ಗಂಭೀರ ಚರ್ಚೆಗಳಿಲ್ಲ; ಒಣ ಪ್ರತಿಷ್ಠೆಯ ಮಾತೇ ಎಲ್ಲಾ!

| Published : Feb 12 2024, 01:39 AM IST

ಸಾರಾಂಶ

ಸಂಸದ ಡಾ ಉಮೇಶ್ ಜಾಧವ್ ಅಧ್ಯಕ್ಷತೆಯಲ್ಲಿ ಕೊನೆಗೂ 2 ವರ್ಷಗಳ ನಂತರ ದಿಶಾ ಸಭೆ ನಡೆಯಿತು. ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಗಂಭೀರ ಸ್ವರೂಪದ ಚರ್ಚೆ, ಬೆಳಕು ಚೆಲ್ಲುವಂತಹ ಸಭೆಯಾಗಬೇಕಿದ್ದ ದಿಶಾ ಸಭೆಯಲ್ಲಿ ಗಂಭೀರ ವಿಚಾರಗಳಿಗಿಂತ ಒಣ ಪತಿಷ್ಠೆಗಳಿಗೇ ಇಡೀ ಸಭೆಯ ಕಲಾಪದ ಸಿಂಹಪಾಲು ಬಲಿಯಾಯ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಡಿಸಿ ಕಚೇರಿಯಲ್ಲಿ ಸಂಸದ ಡಾ ಉಮೇಶ್ ಜಾಧವ್ ಅಧ್ಯಕ್ಷತೆಯಲ್ಲಿ ಕೊನೆಗೂ 2 ವರ್ಷಗಳ ನಂತರ ದಿಶಾ ಸಭೆ ನಡೆಯಿತು. ದುರಂತವೆಂದರೆ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಗಂಭೀರ ಸ್ವರೂಪದ ಚರ್ಚೆ, ಬೆಳಕು ಚೆಲ್ಲುವಂತಹ ಸಭೆಯಾಗಬೇಕಿದ್ದ ದಿಶಾ ಸಭೆಯಲ್ಲಿ ಗಂಭೀರ ವಿಚಾರಗಳಿಗಿಂತ ಒಣ ಪತಿಷ್ಠೆ, ಪಕ್ಷಗಳ ರಾಜಕೀಯ, ವೈಯಕ್ತಿಕ ಕಲಹಗಳಿಗೇ ಇಡೀ ಸಭೆಯ ಕಲಾಪದ ಸಿಂಹಪಾಲು ಬಲಿಯಾಯ್ತು.

2022ರ ಜೂನ್‌ 13ರಂದು ನಡೆದಿದ್ದ ದಿಶಾ ಸಭೆ ಎರಡು ವರ್ಷಗಳ ನಂತರ ಭಾನುವಾರ ನಡೆಸಲಾಯ್ತು. ರಾಜ್ಯಸಬೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಈ ಸಭೆಯ ಅಧ್ಯಕ್ಷತೆ ವಹಿಸಬೇಕಿತ್ತು. ಅವರ ಗೈರು ಹಾಜರಿಯಲ್ಲಿ ಸಂಸದ ಡಾ. ಉಮೇಶ ಜಾಧವ್‌ ಸಬೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಆರಂಭದಲ್ಲಿ ಮಾತನಾಡಿದ ಡಾ. ಜಾದವ್‌ ಲೋಕಸಬೆ ಚುನಾವಣೆ ಹಿನ್ನೆಲೆಯಲ್ಲಿ ಸಭೆಯನ್ನು ಭಾನುವಾರದ ರಜೆ ಇದ್ದರೂ ನಡೆಸಲಾಗಿದೆ ಎಂದು ಗಮನ ಸೆಳೆದರು. ಆದರೆ ನಂತರ ಸಭೆಯಲ್ಲಿ ಸಿಂಹಪಾಲು ಪ್ರತಿಷ್ಠೆಯ ಮಾತುಗಳಿಗೆ ಕಲಾಪ ಮೀಸಲಾಗಿ ಹೋಯ್ತು. ದಿಲ್ಲೆಯಲ್ಲಿ ಕಾಂಗ್ರೆಸ್‌ನ ಸಾಕಷ್ಟು ಶಾಸಕರಿದ್ದರೂ ಕಲಾಪಕ್ಕೆ ಬಂದಿರಲಿಲ್ಲ. ತಿಪ್ಪಣ್ಣ ಕಮಕನೂರ್‌ ಮಾತ್ರ ಸಬೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. 2 ವರ್ಷಗಳ ನಂತರದ ಸಭೆಯಲ್ಲೂ ಕಾಂಗ್ರಸ್ಸಿಗರು ಯಾಕೆ ಬರಲಿಲ್ಲ ಎಂಬುದೇ ಚರ್ಚೆಯ ಸಂಗತಿಯಾಯ್ತು.

ಸಭೆಯಲ್ಲಿ ಪೊಲೀಸರ ವಿರುದ್ಧ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಫುಲ್ ಗರಂ ಆಗಿದ್ದು ಕಂಡು ಬಂತು. ಸುನೀಲ್ ವಲ್ಯಾಪುರೆ ಗರಂ ಆದ ಹಿನ್ನಲೆಯಲ್ಲಿ ಡಿಸಿ, ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಸಭೆಗೆ ಬುಲಾವ್ ಹೇಳಿದರೆ ಪೊಲೀಸ್ ಆಯುಕ್ತರಿಗೆ ಬುಲಾವ್ ಬಳಿಕ ಸಭೆಗೆ ಡಿಸಿಪಿ ಕನ್ನಿಕಾ ಸಿಕ್ರಿವಾಲ್‌ ಬಂದಾಗ ಮತ್ತಷ್ಟು ಬಿಸಿ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕರು, ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ಆಡಳಿತ ಸಂಪೂರ್ಣ ಕುಸಿದಿದೆ ಎಂದು ದೂರಿದರು. ಶಾಸಕ ಬಸವರಾಜ್ ಮತ್ತಿಮೂಡ ಆಕ್ರೋಶ ಹೊರಹಾಕುತ್ತ ಕಮಲಾಪುರದಲ್ಲಂತೂ ಸಾಕಷ್ಟು ಅಪರಾಧಗಳು ನಡೆದರೂ ಕೇಳೋರು ಇಲ್ಲದಂತಾಗಿದೆ ಎಂದರು.

ಸಭೆಯಲ್ಲಿ ಬಿಜೆಪಿ ದನಗಳು ಮತ್ತು ಕಾಂಗ್ರೆಸ್ ದನಗಳ ಬಗ್ಗೆ ಸ್ವಾರಸ್ಯಕರ ಚರ್ಚೆಯೂ ನಡೆಯಿತು. ಕಮಲಾಪೂರದಲ್ಲಿ ದನಗಳ್ಳತನ ವ್ಯಾಪಕವಾಗಿ ನಡೆಯುತ್ತಿವೆ ಎಂದು ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ ಚರ್ಚೆ ಆರಂಭಿಸಿದರು.

ಬಿಜೆಪಿ ಕಾರ್ಯಕರ್ತರ ಹೊಲಗಳಲ್ಲಿನ ದನಗಳೇ ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನವಾಗುತ್ತಿವೆ ಎಂದ ಮತ್ತಿಮೂಡ ಮಾತಿಗೆ ಸಭೆಯಲ್ಲೇ ತಿರುಗೇಟು ನೀಡಿದ ಕಾಂಗ್ರೆಸ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ದನಗಳ ಬಣ್ಣ , ಬಿಜೆಪಿ ದನಗಳ ಬಣ್ಣ ಯಾವುದು ಹೇಳಿ ಎಂದು ಪಟ್ಟು ಹಿಡಿದಾಗ ಸಭೆಯಲ್ಲಿ ನಗೆ ತೇಲಿತ್ತು. ಇತ್ತ ಸಂಸದ ಉಮೇಶ ಜಾಧವ್‌ ಪುತ್ರ, ಚಿಂಚೋಳಿ ಶಾಸಕ ಅವಿನಾಶ ಜಾಧವ್‌ ಸಭೆಯಲ್ಲಿ ನಾವು ಹೇಳಿದ ಯಾವ ಮಾತಿಗೂ ಬೆಲೆ ಇಲ್ಲ, ನಮ್ಮ ಮಾತು ಪಿಡಿಓಗಳೂ ಕೇಳುತ್ತಿಲ್ಲ. ತಾರತಮ್ಯ ಇದ್ದೆ ಇದೆ ಎಂದ ಅಲವತ್ತುಕೊಂಡರು.

ತಮ್ಮ ಕ್ಷೇತ್ರದಲ್ಲಿ ರಾತ್ರಿ ಸಭೆಗೆ ಹೋದರೆ ಪಿಎಸ್‌ಐಗಲು ಬರೋದಿಲ್ಲ, ಆದರೆ ಮಾಜಿ ಶಾಸಕರು, ಕಾಂಗ್ರೆಸ್‌ನವರು ಕರರೆಯದಿದ್ದರೂ ಆ ಸಭೆಗಳಿಗೆ ಪಿಎಸ್‌ಐ 10 ನಿಮಿಷ ಮೊದಲೇ ಹೋಗಿರುತ್ತಾರೆ. ಇದೇನಾ ಶಿಷ್ಠಾಚಾರ ಎಂದು ಖಾರವಾಗಿ ಪ್ರಶ್ನಿಸಿ ಕಲಬುರಗಿ ಪೊಲೀಸರು ಕಾಂಗ್ರೆಸ್‌ ಕೈಗೊಂಬೆಗಳೆಂದು ಶಾಸಕರಾದ ಬಸವರಾಜ ಮತ್ತಿಮಡ, ಅವಿನಾಶ ಜಾದವ್‌ ದೂರಿದರು.