ಸಾರಾಂಶ
ವಿಧಾನಪರಿಷತ್ : ಕೆಎಎಸ್ ನೇಮಕಾತಿ ಪೂರ್ವಭಾವಿ ಮರು ಪರೀಕ್ಷೆ ರದ್ದುಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮರುಪರೀಕ್ಷೆಯ ಕನ್ನಡ ಪತ್ರಿಕೆಯಲ್ಲೂ ಎಡವಟ್ಟುಗಳಾಗಿರುವ ಕಾರಣ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ ಪರೀಕ್ಷೆ ನಡೆಸಲು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಲುವೇನು? ಎಂದು ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ, ಮರುಪರೀಕ್ಷೆ ನಡೆಸುವ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಉತ್ತರ ನೀಡಿದ್ದಾರೆ.
10 ವರ್ಷಗಳಲ್ಲಿ 1 ಪ್ರಶ್ನೆ ಪತ್ರಿಕೆ ಸೋರಿಕೆ:
ಕಳೆದ ಹತ್ತು ವರ್ಷಗಳಲ್ಲಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಗಳಲ್ಲಿ ಆಗಿರುವ ವಂಚನೆ, ಅವ್ಯವಹಾರ, ದೋಷಪೂರಿತ ಪ್ರಕರಣಗಳ ವಿವರ ಒದಗಿಸಿ ಎಂದು ಕೇಳಿದ ಪ್ರಶ್ನೆಗೆ, ಒಂದು ಪ್ರಕರಣ ಎಂದು ಉತ್ತರಿಸಲಾಗಿದೆ. 2021ರ ಜನವರಿ 24ರಂದು ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಬಳಿಕ ಮರುಪರೀಕ್ಷೆ ನಡೆಸಲಾಗಿದೆ. ಸೋರಿಕೆಯಲ್ಲಿ ಭಾಗಿಯಾಗಿದ್ದ ಕೆಪಿಎಸ್ಸಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.