- ಅಪಪ್ರಚಾರ ನಡೆಸಿದವರಿಗೆ ಕಾನೂನಾತ್ಮಕ ಉತ್ತರ: ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ - - -

- ವೃತ್ತಿಪರ ಕಾಲೇಜು ಸೇರಿದಂತೆ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ನಾವು ಬದ್ಧ

- ಪ್ಯಾರಾ ಮೆಡಿಕಲ್ ಕಾಲೇಜ್ ಉತ್ತಮವಾಗಿ ನಡೆಯುತ್ತಿದ್ದು, ಭೋಜನಾಲಯ ನಿರ್ಮಿಸಲಾಗಿದೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ


ರಾಷ್ಟ್ರಪಿತ ಮಹಾತ್ಮ ಗಾಂಧಿ ಪಾದ ಸ್ಪರ್ಶಿಸಿದ ಪುಣ್ಯಭೂಮಿಯಲ್ಲಿ ಸ್ಥಾಪಿಸಿದ ದಾವಣಗೆರೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದರೂ, ಕೆಲವರು ಸಂಸ್ಥೆ ಬಗ್ಗೆ ತೇಜೋವಧೆ, ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು.

ನಗರದ ಪಿ.ಜೆ. ಬಡಾವಣೆಯ ಮಹಾತ್ಮ ಗಾಂಧಿ ವಸತಿಯುತ ಶಾಲಾವರಣದಲ್ಲಿ ಭಾನುವಾರ ಸಂಸ್ಥೆಯ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ ಅಧ್ಯಕ್ಷತೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಕಾರ್ಯದರ್ಶಿ ಬಿ.ಎಚ್‌.ವೀರಭದ್ರಪ್ಪ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಸಮಗ್ರ ಅಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಿದೆ. ಸಂಘದ ಚಟುವಟಿಕೆ, ಅಭಿವೃದ್ಧಿ, ಅನುದಾನಗಳ ಬಗ್ಗೆ ವಿವರಿಸಿ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಪರ್ಶಿಸಿದ ಪುಣ್ಯಭೂಮಿ. ವರ್ಷದಿಂದ ವರ್ಷಕ್ಕೆ ಸಂಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಸಂಸ್ಥೆ ಅಭ್ಯುದಯವನ್ನು ಸಹಿಸಿದ ಕೆಲವು ಕಿಡಿಗೇಡಿಗಳು ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಬಂದಂತಹ ಆರೋಪಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಉತ್ತರವನ್ನೂ ನೀಡಿದ್ದೇವೆ ಎಂದರು.

ಮಾದಿಗ ಸಮುದಾಯ ಬಗ್ಗೆ ನಿಜವಾಗಿ ಕಾಳಜಿ, ಕಳಕಳಿ ಇದ್ದರೆ ನೇರಾನೇರ ಸಂಸ್ಥೆಗೆ ಬಂದು ಅಭಿವೃದ್ಧಿ ಬಗ್ಗೆ ಆರೋಗ್ಯಕರವಾಗಿ ಚರ್ಚಿಸಲಿ. ಅದನ್ನು ಬಿಟ್ಟು ಎಲ್ಲೋ ಕುಳಿತು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಹೀಗೆ ಆರೋಪ ಮಾಡುವವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ. ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕೆಂಬ ಸದುದ್ದೇಶದಿಂದಲೇ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಟೀಕಿಸುವವರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ಸಂಸ್ಥೆಯ ಜಂಟಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಪೇಪರ್ ಕೆ.ಚಂದ್ರಣ್ಣ ಮಾತನಾಡಿ, ಸಂಸ್ಥೆಯಲ್ಲಿ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಸಂಸ್ಥೆಗೆ ಹೊಸ ಶಾಲಾ ವಾಹನ ಖರೀದಿ ಮಾಡುತ್ತಿದ್ದೇವೆ. ಪ್ಯಾರಾ ಮೆಡಿಕಲ್ ಕಾಲೇಜ್ ಉತ್ತಮವಾಗಿ ನಡೆಯುತ್ತಿದೆ. ಹೊಸ ಭೋಜನಾಲಯವನ್ನು ನಿರ್ಮಿಸಲಾಗಿದೆ. ಹೈಟೆಕ್ ಶೌಚಾಲಯ ಹೀಗೆ ಎಲ್ಲಾ ರೀತಿಯಲ್ಲೂ ಸಂಸ್ಥೆ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯೂ ಹೆಮ್ಮರವಾಗುವಂತಹ ಸಾಧನೆ ಮಾಡಲಿದೆ ಎಂದು ಹೇಳಿದರು.

ಸಂಘದ ನಿರ್ದೇಶಕ ಮಂಜಪ್ಪ ಹಲಗೇರಿ ಮಾತನಾಡಿ, ಸಂಸ್ಥೆಯಲ್ಲಿ ಹೊಸ ಭೋಜನಾಲಯ, ಹಾಸ್ಟಲ್ ಕಟ್ಟಡ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯಡಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ, ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ತರುವ ಸದುದ್ದೇಶ ಹೊಂದಿದ್ದೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆ ವಿರುದ್ಧ ಕೆಲವರಿಂದ ಅಪಪ್ರಚಾರ ನಡೆದಿದೆ. ಇಲ್ಲಿ ಆಡಳಿತ ಪಾರದರ್ಶಕವಾಗಿದೆ. ಸಂಸ್ಥೆಯ ನಯಾ ಪೈಸೆಯೂ ದುರ್ಬಳಕೆಯಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ಅನುದಾನ ಸದ್ಬಳಕೆ ಆಗುತ್ತಿದೆ. ಯಾರಿಗಾದರೂ ಅಂತಹ ಅನುಮಾನಗಳಿದ್ದರೆ ಸಂಸ್ಥೆ ಕಚೇರಿಗೆ ಬಂದು ಮುಕ್ತವಾಗಿ ಚರ್ಚಿಸಲಿ ಎಂದು ತಿಳಿಸಿದರು.

ನಿರ್ದೇಶಕ ಎಲ್.ಎಂ.ಎಚ್. ಸಾಗರ್ ಮಾತನಾಡಿ, ಸಂಸ್ಥೆಯಿಂದ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭವಾಗಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಕೇಂದ್ರವೂ ಇಲ್ಲಿ ಆರಂಭವಾಗಲಿ. ಸಂಸ್ಥೆ ವಿರುದ್ಧ ಅಪಪ್ರಚಾರ ನಡೆಸುವವರು ವಿರುದ್ಧ ಸಂಸ್ಥೆ ಧೈರ್ಯವಾಗಿ ಕಾನೂನು ಹೋರಾಟಕ್ಕೆ ಮುಂದಾಗಲಿ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಯಾವುದೇ ಅಡೆತಡೆ ಇಲ್ಲದೇ ಸಾಗಲಿ ಎಂದು ಮನವಿ ಮಾಡಿದರು.

ಸಂಸ್ಥೆ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ ಮಾತನಾಡಿ, ಸಂಘದ ಸದಸ್ಯತ್ವದ ಬಗ್ಗೆ ಆಡಳಿತ ಪಾರದರ್ಶಕವಾಗಿದೆ. ಆಡಳಿತ ಮಂಡಳಿ ಸರ್ವ ಸದಸ್ಯರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಎಲ್.ಎಂ. ದೇವೇಂದ್ರಪ್ಪ ಹರಿಹರ ನಗರವಾಣಿ ಸಂಪಾದಕ ಸುರೇಶ್ ಕುಣಿಬೆಳಕೆರೆ, ಡಿ.ಸುರೇಶ, ಗಾಂಧಿ ನಗರ ಜಿ.ರಾಕೇಶ, ಬಿ.ಎಲ್.ಪರುಶರಾಮ, ಎಲ್.ಸಿ.ನಿಖಿಲ್, ಬಿ.ಆರ್. ಶಿವಮೂರ್ತಿ, ಗಿರೀಶ್ ಗಾಂಧಿ ನಗರ, ಬಿ.ಈ. ಮಲ್ಲಿಕಾರ್ಜುನ, ಕೆ.ಸಿ. ಮಂಜುನಾಥ, ಬಿ.ಆರ್. ಮಂಜುನಾಥ, ಪ್ರದೀಪ ಯಮನೂರು ಗೌಡ, ಶಶಿಕುಮಾರ, ಕಂಚಿಕೇರಿ ನಾಗರಾಜ, ಅಸಗೋಡು ಮರುಳಸಿದ್ದಪ್ಪ, ಶಂಕರ ಗಾಂಧಿನಗರ ಇತರೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.

ವಾರ್ಷಿಕ ಮಹಾಸಭೆಗೆ ಜಗಳೂರು ಹರಿಹರ ಹೊನ್ನಾಳಿ ಹರಪನಹಳ್ಳಿ ದಾವಣಗೆರೆ ಜಿಲ್ಲೆಯಿಂದ ಸದಸ್ಯರು ಆಗಮಿಸಿದ್ದರು.

- - -

-21ಕೆಡಿವಿಜಿ9: ಮಹಾಸಭೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿದರು.