ಶೂ, ಸಾಕ್ಸ್‌, ಬಟ್ಟೆಗಿಲ್ಲ ಭಾಗ್ಯ!

| Published : Feb 08 2024, 01:32 AM IST

ಸಾರಾಂಶ

2023-24ನೇ ಶೈಕ್ಷಣಿಕ ವರ್ಷ ಮುಗಿಯಲು ಬಂದರೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಇಂಡಿ ಹಾಗೂ ಚಡಚಣ ತಾಲೂಕಿನ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಶೂ, ಸಾಕ್ಸ್‌ ಹಾಗೂ ಬಟ್ಟೆ ಭಾಗ್ಯ ಇಲ್ಲದೇ ನಿಲಯದ ವಿದ್ಯಾರ್ಥಿಗಳಿಗೆ ಕಲಿಕಾಸಕ್ತಿ ಹಾಗೂ ಪ್ರೋತ್ಸಾಹ ಇಲ್ಲದಂತಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

2023-24ನೇ ಶೈಕ್ಷಣಿಕ ವರ್ಷ ಮುಗಿಯಲು ಬಂದರೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಇಂಡಿ ಹಾಗೂ ಚಡಚಣ ತಾಲೂಕಿನ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಶೂ, ಸಾಕ್ಸ್‌ ಹಾಗೂ ಬಟ್ಟೆ ಭಾಗ್ಯ ಇಲ್ಲದೇ ನಿಲಯದ ವಿದ್ಯಾರ್ಥಿಗಳಿಗೆ ಕಲಿಕಾಸಕ್ತಿ ಹಾಗೂ ಪ್ರೋತ್ಸಾಹ ಇಲ್ಲದಂತಾಗಿದೆ.

₹85 ಲಕ್ಷ ಬಿಡುಗಡೆಯಾದರೂ ಸೌಲಭ್ಯಗಳೇ ಇಲ್ಲ:

ವಸತಿ ನಿಲಯದ ನಿಲಯ ಪಾಲಕರನ್ನು ವಿಚಾರಿಸಿದರೇ ಶೂ ಹಾಗೂ ಬಟ್ಟೆ ಖಾಸಗಿ ಟ್ರಾನ್ಸಪೋರ್ಟ್‌ನಲ್ಲಿ ಬಂದು 2 ದಿನಗಳಾಗಿದ್ದು ಫೆ.8 ರಂದು ಹಂಚುತ್ತೇವೆ ಎಂಬ ಸಬೂಬು ನೀಡುತ್ತಿದ್ದಾರೆ. ಆದರೆ, ಅನುಷ್ಠಾನವಾಗುತ್ತಿಲ್ಲ. ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿನಲ್ಲಿ ವಸತಿ ನಿಲಯಗಳ ನಿರ್ವಹಣೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ಕಲಿಕೆಗೆ ಬೇಕಾದ ಸಾಮಗ್ರಿಗಳ ಖರೀದಿಗಾಗಿ ₹85 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಬಿಡುಗಡೆಯಾದ ಅನುದಾನವನ್ನು ಉಪಯೋಗಿಸಿಕೊಂಡು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶೂ ಹಾಗೂ ಬಟ್ಟೆ ವಿತರಣೆ ಮಾಡುವ ಗೋಜಿಗೆ ಅಧಿಕಾರಿಗಳಾಗಲಿ, ವಸತಿ ನಿಲಯ ಪಾಲಕರಾಗಲಿ ಮಾಡದೇ ಇರುವುದು ಅಧಿಕಾರಿಗಳ ನಿಷ್ಕಾಳಜಿ ಹಾಗೂ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸರ್ಕಾರ ಹಾಗೂ ಇಲಾಖೆ ಪ್ರತಿದಿನ ಪ್ರತಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗೆ ₹16.50 ಹಾಗೂ ಮೆಟ್ರಿಕ್‌ ನಂತರದ ಪ್ರತಿ ವಿದ್ಯಾರ್ಥಿಗೆ ₹17.50 ಪೈಸೆ ಖರ್ಚು ಮಾಡುತ್ತಿದೆ. ಆದರೆ, ಸರ್ಕಾರ ನೀಡುತ್ತಿರುವ ಅನುದಾನ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಬಳಕೆ ಆಗದೇ ಇರುವುದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಶೂ, ಬಟ್ಟೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಗಂಭೀರ ಆರೋಪ.

ಇಂಡಿ ಹಾಗೂ ಚಡಚಣ ತಾಲೂಕಿನ ವಸತಿ ನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಶಿಕ್ಷಣ ಪಡೆಯಬೇಕೆಂಬ ಹಂಬಲದಿಂದ ವಸತಿ ನಿಲಯಗಳಿಗೆ ಪ್ರವೇಶ ಪಡೆದ ಬಡವ ಕುಟುಂಬಗಳ ವಿದ್ಯಾರ್ಥಿಗಳಿಗೆ ನಿಲಯದಲ್ಲಿ ಮೂಲಭೂತ ಸೌಕರ್ಯಗಳು ಸಿಗದೇ ನಿರಾಸೆಯನ್ನುಂಟು ಮಾಡಿದ್ದಲ್ಲದೇ |ಅರ್ಧಕ್ಕೆ ಶಿಕ್ಷಣ ನಿಲ್ಲಿಸುವಂತ ವಾತಾವರಣ ನಿರ್ಮಾಣವಾಗಿರುವುದು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪಾಲಕರ ಆತಂಕ ಹೆಚ್ಚಿಸುವಂತೆ ಮಾಡಿದೆ.

ಮನೆಯಿಂದಲೇ ತಂದಿರುವ ಬಟ್ಟೆಗಳನ್ನೇ ಶುಭ್ರವಾಗಿಸಿಕೊಂಡು ಕಿತ್ತೊದ ಚಪ್ಪಲಿಯನ್ನೇ ಹಾಕಿಕೊಂಡು ಶಾಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇಂಡಿ ಹಾಗೂ ಚಡಚಣ ತಾಲೂಕಿನ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಸಾಮಾನ್ಯವಾಗಿದ್ದು, ಪಾಲಕರನ್ನು ಚಿಂತಾಕ್ರಾಂತರನ್ನಾಗಿ ಮಾಡಿದ್ದಲ್ಲದೇ ಸಾರ್ವಜನಿಕರ ಭಾರಿ ಆಕ್ರೋಶಕ್ಕೆ ಕಾರಣವಾಗಿ ಹೋರಾಟದ ಹಾದಿ ಹಿಡಿದಿದೆ.

ವಸತಿ ನಿಲಯದಲ್ಲಿದ್ದಾರೆ 2200 ವಿದ್ಯಾರ್ಥಿಗಳು!:

ಇಂಡಿ ಹಾಗೂ ಚಡಚಣ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಬಾಲಕರ ವಸತಿ ನಿಲಯ ಇಂಡಿಯಲ್ಲಿ 90 ವಿದ್ಯಾರ್ಥಿಗಳ ಪ್ರವೇಶ ಮಂಜೂರಾಗಿದ್ದು, ತಡವಲಗಾ 65, ಹೊರ್ತಿ 90, ಹಳಗುಣಕಿ 65, ಹಿರೇಬೇವನೂರ 65, ಲಚ್ಯಾಣ 90, ನಿಂಬಾಳ ಎಲ್‌ಟಿ 65, ಮೆಟ್ರೀಕ್‌ ಪೂರ್ವ ಬಾಲಕಿಯರ ವಸತಿ ನಿಲಯ ಇಂಡಿ 65, ಬಾಲಕರ ವಸತಿ ನಿಲಯ ಸಾಲೋಟಗಿ 65, ಬಾಲಕಿಯರ ವಸತಿ ನಿಲಯ ಹೊರ್ತಿ 65, ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಇಂಡಿ 100, ಬಾಲಕಿಯರ ವಸತಿ ನಿಲಯ ಇಂಡಿ 100 ಹಾಗೂ ಡಾ.ಬಿಆರ್‌.ಅಂಬೇಡ್ಕರ್‌ ವಸತಿ ಶಾಲೆ ಹಂಜಗಿ 125, ಹಲಸಂಗಿ 65, ಧೂಳಖೇಡ 65, ಚಡಚಣ 65, ದೇವರ ನಿಂಬರಗಿ 65, ಲೋಣಿ ಬಿ.ಕೆ 90 ಹಾಗೂ ನಿವರಗಿ ಗ್ರಾಮದಲ್ಲಿನ ವಸತಿ ನಿಲಯದಲ್ಲಿನ 65 ಜನ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರವೇಶಕ್ಕಾಗಿ ಮಂಜೂರು ನೀಡಿದ್ದು, ಹೆಚ್ಚುವರಿ ಸೇರಿ ಒಟ್ಟು 2200 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇದ್ದಾರೆ.

ಜ.26 ರಂದು ಎಲ್ಲ ವಸತಿ ನಿಲಯಗಳಿಗೆ ಶೂ, ಸಾಕ್ಸ್‌ ಸಪ್ಲೈ ಮಾಡಲಾಗಿದೆ. ವಸತಿ ನಿಲಯದಲ್ಲಿ ನಿಲಯ ಪಾಲಕರು ಶೂ, ಸಾಕ್ಸ್‌ ವಿತರಣೆ ಮಾಡದೇ ಇರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಹಂಜಗಿ ವಸತಿ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ಇನ್ನೂ ಶೂ, ಸಾಕ್ಸ್‌ ಬಟ್ಟೆ ಬಂದಿರುವುದಿಲ್ಲ. ಈಗಲೇ ಎಲ್ಲ ವಸತಿ ನಿಲಯದ ನಿಲಯ ಪಾಲಕರಿಗೆ ಮೆಸೆಜ್‌ ಹಾಕುತ್ತೇನೆ. ಕೂಡಲೇ ವಿತರಣೆ ಮಾಡಲು ಸೂಚಿಸುತ್ತೇನೆ.

-ಬಿ.ಜೆ.ಇಂಡಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಇಂಡಿ.

----------------

ಇಂಡಿ ಹಾಗೂ ಚಡಚಣ ತಾಲೂಕುಗಳಲ್ಲಿ ಪ್ರವೇಶ ಪಡೆದ ಸುಮಾರು 2200 ಜನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಮುಗಿಯಲು ಬಂದರೂ ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌, ಬಟ್ಟೆ ವಿತರಣೆ ಮಾಡದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿ. ವಸತಿ ನಿಲಯಗಳ ಅವ್ಯವಸ್ಥೆ, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕನ್ನಡಪ್ರಭವು ವಿಸ್ತೃತ ವರದಿ ಮಾಡಿದ್ದು, ಈ ಕುರಿತು ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ಫೆ.9 ರಂದು ಅಧಿಕಾರಿಗಳ ವಿರುದ್ಧ ಉಗ್ರಹೋರಾಟ ಹಮ್ಮಿಕೊಳ್ಳಲಾಗಿದೆ. ವಸತಿ ನಿಲಯಗಳು ಸುಧಾರಣೆ ಆಗುವವರೆಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು.

-ಧರ್ಮರಾಯ ಸಾಲೋಟಗಿ,

ದರವೇ, ಜಿಲ್ಲಾ ಸಂಚಾಲಕ.

--------------------------

ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಬೆಂಗಳೂರಿನ ಸಮಾಜ ಕಲ್ಯಾಣ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುತ್ತದೆ.

-ಶಟ್ಟೆಪ್ಪ ಹರಿಜನ, ದರವೇ, ತಾಲೂಕು ಅಧ್ಯಕ್ಷ (ಶಿವಪೂರ).

-------------------