜ್ಜಿಗೆ ಬಡಾವಣೆಯಿಂದ ಅಮರಾವತಿ ಕಾಲನಿವರೆಗೆ ದೂಡಾದಿಂದ ವರ್ತುಲ ರಸ್ತೆ ನಿರ್ಮಾಣಕ್ಕೆ 4 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹರಿಹರ ಕ್ಷೇತ್ರವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ಶಾಸಕ ಬಿ.ಪಿ.ಹರೀಶ ಮಾತನಾಡಿ, ಹಿಂದಿನ ಪುರಪಿತೃಗಳು ಮಾಡಿದ ತಪ್ಪಿನಿಂದಾಗಿ ಇಂದು ಹರಿಹರ ಜನತೆ ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ದೂಡಾ ಕೇಳುವ ಎಲ್ಲಾ ದಾಖಲೆಗಳು ಹರಿಹರ ನಗರದಲ್ಲಿ ಸಿಗುವುದಿಲ್ಲ. ಹಿಂದೆ ಇದ್ದಂತಹ ಪುರಪಿತೃಗಳು ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ, ಬಡಾವಣೆ ನಿರ್ಮಿಸಿದ್ದಾರೆ. ಅದರ ಪರಿಣಾಮ ಇಂದು ಬಡವರು, ಮಧ್ಯಮ ವರ್ಗದವರು ನಿವೇಶನವಿದ್ದರೂ ಮನೆ ಕಟ್ಟಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಹರಿಹರ ಜನತೆ ದೂಡಾ ಕಚೇರಿಗೆಂದು ದಾವಣಗೆರೆಗೆ ಅಲೆಯುವ ಅಗತ್ಯವಿಲ್ಲ. ಎಲ್ಲಾ ಕೆಲಸ, ಕಾರ್ಯ ಇಲ್ಲಿಯೇ ಆಗುತ್ತವೆ. ಇದರನ್ನು ಸದ್ಭಳಕೆ ಮಾಡಿಕೊಳ್ಳಿ. ಹರಿಹರ ನಗರವಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದ್ಭಳಕೆ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಇಲ್ಲಿಯೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ.ಜಂಬಣ್ಣ, ಮಾಜಿ ಶಾಸಕ ಎಸ್.ರಾಮಪ್ಪ, ದೂಡಾ ಸದಸ್ಯರಾದ ಎಂ.ಆರ್.ವಾಣಿ ಬಕ್ಕೇಶ ನ್ಯಾಮತಿ, ಎಚ್.ಜಬ್ಬಾರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ, ನಗರಸಭಾ ಸದಸ್ಯರಾದ ಶಂಕರ ಖಟಾ ವ್ಕರ್, ಕೆ.ಜಿ.ಸಿದ್ದೇಶ, ವಾಮನಮೂರ್ತಿ, ಆರ್.ಸಿ.ಜಾವೀದ್, ಪಿ.ಎನ್.ವಿರೂಪಾಕ್ಷಿ, ದಿನೇಶ ಬಾಬು, ಆಟೋ ಹನುಮಂತಪ್ಪ, ಆಶ್ವಿನಿ ಕೃಷ್ಣ, ನಾಗರತ್ನಮ್ಮ, ಸುಮಿತ್ರಮ್ಮ ಮರಿದೇವ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಇತರರು ಇದ್ದರು.