ಹಾಸನಾಂಬ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಗಮ ಹಾಗೂ ವ್ಯವಸ್ಥಿತ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಶಿಫಾರಸು ಪತ್ರದ ಆಧಾರದ ಮೇಲೆ ದರ್ಶನಕ್ಕೆ ಅವಕಾಶ ನೀಡಬಾರದು. ಹಾಗೇನಾದರೂ ಅವ್ಯವಸ್ಥೆ ಉಂಟಾದರೆ ಸ್ಥಳದಲ್ಲೆ ಪ್ರತಿಭಟನೆ ಮಾಡುವುದಾಗಿ ರಾಷ್ಟ್ರ ರಕ್ಷಣಾ ಸೇನೆಯ ರಾಜ್ಯ ಸಂಚಾಲಕ ತ್ರಣವ್ ಸುರೇಶ್ ಗೌಡ ಎಚ್ಚರಿಸಿದರು. ಪ್ರಸ್ತುತ ಇರುವ ೩೦೦ರ ವಿಶೇಷ ದರ್ಶನ ಟಿಕೆಟ್ ಬದಲಿಗೆ ೨,೦೦೦ರ ಒಂದು ವರ್ಗದ ಟಿಕೆಟ್ ಮಾತ್ರ ಇರಬೇಕು. ಗಣ್ಯರು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಟಿಕೆಟ್ ಪಡೆದೇ ದರ್ಶನ ಮಾಡುವಂತಾಗಬೇಕು. ಇದರಿಂದ ಸಾಮಾನ್ಯ ಸರತಿ ಸಾಲಿನ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಗಮ ಹಾಗೂ ವ್ಯವಸ್ಥಿತ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಶಿಫಾರಸು ಪತ್ರದ ಆಧಾರದ ಮೇಲೆ ದರ್ಶನಕ್ಕೆ ಅವಕಾಶ ನೀಡಬಾರದು. ಹಾಗೇನಾದರೂ ಅವ್ಯವಸ್ಥೆ ಉಂಟಾದರೆ ಸ್ಥಳದಲ್ಲೆ ಪ್ರತಿಭಟನೆ ಮಾಡುವುದಾಗಿ ರಾಷ್ಟ್ರ ರಕ್ಷಣಾ ಸೇನೆಯ ರಾಜ್ಯ ಸಂಚಾಲಕ ತ್ರಣವ್ ಸುರೇಶ್ ಗೌಡ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹಾಸನಾಂಬೆ ಜಾತ್ರೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದರೂ, ಜನಸಂದಣಿ ಹೆಚ್ಚಾಗುವ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ಕಳೆದ ಮೂರು ವರ್ಷಗಳಿಂದ ಸಂಘದ ವತಿಯಿಂದ ಹಲವು ಸಲಹೆಗಳನ್ನು ನೀಡಲಾಗಿದ್ದು, ಈ ಬಾರಿ ಅವುಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.ಜಾತ್ರೆ ಆರಂಭಕ್ಕೂ ಹಲವು ದಿನಗಳ ಮುನ್ನ ಸಂತೆಪೇಟೆ ವೃತ್ತದಿಂದ ದೇವಸ್ಥಾನದವರೆಗೆ ಬ್ಯಾರಿಕೇಡ್ ಹಾಗೂ ಟೆಂಟ್‌ಗಳನ್ನು ಅಳವಡಿಸುವುದರಿಂದ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅವುಗಳನ್ನು ಜಾತ್ರೆಯ ಕೊನೆಯ ಮೂರು ನಾಲ್ಕು ದಿನಗಳಲ್ಲಿ ಮಾತ್ರ ಅಳವಡಿಸಬೇಕು. ಗುತ್ತಿಗೆದಾರರ ಸಿಬ್ಬಂದಿ ಸರಕು ಸಾಗಣೆ ಮಾಡುವ ಸಂದರ್ಭದಲ್ಲಿ ರಸ್ತೆಯನ್ನು ಅಡ್ಡಗಟ್ಟದಂತೆ ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಬೇಕು. ಜಾತ್ರೆಯ ಮೊದಲ ದಿನ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಮುಖಂಡರು, ಹಾಲಿ-ಮಾಜಿ ರಾಜಕೀಯ ನಾಯಕರು ಹಾಗೂ ಜಿಲ್ಲೆಯ ಗಣ್ಯರಿಗೆ ದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು. ಹೊರ ಜಿಲ್ಲೆಗಳಿಂದ ಅನಗತ್ಯವಾಗಿ ಗಣ್ಯರನ್ನು ಕರೆತರುವುದನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ಇರುವ ೩೦೦ರ ವಿಶೇಷ ದರ್ಶನ ಟಿಕೆಟ್ ಬದಲಿಗೆ ೨,೦೦೦ರ ಒಂದು ವರ್ಗದ ಟಿಕೆಟ್ ಮಾತ್ರ ಇರಬೇಕು. ಗಣ್ಯರು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಟಿಕೆಟ್ ಪಡೆದೇ ದರ್ಶನ ಮಾಡುವಂತಾಗಬೇಕು. ಇದರಿಂದ ಸಾಮಾನ್ಯ ಸರತಿ ಸಾಲಿನ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ರಕ್ಷಣಾ ಸೇನೆಯ ಹಾಸನ ಜಿಲ್ಲಾಧ್ಯಕ್ಷ ರಾಜೇಶ್ ಕೆಂಚನಹಳ್ಳಿ ಸೇರಿದಂತೆ ಇತರರು ಇದ್ದರು.