ಕನ್ನಡಪ್ರಭವಾರ್ತೆ ತಿಪಟೂರು
ನಗರದ ಶಾರದಾನಗರ ಮತ್ತು ಗಾಂಧಿನಗರ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕೂಡಲೇ ಅಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ನೀರು ಸರಬರಾಜು ಮಾಡಲು ಸೂಚಿಸಲಾಗಿದ್ದ ೧೫ ದಿನಗಳಲ್ಲಿ ಆ ಭಾಗದಲ್ಲಿ ನೀರಿನ ಕೊರತೆ ನಿವಾರಣೆಯಾಗಲಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರಸಭೆಯ ಶಾಸಕರ ಕಛೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದ ಜನಸಂಖ್ಯೆ ಒಂದು ಲಕ್ಷ ದಾಟುತ್ತಿದ್ದು ಮುಂದಿನ ಹತ್ತು-ಹದಿನೈದು ವರ್ಷಗಳ ಕಾಲ ನಗರಕ್ಕೆ ನೀರಿನ ಕೊರತೆಯಾಗದಂತೆ ವಿಶೇಷ ಯೋಜನೆ ರೂಪಿಸಲಾಗಿದ್ದು ಉಪಚುನಾವಣೆ ಮುಗಿದ ನಂತರ ಸಂಪುಟದ ಅನುಮೋದನೆ ಪಡೆದು ನೊಣವಿನಕೆರೆಯಿಂದ ತಿಪಟೂರು ನಗರಕ್ಕೆ ಪೈಪ್‌ಲೈನ್ ಮೂಲಕ ನೀರು ತರಲಾಗುವುದು. ಈ ಯೋಜನೆಗಾಗಿ ಈಗಾಗಲೇ ಹೇಮಾವತಿ ನಾಲೆಯಿಂದ ಹೆಚ್ಚುವರಿ ೦.೩ ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗಿದೆ ಎಂದರು.
ತಾಲೂಕಿನಾದ್ಯಂತ ಮನೆ-ಮನೆಗೂ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಚಾಲ್ತಿಯಲ್ಲಿದ್ದು ಈ ವರ್ಷದ ಕೊನೆಯೊಳಗೆ ಮುಖ್ಯಮಂತ್ರಿಗಳನ್ನು ಕರೆಸಿ ಯೋಜನೆ ಪ್ರಾರಂಭಿಸಲಾಗುವುದು. ಇದಲ್ಲದೆ ಎತ್ತಿನಹೊಳೆ ಮೂಲಕ ಶೀಘ್ರದಲ್ಲಿಯೇ ತಾಲೂಕಿನ ಕೆರೆಗಳಿಗೆ ನೀರು ಹರಿಯುವ ವಿಶ್ವಾಸವಿದೆ. ಭದ್ರಾ ನೀರನ್ನು ಕೂಡ ತರುವ ಪ್ರಯತ್ನದಲ್ಲಿದ್ದೇವೆ. ಕುಡಿಯುವ ನೀರಿನ ಯೋಜನೆಗಳಿಗೆ ಅತಿ ಹೆಚ್ಚು ಮಹತ್ವವನ್ನು ನೀಡಿದ್ದು ತಾಲೂಕಿನಾದ್ಯಂದ ಕುಡಿಯುವ ನೀರು ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ ತಾಲೂಕಿನ ಐದು ಹಳ್ಳಗಳಲ್ಲಿ ನೀರಿನ ಕೊರತೆ ಗುರುತಿಸಲಾಗಿದ್ದು ಹೆಚ್ಚುವರಿ ಬೋರ್‌ವೆಲ್ ಕೊರೆದು ನೀರು ಪೂರೈಸಲು ಕ್ರಮ ವಹಿಸಲಾಗಿದೆ. ನ್ಯಾಕೇನಹಳ್ಳಿ ಗ್ರಾಮದಲ್ಲಿ ಹಲವಾರು ಕೊಳವೆ ಬಾವಿಗಳು ಕೊರೆದರೂ ನೀರು ದೊರೆಯದ ಕಾರಣ ಪಕ್ಕದ ಹತ್ತಿರದ ಪಂಚಾಯ್ತಿ ವ್ಯಾಪ್ತಿಗಳಲ್ಲಿ ನೀರು ಲಭ್ಯವಿರುವ ಕಡೆ ಕೊಳವೆಬಾವಿ ಕೊರೆದು ಅಲ್ಲಿಂದ ನೀರು ತರುವ ಪ್ರಯತ್ನ ನಡೆಯುತ್ತಿದೆ. ಈಗ ಮೂರು ಟ್ಯಾಂಕರ್‌ಗಳ ಮೂಲಕ ಕೆಲವು ಭಾಗಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾಹಿತಿ ನೀಡಿ ಈಗ ತಿಪಟೂರು ನಗರಕ್ಕೆ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ನಗರದಾದ್ಯಂತ ಆರು ಓವರ್ ಹೆಡ್ ಟ್ಯಾಂಕ್‌ಗಳನ್ನು ನೀರಿನ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.