ಕೊಪ್ಪಳ: ಬಲ್ಡೋಟಾ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಕಂಪನಿ ವ್ಯಾಪ್ತಿಯಲ್ಲಿರುವ ೪೪ ಎಕರೆ ಪ್ರದೇಶದಲ್ಲಿ ಬಸಾಪುರ ಕೆರೆಯನ್ನು ಕೇವಲ ೩೩ ಲಕ್ಷಕ್ಕೆ ಲೀಜ್ ನೀಡಿರುವುದು ಅನ್ಯಾಯ. ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಕೆರೆ ಲೀಜ್ ನೀಡಲಾಗಿತ್ತು. ಕೆರೆಗಾಗಿ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿದ್ದೇವೆ. ಈ ಭಾಗದಲ್ಲಿ ಹೊಸ ಕಾರ್ಖಾನೆಗಳಿಗೆ ಅವಕಾಶ ನೀಡಬಾರದು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಲ್ಡೋಟಾ ಕಾರ್ಖಾನೆ ಮುಂದೆ ರಾಜ್ಯ ರೈತ ಸಂಘ, ಪರಿಸರ ಹಿತರಕ್ಷಣಾ ವೇದಿಕೆ, ಜಂಟಿ ಕ್ರಿಯಾ ವೇದಿಕೆ ಸಹಯೋಗದಲ್ಲಿ ಕೊಪ್ಪಳದಲ್ಲಿ ಬಲ್ಡೋಟಾ ತೊಲಗಿಸಿ ಎಂದು ತಾಲೂಕಿನ ಬಸಾಪುರ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ತುಂಗಭದ್ರಾ ನದಿಗೆ ಕಾರ್ಖಾನೆಯಿಂದ ಮಾಲಿನ್ಯದ ನೀರು ಹರಿಯುತ್ತಿದ್ದು, ಅದನ್ನು ತಡೆಯಬೇಕು. ರೈತರ ಬೆಳೆ ಹಾನಿಗೆ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿಯು ರಾಜಿನಾಮೆ ನೀಡುವಂತೆ ಆಗ್ರಹಿಸಿದರು.ಜನಶಕ್ತಿ ಸಂಘಟನೆಯ ಶ್ರೀಧರ್ ಮಾತನಾಡಿ, ಕರ್ನಾಟಕದಲ್ಲಿ ಹಿಂದೆ ಹಲವು ದೊಡ್ಡ ಚಳವಳಿ ನಡೆದಿದ್ದರೂ ಈಗ ಚಳವಳಿಗಳ ಶಕ್ತಿ ಕುಗ್ಗಿದೆ. ಕೆಲವೇ ಕಂಪನಿಗಳು ದೇಶದ ಸಂಪತ್ತು ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಭೂಮಿ, ಬೆಳೆ ಹಾಗೂ ಸಾರ್ವಜನಿಕ ಸ್ವತ್ತಿನ ಮೇಲೆ ಕಾರ್ಪೊರೇಟ್ ಕಣ್ಣಿಟ್ಟಿದೆ. ಆಳುವ ಸರ್ಕಾರಗಳು ಜನರಿಗೆ ದ್ರೋಹ ಮಾಡುತ್ತಿವೆ ಎಂದರು.
ಹಿರಿಯ ಪತ್ರಕರ್ತ ಲಕ್ಷ್ಮಣ ಹೂಗಾರ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿವೆ. ವಿದ್ಯಾರ್ಥಿಗಳು, ರೈತರು ಹಾಗೂ ಕಾರ್ಮಿಕರ ಹೋರಾಟ ಹತ್ತಿಕ್ಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜವಾದ ದೇಶಭಕ್ತರು ರೈತರು ಮತ್ತು ಕಾರ್ಮಿಕರು. ರಾಜ್ಯದಲ್ಲಿ ರೈತ ಹಾಗೂ ವಿದ್ಯಾರ್ಥಿ ಚಳವಳಿಗಳಿಂದ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹೇಳಿದರು.
ಕೆಆರ್‌ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿ ಮಾತನಾಡಿ, ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಬಸಾಪುರ ಕೆರೆ ಸಾರ್ವಜನಿಕ ಸ್ವತ್ತು. ಅದನ್ನು ಖಾಸಗಿಯವರಿಗೆ ಬಿಟ್ಟುಕೊಡುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ ಎಂದರು.
ಸರ್ವೋದಯ ಪಕ್ಷದ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಖಾನೆಯಿಂದ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ಸಿಎಂ ಹಾಗೂ ಡಿಸಿಎಂಗೆ ಮನವಿ ಸಲ್ಲಿಸಲಾಗಿತ್ತು. ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕುರಿತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಸ್ಪಂದಿಸದ ಕಾರಣ ಹೋರಾಟ ಅನಿವಾರ್ಯವಾಗಿದೆ ಎಂದರು.ಸಮಾವೇಶದಲ್ಲಿ ರೈತ ಸಂಘವು ಒಕ್ಕೋರಲಿನ ಒತ್ತಾಯ ಮಾಡಿ 21 ನಿರ್ಣಯಗಳ ಕುರಿತು ಡಿಸಿ ಡಾ. ಸುರೇಶ ಇಟ್ನಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಾವೇಶದಲ್ಲಿ ಎ.ವಿ. ಕಣವಿ, ಗದ್ದಿಮಠದ ಶ್ರೀಗಳು, ಕರಿಯಪ್ಪ ಗುಡಿಮನಿ, ಕೆ.ಬಿ. ಗೋನಾಳ, ಭೀಮಸೇನ ಕಲಕೇರಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು.ಸರ್ಕಾರದ ಸೂಚನೆಯಂತೆ ಬಲ್ಡೋಟಾ ಕಾರ್ಖಾನೆಗೆ ಜಮೀನು ಕೊಟ್ಟಿರುವ ವಾಸ್ತವ ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಕುರಿತು ಮೂರು ಸುತ್ತಿನ ಸಭೆ ನಡೆಸಲಾಗಿದೆ. ಕಾನೂನು ಇಲಾಖೆಗೂ ವರದಿ ಸಲ್ಲಿಸಲಾಗಿದೆ. ಕೆರೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಅವಕಾಶವಿದೆ. ನಾನೇ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಗತ್ಯ ನೆರವು ನೀಡುವೆ ಎಂದು ಕೊಪ್ಪಳ ಡಿಸಿ ಡಾ.ಸುರೇಶ್ ಇಟ್ನಾಳ ತಿಳಿಸಿದ್ದಾರೆ.
ಬಲ್ಡೋಟಾ ಕಂಪನಿಗೆ ಭೂಮಿ ನೀಡುವಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಹೈಕೋರ್ಟ್ ರೈತರ ಪರವಾಗಿ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಭೂಮಿ ಬಳಕೆಯ ವಿಚಾರ ಚರ್ಚೆಯಾಗಿದ್ದರೂ, ಬಸಾಪುರ ಕೆರೆ ಕುರಿತು ವಿಚಾರಣೆ ನಡೆದಿಲ್ಲ. ಸರ್ಕಾರವೇ ಕೆರೆಯನ್ನು ಲೀಜ್‌ಗೆ ನೀಡಿದೆ. ಪುರಾತನ ಕೆರೆ ಉಳಿಸಲು ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.ಐಜಿಪಿ ಹರ್ಷ ಭೇಟಿ: ಬಲ್ಡೋಟಾ ಕಾರ್ಖಾನೆ ಗಲಾಟೆ ಪ್ರಕರಣದ ಹಿನ್ನೆಲೆ ಬಳ್ಳಾರಿ ವಲಯ ಐಜಿಪಿ ಪಿ.ಎಸ್.ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸಂಪೂರ್ಣ ಮಾಹಿತಿ ಹಾಗೂ ಕೈಗೊಂಡಿರುವ ಪೊಲೀಸ್ ಕ್ರಮಗಳ ಕುರಿತು ಎಸ್‌ಪಿ ಡಾ.ರಾಮ್ ಅರಸಿದ್ದಿ ಅವರಿಂದ ಮಾಹಿತಿ ಪಡೆದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.