ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಹಣದ ಕೊರತೆಯಿಲ್ಲ. ಕುಡಿಯುವ ನೀರಿನ ತೊಂದರೆಬಾರದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಹಣದ ಕೊರತೆಯಿಲ್ಲ. ಕುಡಿಯುವ ನೀರಿನ ತೊಂದರೆಬಾರದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಸಚಿವರು ಮಾತನಾಡಿದರು.

ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಗಮನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಲಭ್ಯತೆಯಿದೆ. ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಪರಿಹಾರ ಒದಗಿಸಲು ಪ್ರಕೃತಿ ವಿಕೋಪ ನಿಧಿಯಡಿ ಹಣ ಇದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮುತುವರ್ಜಿಯಿಂದ ಜನರಿಗೆ ಅಗತ್ಯವಿರುವ ಕುಡಿಯುವ ನೀರನ್ನು ಪೂರೈಸಲು ಬದ್ದವಾಗಿದ್ದೇವೆ ಎಂದರು.

ಜಾನುವಾರುಗಳ ಮೇವಿನ ಸಮಸ್ಯೆ ನೀಗಿಸಲು ಪಶುಪಾಲನಾ ಇಲಾಖೆ ೨೫ ಕೋಟಿ ರೂ. ವೆಚ್ಚ ಮಾಡುತ್ತಿದೆ. ಈಗಾಗಲೇ ಮೇವಿನ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ವಿತರಿಸಲಾಗುತ್ತಿದೆ. ಇದಕ್ಕಾಗಿಯೇ ನೀರಿನ ಲಭ್ಯತೆ ಇರುವ ಪ್ರದೇಶದಲ್ಲಿ ಅಗತ್ಯವಿರುವ ಪ್ರಮಾಣದಲ್ಲಿ ಮೇವಿನ ಬೀಜ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಮನೆ ಹಾನಿಯಂತಹ ಸಮಸ್ಯೆ ಉಂಟಾದಾಗ ತುರ್ತಾಗಿ ಪರಿಹಾರ ನೀಡಲಾಗುತ್ತಿದೆ. ಸಂಕಷ್ಟಕ್ಕೊಳಗಾದ ಜನತೆಗೆ ನೆರವಾಗುತ್ತಿದ್ದೆವೆ. ಈ ಹಿಂದೆ ಅನಾವೃಷ್ಠಿಯಿಂದ ಬೆಳೆ ನಾಶವಾಗಿದೆ. ಅತಿವೃಷ್ಠಿಯಿಂದಲೂ ಸಹ ಬೆಳೆ ಹಾನಿಗೀಡಾಗಿರುವುದು ಕಂಡು ಬಂದಿದೆ. ಕೇಂದ್ರ ಬರ ಅಧ್ಯಯನ ತಂಡ ಸಹ ನಾಳೆ ಇಲ್ಲವೆ ನಾಳಿದ್ದು ಭೇಟಿ ನೀಡುತ್ತಿದ್ದು, ಬರದ ವಾಸ್ತವ ಪರಿಸ್ಥಿತಿ ವೀಕ್ಷಣೆ ಮಾಡಲಿದೆ ಎಂದರು.

ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಿದ್ದೇವೆ. ಸ್ವಚ್ಚತೆಗೆ ಹೆಚ್ಚು ಆದ್ಯತೆ ಕೊಡಬೇಕು. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಇಂದಿನ ಸಭೆಯಲ್ಲಿ ಹಲವಾರು ಸಮಸ್ಯೆಗಳನ್ನು ಜನರು ನಮ್ಮ ಮುಂದೆ ಇಟ್ಟಿದ್ದಾರೆ. ಇವುಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು ಎಂದರು.

ಹನೂರು ಪಟ್ಟಣದಲ್ಲಿ ಕುಡಿಯುವ ನೀರು ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಸಭೆಯಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಕೇಳಿ ಬಂದಿದ್ದು, ಇಂತಹ ಕಡೆ ಕೊಳವೆಬಾವಿಗಳನ್ನು ರೀ ಡ್ರಿಲ್ ಮಾಡಿಸಿ ತೊಂದರೆ ನಿವಾರಿಸಬೇಕು ಎಂದು ಸಚಿವರು ಸೂಚಿಸಿದರು.

ಶಾಸಕರಾದ ಎಂ.ಆರ್. ಮಂಜುನಾಥ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ೬ ಕೋಟಿ ರೂ. ವೆಚ್ಚವಾಗುತ್ತಿದ್ದು, ಇನ್ನೂ ಅಗತ್ಯವಿರುವ ೩.೫ ಕೋಟಿ ರೂ.ಗಳನ್ನು ಒದಗಿಸಬೇಕು. ಈಗಾಗಲೇ ಮೇವು ಬೆಳೆಯಲು ನೀಡಲಾಗುತ್ತಿರುವ ಮೇವಿನ ಕಿಟ್ ಉಪಯೋಗಕ್ಕೆ ಬರುತ್ತಿವೆ. ಇಂತಹ ನೆರವಾಗುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮೂರು ತಾಸಿಗೂ ಹೆಚ್ಚು ಕಾಲ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು. ಪ್ರತಿಯೊಬ್ಬ ಅರ್ಜಿದಾರರೊಂದಿಗೂ ಮಾತನಾಡಿ ವಿವರವಾಗಿ ಅವರ ಸಮಸ್ಯೆಗಳನ್ನು ಆಲಿಸಿದರು. ಪಡಿತರ ಚೀಟಿ, ಕುಡಿಯುವ ನೀರು, ಪಿಂಚಣಿ, ವಿಧವಾ ವೇತನ, ಸ್ಮಶಾನಕ್ಕೆ ಜಾಗ, ಕಾಡುಪ್ರಾಣಿಗಳ ಹಾವಳಿ, ನಿವೇಶನ, ಕೆ.ಎಸ್.ಆರ್.ಟಿಸಿ ಬಸ್ಸುಗಳ ನಿಲುಗಡೆ, ಇ-ಸ್ವತ್ತು, ಖಾತೆ ಬದಲಾವಣೆ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಜನರು ಸಚಿವರ ಮುಂದೆ ಅರ್ಜಿ ಸಲ್ಲಿಸಿ ಮನವಿ ಮಾಡಿದರು. ಹಲವು ವೈಯಕ್ತಿಕ ಸಮಸ್ಯೆ, ಸಾರ್ವಜನಿಕರ ಸ್ವತ್ತು ಸಂರಕ್ಷಣೆ ಮಾಡುವ ಬಗ್ಗೆಯೂ ಜನರು ಸಭೆಯಲ್ಲಿ ಸಚಿವರ ಗಮನಕ್ಕೆ ತಂದರು.

ಇದೇ ವೇಳೆ ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಚಿವರು ಪರಿಹಾರ ವಿತರಿಸಿದರು. ಸಾಂಕೇತಿಕವಾಗಿ ಮೇವಿನ ಕಿಟ್‌ಗಳನ್ನು ರೈತರಿಗೆ ವಿತರಿಸಿದರು.

ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಚಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಸಿದ್ದರಾಜು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್, ಶಶಿಧರ್, ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್, ತಹಶೀಲ್ದಾರ್ ಚೈತ್ರ ಇತರರು ಹಾಜರಿದ್ದರು.