ಹಡಗಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಹಗರಿಬೊಮ್ಮನಹಳ್ಳಿ: ತಾಲೂಕಿನ ಹಡಗಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಗತ್ಯ ಕ್ರಿಯಾ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಕಾಮಗಾರಿಗಳು ನೆನಗುದಿಗೆ ಬೀಳದಂತೆ ಎಚ್ಚರ ವಹಿಸಬೇಕು. ಎಲ್ಲೂ ಮಲತಾಯಿ ಧೋರಣೆಯ ಆರೋಪಗಳು ಕೇಳಿ ಬರಬಾರದು ಎಂದು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ನಾಯ್ಕ್ ತಾಕೀತು ಮಾಡಿದರು.
ತಾಲೂಕಿನ ಮೋರಗೇರಿ ಗ್ರಾಮದ ಸಮುದಾಧಾಯ ಭವನದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಹಡಗಲಿ ಕ್ಷೇತ್ರ ವ್ಯಾಪ್ತಿಯ ಹಂಪಸಾಗರ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಕ್ರಿಹಳ್ಳಿ, ನಾಗಲಾಪುರ, ಹಂಪಸಾಗರ ೩ನೇ ಕಾಲನಿಗಳಿಗೆ ಕಂದಾಯ ಗ್ರಾಮಗಳನ್ನಾಗಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಿರಿಗೊಂಡನಹಳ್ಳಿ, ಗದ್ದಿಕೇರಿ ಹೊಸಕ್ಯಾಂಪ್, ಬನ್ನಿಕಲ್ಲು ನವಗ್ರಾಮ ಹಾಗೂ ಎಂ.ಪಿ.ಪ್ರಕಾಶ್ ನಗರ, ಏಣಗಿ ಬಸಾಪುರ, ಜಿ.ಕೋಡಿಹಳ್ಳಿ ಹೊಸ ಕಾಲನಿ, ಸೊನ್ನ ಗ್ರಾಮದ ಕೆರೆ ಅಂಗಳದ ಮನೆಗಳು ಸೇರಿದಂತೆ ನಾನಾ ಏರಿಯಾಗಳು ಕಂದಾಯ ಗ್ರಾಮಗಳನ್ನಾಗಿಸುವ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ಕಂದಾಯ ಗ್ರಾಮಗಳಲ್ಲದ ಈ ವ್ಯಾಪ್ತಿಯಲ್ಲಿ ಖಾಸಗಿ ಅಥವಾ ಬಡಾವಣೆಗಳಿಗೆ ಇ-ಸ್ವತ್ತು, ಹಕ್ಕುಪತ್ರಗಳು ನೀಡುವ ವ್ಯವಸ್ಥೆಯಾಗಬೇಕು, ತೋಟದ ಮನೆಗಳಿಗೆ ೧೧ಬಿ ನೀಡಬೇಕು ಎಂದರು. ಸರ್ಕಾರದ ಯಾವುದೇ ಭೂಮಿಗಳು ನೊಂದಣಿಯಾಗಬೇಕಾದರೆ ಮಧ್ಯವರ್ತಿಗಳ ಮಾತಿಗೆ ಮನ್ನಣೆ ನೀಡದೆ, ಕಡ್ಡಾಯವಾಗಿ ನಮ್ಮ ಗಮನಕ್ಕೆ ತರಬೇಕು ಎಂದರು.ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ಮತ್ತು ಅಂಗನವಾಡಿ ಕೇಂದ್ರಗಳು ಸಂಪೂರ್ಣ ಪ್ರಗತಿ ಕಾಣಬೇಕು, ಪ್ರಬಾರಿ ಬಿಇಒ ಪ್ರಭಾಕರ, ಸಿಡಿಪಿಒ ಬೋರೇಗೌಡ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಕುರಿತು ಪ್ರತಿ ಗ್ರಾ.ಪಂ.ಗೆ ಒಂದರಂತೆ ಸೌಲಭ್ಯಗಳನ್ನೊಳಗೊಂಡು ಮಾದರಿ ಕಟ್ಟಡ, ನಿರ್ಮಾಣ ಮಾಡಬೇಕಿದೆ ಅದಕ್ಕಾಗಿ, ನಿವೇಶನ ಮತ್ತು ಯೋಜನೆಗಳನ್ನು ತಯಾರಿಸಿ, ಮಾ.೩೧ರೊಳಗೆ ಮಾಹಿತಿ ಒದಗಿಸಲು ಸೂಚಿಸಿದರು.
ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ಅಧಿಕಾರಿ ಕೊಟ್ರೇಶನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶರನ್ನು ಕುರಿತು ಹಾಸ್ಟಲ್‌ಗಳ ಬಗ್ಗೆ ಹಾಗೂ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಧಿಕಾರಿಗಳಾದ ರಾಘವೇಂದ್ರ ಮತ್ತು ಮುರಳಿಧರರನ್ನು ಕೆರೆಗಳ ಜಂಗಲ್ ಕಟಿಂಗ್ ಮತ್ತು ಅಭಿವೃದ್ದಿ ಬಗ್ಗೆ ಮತ್ತು ವ್ಯಾಪ್ತಿಯ ಪಿಡಿಒ ಹಾಗೂ ಕಾರ್ಯದರ್ಶಿಗಳಾದ ಎನ್.ಕೆ.ತಿಪ್ಪೇಸ್ವಾಮಿ, ಶಾಂತನಗೌಡ, ನಾಗಪ್ಪ, ಮಾಗಳದ ನಿಂಗಪ್ಪ ಹಾಗೂ ಕಾರ್ಯದರ್ಶಿ ಕೆ.ಕೊಟ್ರೇಶರನ್ನು ಗ್ರಾಮಗಳ ಸ್ವಚ್ಛತೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲು ಸೂಚಿಸಿದರು.ಜಿ.ಪಂ.ಮಾಜಿ ಸದಸ್ಯ ಬೋರವೆಲ್ ಗುರುಸಿದ್ದಪ್ಪ ಮಾತನಾಡಿ ಮೋರಗೆರೆಯಲ್ಲಿ ರೈತರಿಗೆ ಬೀಜ ಗೊಬ್ಬರ ನೀಡುವಂತಹ ಸೌಲಭ್ಯವಾಗಬೇಕು, ಬನ್ನಿಕಲ್ಲಿನಲ್ಲಿ ಆಸ್ಪತ್ರೆ ಕಟ್ಟಿಸಬೇಕು, ಸರ್ಕಾರಿ ಐಟಿಐ ಅಥವಾ ಡಿಪ್ಲೋಮ್ ಕಾಲೇಜ್ ತೆರೆಯಬೇಕು, ಎಸ್‌ಸಿ, ಎಸ್‌ಟಿ ಹಾಸ್ಟಲ್ ಬೇಕು ಎಂಬ ಬೇಡಿಕೆಯನ್ನಿಟ್ಟರು.
ತಹಸೀಲ್ದಾರ್ ಕವಿತಾ.ಆರ್, ತಾಪಂ ಇಒ ಪಿ.ವಿಶ್ವನಾಥ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗುರುಬಸವರಾಜ ಸೊನ್ನದ್ ಮತ್ತಿತರರು ಇದ್ದರು.