ಸಾರಾಂಶ
ಶಿರಸಿ: ಅಕ್ರಮ ಹಾಗೂ ಅಪರಾಧ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.ಅವರು ನಗರದ ಡಿಎಸ್‌ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ, ಅಕ್ರಮ ಚಟುವಟಿಕೆಗಳು ಎಲ್ಲೇ ನಡೆದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ನಗರ ಹಾಗೂ ಗ್ರಾಮೀಣ ಭಾಗದ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಗಮನಿಸಲಾಗುತ್ತಿದೆ. ನಿಷೇಧಿತ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಈಗಾಗಲೇ ಜಿಲ್ಲಾಡಳಿತವು ಸೂಚಿಸಿದೆ. ಅದನ್ನೂ ಮೀರಿ ಹೋದರೆ ಕಾನೂನು ರೀತಿಯಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಸಿದ ಅವರು, ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ರಸ್ತೆ ಯಲ್ಲಿ ಹೊಂಡ ಬಿದ್ದು ಅಪಘಾತಗಳು ಹೆಚ್ಚುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಲಾಗಿದೆ ಎಂದರು.
ಕಳೆದ ಮೂರು ದಿನಗಳ ಹಿಂದೆ ಶಿರಸಿ ತಾಲೂಕಿನ ಭೈರುಂಬೆ ಸಮೀಪ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಲಾಗಿದೆ. ಓಸಿ, ಇಸ್ಪೀಟ್ ಕ್ಲಬ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುತ್ತಿದ್ದು, ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ಇಲ್ಲ ಎಂದ ಅವರು, ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ತೆರಳಿ ಪರಿಶೀಲಿಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಅಹವಾಲು ಸ್ವೀಕರಿಸಲಾಗುತ್ತಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಗೋ ಕಳ್ಳತನದ ಬಗ್ಗೆ ಗಮನ ಹರಿಸಲಾಗುವುದು ಎಂದರು.ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಶಿರಸಿ ನಗರಠಾಣೆ ಪಿಎಸ್‌ಐ ನಾಗಪ್ಪ ಬಿ. ಇದ್ದರು.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ ತಲುಪುವ ಕಾರ್ಯ ಮಾಡುತ್ತೇವೆ. ಬೀಟ್ ಪೊಲೀಸ್ ವ್ಯವಸ್ಥೆ ಬಲಪಡಿಸುತ್ತೇವೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್.