ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಗಣೇಶೋತ್ಸವ ಎಂದರೆ ಆಡಂಬರಕ್ಕೆ ಅವಕಾಶ ಇರಬಾರದು. ಅರ್ಥಪೂರ್ಣ ವಿಚಾರ ಮಂಥನಗಳಿಗೆ ಮಾತ್ರ ಅವಕಾಶ ಇರಬೇಕು ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ದವಿನಾಯಕ ಸೇವಾ ಮಂಡಳಿ ಹಮ್ಮಿಕೊಂಡಿರುವ 49ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಣೇಶೋತ್ಸವ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಹಾಗಾಗಿ ಗಣೇಶ ಉತ್ಸವಗಳಲ್ಲಿ ಆಡಂಬರ ಆಚರಣೆಯಾಗಬಾರದು. ಅರ್ಥಪೂರ್ಣ ವಿಚಾರಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.ಭಾರತೀಯರಾದ ನಾವು ಮನುಷ್ಯನ ಶಕ್ತಿಗೆ ಮೀರಿದ ಅತೀತವಾಗಿ ಶಕ್ತಿ ಇದೆ ಎಂಬ ಭಾವನೆಯನ್ನು ಇಟ್ಟುಕೊಂಡು ಆ ಶಕ್ತಿಯನ್ನು ನಾವೆಲ್ಲಾ ಆಚರಣೆ ಮಾಡುತ್ತಾ ಬರುತ್ತಿದ್ದೇವೆ. ವರ್ಷದಲ್ಲಿ ಸಾಕಷ್ಟು ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಒಂದೊಂದು ದೈವಿಶಕ್ತಿಯನ್ನು ಆರಾಧನೆ ಮಾಡುತ್ತಿರುವುದನ್ನು ಭಾರತೀಯ ಪರಂಪರೆಯಲ್ಲಿ ಕಾಣಬಹುದಾಗಿದೆ ಎಂದರು.ಗೌರಿ ಮತ್ತು ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ. ಈ ಹಬ್ಬ ಆಚರಣೆಗೆ ಸಾಕಷ್ಟು ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ ಇದೆ. ನಾವು ಯಾವುದೇ ಒಂದು ಕೆಲಸ ಪ್ರಾರಂಭ ಮಾಡಬೇಕಾದರೆ ಗಣೇಶನನ್ನು ಆರಾಧನೆ ಮಾಡುವ ಮೂಲಕ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಗಣೇಶ ಹಬ್ಬವನ್ನು ಯಾವುದೇ ಜಾತಿ, ಭೇದ, ವರ್ಣವನ್ನು ಲೆಕ್ಕಿಸದೆ ವಿಶೇಷವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದ ಅವರು, ಎಲ್ಲರ ಭಾವನೆಗೆ ನಿಲುಕದೇ ಇರುವ ಅತೀತವಾಗಿ ಶಕ್ತಿ ಎಂದರೆ ಗಣೇಶ ಎಂದರು.ಬಾಲಗಂಗಾಧರ ತಿಲಕರು ಪ್ರಪ್ರಥಮವಾಗಿ ಗಣೋಶೋತ್ಸವನ್ನು ಪ್ರಾರಂಭಿಸಿದರು. ಆಗ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ಸಂದರ್ಭ. ಅಂತಹ ಸಂದರ್ಭದಲ್ಲಿ ನಮ್ಮ ಮೇಲೆ ಹೇರಿದ್ದ ನಿಯಮಾವಳಿಗಳ ನಡುವೆಯೂ ತಿಲಕರು ಧಾರ್ಮಿಕ ಆಚರಣೆಯ ಉದ್ದೇಶವನ್ನಿಟ್ಟುಕೊಂಡು ಸಾಮಾಜಿಕ, ಸಾಮರಸ್ಯವನ್ನು ಮೂಡಿಸುವ ಜತೆಗೆ ಸ್ವಾತಂತ್ರ್ಯದ ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯಯದ ಕಹಳೆಯನ್ನು ಊದುವ ಕೆಲಸ ಯಶಸ್ವಿಯಾಗಿ ನೆರವೇರಿತು ಎಂದು ಅವರು ಹೇಳಿದರು.ತುಮಕೂರಿನಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯವರು ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇಂದಿನ ಆಧುನಿಕ ಜಗತ್ತು ಆಡಂಬರಕ್ಕೆ ಮಾರು ಹೋಗಿದೆ. ಹಾಗಾಗಿ ಹೆಚ್ಚು ಹೆಚ್ಚು ಯುವಕರನ್ನು ಈ ಸೇವಾ ಮಂಡಳಿ ಕಡೆ ಕರೆ ತರುವ ಕೆಲಸ ಮಾಡಬೇಕಾಗಿದೆ ಎಂಬ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.ಸೇವಾ ಮಂಡಳಿ ಇಟ್ಟುಕೊಂಡಿರುವ ಉದ್ದೇಶವನ್ನು ಯಥಾವತ್ತವಾಗಿ ಈಡೇರಿಸುವತ್ತ ಗಮನ ಹರಿಸಬೇಕು. ಜನರ ಆಶಯಗಳಿಗೆ ಧಕ್ಕೆ ತರುವ ಕೆಲಸ ಎಂದೂ ಆಗಬಾರದು ಎಂದು ಅವರು ತಿಳಿಸಿದರು.ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದ ಸಿದ್ದಿವಿನಾಯಕ ಸೇವಾ ಮಂಡಳಿ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲೂ ಸಹ ಸೇವಾ ಮಂಡಳಿ ಗಣೇಶ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದು ಆಶಿಸಿದರು.ಶಾಸಕ ಜ್ಯೋತಿಗಣೇಶ್ ಮಾತನಾಡಿ, ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಹಿಂದೆ ಗಣೇಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು. ಆದರೆ ಈಗ ಊರಿಗೆ 101 ಗಣಪತಿಗಳನ್ನು ಪ್ರತಿಷ್ಠಾಪಿಸುತ್ತಿರುವುದರಿಂದ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸೇವಾ ಮಂಡಳಿಯ ಅಧ್ಯಕ್ಷ ಎಚ್.ಆರ್. ನಾಗೇಶ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ ಟಿ.ಎಸ್., ಸಹ ಕಾರ್ಯದರ್ಶಿ ಎ.ಆರ್. ಶ್ರೀನಾಥ್, ಖಜಾಂಚಿ ಟಿ.ಆರ್. ನಟರಾಜು, ಕೋರಿ ಮಂಜಣ್ಣ, ಆರ್.ಎಲ್. ರಮೇಶ್‌ಬಾಬು ಹಾಗೂ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.