ಸಾರಾಂಶ
ಹಾನಗಲ್ಲ:
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ, ಅದಕ್ಕೆ ನಾನೇ ಜವಾಬ್ದಾರಿ. ಆದರೆ ಪ್ರಸ್ತಾವನೆ ಸಲ್ಲಿಸುವಾಗ ಸರಿಯಾದ ಅಂದಾಜು ಪಟ್ಟಿ ಸಲ್ಲಿಸಿ. ಅನಗತ್ಯವಾಗಿ ಹೆಚ್ಚು ಹಣ ತೋರಿಸಿ ಗೊಂದಲಕ್ಕೆ ಈಡು ಮಾಡಬೇಡಿ ಎಂದು ಅಧಿಕಾರಿಗಳಿಗೆ ಸಚಿವ ಎನ್.ಎಸ್. ಬೋಸರಾಜು ಸೂಚಿಸಿದರು.ತಾಲೂಕಿನ ಚಿಕ್ಕಹುಲ್ಲಾಳ, ಮಕರವಳ್ಳಿ ಏತ ನೀರಾವರಿ ಯೋಜನೆಗಳು ಹಾಗೂ ಕಾರ್ಯ ಪ್ರಗತಿಯಲ್ಲಿರುವ ಸಮ್ಮಸಗಿ ಏತ ನೀರಾವರಿ ಯೋಜನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಚಿಕ್ಕ ಹುಲ್ಲಾಳ ಏತ ನೀರಾವರಿ ಯೋಜನೆ ಅಪೂರ್ಣವಾಗಿರುವುದು ಮತ್ತು ನಿಯಮಿತವಾಗಿ ನೀರು ಹರಿಸದಿರುವ ಬಗ್ಗೆ ರೈತರು ದೂರಿದ್ದರಿಂದ ಗರಂ ಆದ ಸಚಿವರು, ಮುಲಾಜಿಲ್ಲದೆ ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದೆ, ನೀರು ಹರಿಸುವಲ್ಲಿ ಸರಿಯಾದ ಕಾರ್ಯಕ್ಕೆ ಅವಕಾಶ ಮಾಡಿಕೊಡದೇ ಹೋದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಅನಿವಾರ್ಯ. ನೀರಾವರಿ ಯೋಜನೆಗಳು ರೈತರ ಭೂಮಿಗೆ ನೀರೊದಗಿಸದಿದ್ದರೆ ಇದರ ಪ್ರಯೋಜನವೇನು ಎಂದು ತರಾಟೆಗೆ ತೆಗೆದುಕೊಂಡರು.ಚಿಕ್ಕಹುಲ್ಲಾಳ ಏತ ನೀರಾವರಿ ಯೋಜನೆಯಿಂದ ರಾತ್ರಿ ಹೊತ್ತಿನಲ್ಲಿ ನೀರು ಹರಿಯದಿರುವುದು ತಿಳಿದಿದ್ದರೂ ಕ್ರಮ ಜರುಗಿಸದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸಿ.ವಿ. ಹಾವನೂರ ಅವರಿಗೆ ಕೂಡಲೆ ಇದನ್ನು ಸರಿಪಡಿಸುವಂತೆ ತಾಕೀತು ಮಾಡಿದರು.
ಅಗತ್ಯವಿರುವಲ್ಲಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೆ ಹಣ ಮಂಜೂರು ಮಾಡಲಾಗುವುದು. ನೀರಾವರಿ ಯೋಜನೆಗಳ ಕಾಮಗಾರಿ ನಿಲ್ಲದಂತೆ ಕ್ರಮ ಜರುಗಿಸಬೇಕು. ಹಣದ ಅಗತ್ಯದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತನ್ನಿ. ಕೆರೆಗಳ ಹೂಳೆತ್ತುವ ಕಾಮಗಾರಿಗೂ ವಿಳಂಬವಿಲ್ಲದೆ ಹಣ ಮಂಜೂರಿ ಮಾಡಲಾಗುವುದು. ನೀರಾವರಿಗೆ ಅನನುಕೂಲವಾಗದಂತೆ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಉಪ್ಪಣಸಿ ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಹಣ ಮಂಜೂರಿಗೆ ರೈತರು ಮನವಿ ಮಾಡಿದರು. ಹೊಂಕಣ ಏತ ನೀರಾವರಿ ಯೋಜನೆ ಬಳಿ ವರದಾ ನದಿ ತಟದಲ್ಲಿರುವ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಠದ ಬಳಿ ನದಿಗೆ ತಡೆಗೋಡೆ ಹಾಗೂ ಬ್ರಿಜ್ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಗ್ರಾಮಸ್ಥರು ಮನವಿ ಮಾಡಿದರು. ಪ್ರಸ್ತಾವನೆ ಸಲ್ಲಿಸಿದಲ್ಲಿ ಕೂಡಲೇ ಮಂಜೂರು ಮಾಡುವ ಭರವಸೆಯನ್ನು ಸಚಿವರು ನೀಡಿದರು.
ಆನಂತರ ₹೧೦೫ ಕೋಟಿ ವೆಚ್ಚದ ಸಮ್ಮಸಗಿ ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕ ಶ್ರೀನಿವಾಸ ಮಾನೆ, ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಘವನ್, ವಿಜಯಪುರ ಉತ್ತರ ವಲಯದ ಮುಖ್ಯ ಅಭಿಯಂತರ ಜಗದೀಶ್ ರಾಥೋಡ್, ಅಧೀಕ್ಷಕ ಅಭಿಯಂತರ ಕೆ.ಸಿ. ಸತೀಶ್, ಧಾರವಾಡ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ದೇವರಾಜ ಶಿಗ್ಗಾಂವಿ, ಎಇಇ ಚಿದಂಬರ ಹಾವನೂರ, ಸಹಾಯಕ ಅಭಿಯಂತರ ರಾಘವೇಂದ್ರ ಕೆ.ಆರ್., ಮುಖಂಡರಾದ ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ಈರಣ್ಣ ಬೈಲವಾಳ, ಭರಮಣ್ಣ ಶಿವೂರ, ಮಹದೇವಪ್ಪ ಬಾಗಸರ, ಶಿವು ತಳವಾರ, ಅಶೋಕ ಹಲಸೂರ, ಪುಟ್ಟಪ್ಪ ನರೇಗಲ್, ಚಂದ್ರಪ್ಪ ಜಾಲಗಾರ ಮೊದಲಾದವರು ಇದ್ದರು.