‘ಭದ್ರಾ’ ರೈತರ ಹಿತಕ್ಕಾಗಿ ಯಾವುದೇ ತ್ಯಾಗ: ಎಂ.ಪಿ.ರೇಣುಕಾಚಾರ್ಯ

| Published : Sep 10 2025, 01:03 AM IST

ಸಾರಾಂಶ

ಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶದ ರೈತರ, ಜನರ ಹಿತ ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶದ ರೈತರ, ಜನರ ಹಿತ ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಜಿಲ್ಲಾ ರೈತ ಒಕ್ಕೂಟ ವತಿಯಿಂದ ಮಂಗಳವಾರ ತಾಲೂಕಿನ ಕುಂದೂರು ಗ್ರಾಮದಲ್ಲಿ ಭದ್ರಾನಾಲೆಯ ಅಚ್ಚುಕಟ್ಟು ಪ್ರದೇಶದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಪ್ರಚಾರಕ್ಕಾಗಿ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಥವಾ ಇನ್ಯಾವುದೋ ಉದ್ದೇಶದಿಂದ ಈ ಹೋರಾಟ ಮಾಡುತ್ತಿಲ್ಲ, ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಿಕೊಡಲು ನಾನು ಪ್ರಾಮಾಣಿಕತೆ ಹಾಗೂ ಪಾರದರ್ಶಕ ಹೋರಾಟ ಮಾಡುತ್ತಿದ್ದೇನೆ ಎಂದರು.

ಯಾರನ್ನೊ ಟೀಕೆ ಮಾಡಲಿಕ್ಕೆ ನಾವು ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿಲ್ಲ, ನಾಲೆಯನ್ನು ಸೀಳಿ ಚಿತ್ರದುರ್ಗ, ಚಿಕ್ಕಮಗಳುರು ಜಿಲ್ಲೆಗಳಿಗೆ ನೀರು ಕೊಡುತ್ತಿರುವ ಬಗ್ಗೆ ವಾಸ್ತಾವಾಂಶವನ್ನು ರೈತರಿಗೆ ವಿವರಿಸಲು ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಕ್ಕದ ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಲು ನಮ್ಮ ವಿರೋಧ ಇಲ್ಲ, ಆದರೆ ನಾಲೆಯನ್ನು ಸೀಳಿ ನೀರು ಕೊಟ್ಟರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡಲು ಅಸಾಧ್ಯವಾಗುತ್ತದೆ, ಕೇವಲ ನೀರು ಕೊಡುವ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ ಅವರು ನಾಲೆಯ ಕೆಳ ಭಾಗದಲ್ಲಿ ನಾಲೆಯನ್ನು ಸೀಳಿ ನೀರು ಕೊಡುವ ಅಗತ್ಯವಿರಲಿಲ್ಲ ಎಂದರು.

ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ ಆದರೆ ಅವರುಗಳು ಅವರದ್ದೇ ಸರ್ಕಾರದ ಸಿಎಂ ಹಾಗೂ ಡಿಸಿಎಂ ಅವರನ್ನು ಈ ವಿಷಯವಾಗಿ ಭೇಟಿ ಮಾಡದೇ ಸುಮ್ಮನೆ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಅಂದಿನ ನಮ್ಮ ಸರ್ಕಾರದಲ್ಲಿ ಪಕ್ಕದ ಜಿಲ್ಲೆಯ ಜನತೆಗೆ ಕುಡಿಯುವ ನೀರು ಕೊಡಲು ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಭದ್ರತೆ ಆಳದಲ್ಲಿ ನಾಲೆಯನ್ನು ಸೀಳಿ ನೀರು ಕೊಡಿ ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಮಾಡಿರಲಿಲ್ಲ ಎಂದರು.

ನಾನು ರಾಕೀಯ ನಿವೃತ್ತಿ ಘೋಷಿಸಲು ಸಿದ್ಧ:

ಭದ್ರಾ ನಾಲೆಯ ಹತ್ತು ಅಡಿಯ ಆಳದಲ್ಲಿ ನಾಲೆಯನ್ನು ಸೀಳಿ ಉಭಯ ಜಿಲ್ಲೆಗಳಿಗೆ ನೀರು ಕೊಟ್ಟಿಲ್ಲ ಎಂದು ಶಾಸಕರು ಸಾಬೀತುಪಡಿಸಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು. ನಾವು ಪ್ರತಿಪಕ್ಷದವರಾಗಿ ಜಿಲ್ಲೆಯ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಮುಂದಿನ ಹೋರಾಟ:

ಈ ಅವೈಜ್ಞಾನಿಕ ಕೆಲಸದ ಕಾರಣದಿಂದ ಬೇಸಿಗೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೃಷಿಗೆ ನೀರು ಸಿಗುವುದು ಕಷ್ಟ ಆಗಬಹುದು. ಈ ಕಾಮಗಾರಿ ಮುಂದುವರಿದರೆ ನಾವು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಬಸುವರಾಜನಾಯ್ಕ್,ಹರಿಹರದ ಚಂದ್ರಶೇಖರ್ ಪೂಜಾರ್, ಜಿಲ್ಲಾ ರೈತ ಒಕ್ಕೂಟ ಅಧ್ಯಕ್ಷ ಕೊಳೆನಹಳ್ಳಿ ಸತೀಶ್ ಮಾತನಾಡಿದರು.

ಹೊಳೆಸಿರಿಗೆರ ನಾಗನಗೌಡ,ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಲೋಕಿಕೆರೆ ನಾಗರಾಜ್,ಪ್ರಧಾನ ಕಾರ್ಯದರ್ಶಿ ಕಡ್ಳೆಬಾಳು ಧನಂಜಯ,ಜಿ.ಪಂ. ಮಾಜಿ ಸದಸ್ಯ ಗುರುಮೂರ್ತಿ, ಕುಂದೂರು ಅನಿಲ್, ಅರಕೆರೆ ನಾಗರಾಜು, ಜೆ.ಕೆ.ಸುರೇಶ್, ಜಗದೀಶ್ ಬಣಕಾರ್, ನೆಲಹೊನ್ನೆ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಲತಾ ಹಾಲೇಶ್ ಇತರರು ಇದ್ದರು.